ಸರ್ವಧರ್ಮ ಗುರುಗಳ ಮಹತ್ವದ ಸಭೆ
ಮೈಸೂರು

ಸರ್ವಧರ್ಮ ಗುರುಗಳ ಮಹತ್ವದ ಸಭೆ

November 11, 2019

ನವದೆಹಲಿ,ನ.10- ಅಯೋಧ್ಯಾ ತೀರ್ಪು ಪ್ರಕಟ ಗೊಂಡು ಒಂದು ದಿನ ಕಳೆಯುವಷ್ಟರಲ್ಲೇ ಹೊಸ ತೊಂದು ಭಿನ್ನ ಪ್ರಯತ್ನ ನಡೆಸಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರ ನೇತೃತ್ವದಲ್ಲಿ ಎಲ್ಲಾ ಧರ್ಮಗಳ ಹಿರಿಯ ಗುರು-ಪ್ರಮುಖರ ಸಭೆ ಯನ್ನು ದೆಹಲಿಯಲ್ಲಿ ಭಾನುವಾರ ಆಯೋಜಿಸಿತ್ತು.

ಅಜಿತ್ ಧೋವಲ್ ಅವರ ದೆಹಲಿ ನಿವಾಸದಲ್ಲಿ ಭಾನುವಾರ ಬೆಳಿಗ್ಗೆ ಸಭೆ ನಡೆದಿದ್ದು, ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಸ್ವಾಮಿ ಚಿದಾನಂದ ಸರಸ್ವತಿ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀ ಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಬಾಬಾ ರಾಮ್ ದೇವ್, ಸ್ವಾಮಿ ಪರಮಾತ್ಮಾನಂದ, ಶಿಯಾ ಧರ್ಮ ಗುರು ಮೌಲಾನಾ ಕಲ್ಬೆ ಜವಾದ್ ಸೇರಿದಂತೆ ವಿವಿಧ ಧರ್ಮಗಳ ಗುರುಗಳು ಭಾಗಿಯಾಗಿದ್ದರು. ಅಂತರ್ ಧರ್ಮೀಯ ನಂಬಿಕೆಗಳು, ಧಾರ್ಮಿಕ ಸಮನ್ವಯತೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ವಿಚಾರ ವಿನಿಮಯ ನಡೆಯಿತು. ಸಭೆಯ ಬಳಿಕ ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಧಾರ್ಮಿಕ ಮುಖಂಡರು, ದೇಶದಲ್ಲಿ ಮಹತ್ವದ ಈ ಸಂದರ್ಭದಲ್ಲಿ ಧಾರ್ಮಿಕ ಸಮನ್ವಯತೆ ಸಾಧಿಸಲು ಈ ಸಭೆ ನೆರವಾಯಿತು.

ಸಮುದಾಯಗಳ ನಡುವೆ ಸಹೋದರತ್ವ ಹೊಂದಲು ಸಹಕಾರಿಯಾಯಿತು ಎಂದು ಅಭಿಪ್ರಾಯಪಟ್ಟರು. ದೇಶದ ಒಳ-ಹೊರಗೆ ಇರುವ ದೇಶ ವಿರೋಧಿ ಶಕ್ತಿಗಳು ಭಾರತ ದಲ್ಲಿ ಭಯ-ಆತಂಕದ ಸನ್ನಿವೇಶ ಸೃಷ್ಟಿಸಲು ಯತ್ನಿಸುತ್ತಿವೆ ಎಂದು ಕಳವಳ ವ್ಯಕ್ತಪಡಿ ಸಿದ ಧರ್ಮಗುರುಗಳು, ಅಯೋಧ್ಯಾ ತೀರ್ಪಿನಂತಹ ಮಹತ್ವದ ಹಾಗೂ ಸೂಕ್ಷ್ಮ ಸನ್ನಿವೇಶಗಳನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಕುತಂತ್ರ ನಡೆಸುತ್ತಿವೆ. ಇದು ರಾಷ್ಟ್ರದ ಹಿತಕ್ಕೆ ವಿರೋಧವಾದುದಾಗಿದೆ. ಈ ಹೊತ್ತಿನಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕೆಂದು ಸರ್ವಾನುಮತದಿಂದ ನಿರ್ಣಯಿಸಿದ್ದೇವೆ ಎಂದು ವಿವರಿಸಿದರು.

ಆರ್ಟಿಕಲ್ 370 ಮತ್ತು 35 ಎ ರದ್ದು ಮೂಲಕ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನವನ್ನು ಕೇಂದ್ರ ಸರ್ಕಾರ ತೆಗೆದುಹಾಕಿದ ಬಳಿಕ ಪರಿಸ್ಥಿತಿಯ ಲಾಭ ಪಡೆಯಲು ಪಾಕಿಸ್ತಾನ ಇನ್ನಿಲ್ಲದ ಕುತಂತ್ರ ನಡೆಸಿರುವುದು ತಿಳಿದ ವಿಚಾರವೇ ಆಗಿದೆ. ಪಾಕ್‍ನ ಕುತಂತ್ರಗಳು ಬೆಳಕಿಗೆ ಬಂದಿವೆ. ಇದೀಗ ಅಯೋಧ್ಯಾ ತೀರ್ಪು ಕೂಡಾ ದುಷ್ಕರ್ಮಿಗಳಿಗೆ ಅಸ್ತ್ರವಾಗಿ ಪರಿಣಮಿಸಬಾರದು ಎಂಬ ಕಾರಣದಿಂದಲೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್ ಅವರು ಸರ್ವ ಧರ್ಮ ನಾಯಕರೊಂದಿಗೆ ದೀರ್ಘ ಮಾತುಕತೆ ನಡೆಸಿದ್ದಾರೆ. ಮಾತುಕತೆ ಫಲಪ್ರದವಾಗಿದೆ. ದೇಶದಲ್ಲಿ ಕೋಮು ಸೌಹಾರ್ದ, ಶಾಂತಿ, ಸಹಬಾಳ್ವೆಯ ಹೊಸ ಅಧ್ಯಾಯ ಪ್ರಾರಂಭವಾಗಲಿ ಎನ್ನುವುದೇ ಎಲ್ಲರ ಆಶಯ ಎಂದರು.

Translate »