ವಿಜಯವಾಡ: ತೀವ್ರ ಕುತೂಹಲ ಕೆರಳಿಸಿದ್ದ ಕಾಂಗ್ರೆಸ್-ಟಿಡಿಪಿ ಮೈತ್ರಿ ಅಷ್ಟೇ ವೇಗದಲ್ಲಿ ಮುರಿದುಬಿದ್ದಿದೆ.ಮುಂಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾ ವಣೆಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ.
`ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಯಾಗಿದ್ದು, ಅವರಿಂದ ಮಾತ್ರ ಆಂಧ್ರಪ್ರದೇಶಕ್ಕೆ ವಿಶೇಷ ರಾಜ್ಯ ಸ್ಥಾನಮಾನ ನೀಡಲು ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದ ರಿಂದ ಆಂಧ್ರ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಆಂಧ್ರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎನ್.ರಘುವೀರ ರೆಡ್ಡಿ ಗುರು ವಾರ ಹೇಳಿದ್ದಾರೆ. ರಾಹುಲ್ ಗಾಂಧಿ ಅವರು ಪ್ರಧಾನಿ ಆದರೆ ಮಾತ್ರ ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡಲು ಸಾಧ್ಯ ಎಂದು ಆಂಧ್ರದ ಜನತೆ ನಂಬಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಯಾವುದೇ ಪ್ರಾದೇಶಿಕ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ವಿಧಾನ ಸಭೆ ಚುನಾವಣೆಯಲ್ಲಿ 175 ಮತ್ತು ಲೋಕಸಭೆ ಚುನಾವಣೆಯಲ್ಲಿ 25 ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಲಿದ್ದೇವೆ ಎಂದÀು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉಮನ್ ಚಾಂಡಿ ತಮಗೆ ತಿಳಿಸಿದ್ದಾರೆಂದು ರಘು ವೀರ್ ರೆಡ್ಡಿ ವಿವರಿಸಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಎನ್‍ಡಿಎ ವಿರುದ್ಧ ಸ್ಪರ್ಧಿಸುವ ಸಲುವಾಗಿ ತೆಲುಗು ದೇಶಂ ಪಕ್ಷದ(ಟಿಡಿಪಿ) ಅಧ್ಯಕ್ಷ, ಆಂಧ್ರ ಸಿಎಂ ಎನ್.ಚಂದ್ರಬಾಬು ನಾಯ್ಡು ಪ್ರಾದೇಶಿಕ ಪಕ್ಷಗಳ ಜೊತೆಗೂಡಿ ಮಹಾಘಟಬಂಧನ್ ರಚಿಸಲು ಮುಂದಾಗಿರುವುದು ಆಂಧ್ರದಲ್ಲಿ ಕಾಂಗ್ರೆಸ್-ಟಿಡಿಪಿ ಮೈತ್ರಿಗೆ ತೊಡಕಾಗಿದೆ ಎನ್ನಲಾಗಿದೆ.