ನಿಫಾ ವೈರಸ್‍ಗೆ ಕೇರಳದಲ್ಲಿ ಮತ್ತೊಂದು ಬಲಿ, ಸಾವಿನ ಸಂಖ್ಯೆ 13ಕ್ಕೆ ಏರಿಕೆ!
ದೇಶ-ವಿದೇಶ

ನಿಫಾ ವೈರಸ್‍ಗೆ ಕೇರಳದಲ್ಲಿ ಮತ್ತೊಂದು ಬಲಿ, ಸಾವಿನ ಸಂಖ್ಯೆ 13ಕ್ಕೆ ಏರಿಕೆ!

May 28, 2018

ಕೊಯಿಕ್ಕೋಡ್: ದೇವರನಾಡು ಕೇರಳ ದಲ್ಲಿ ಮಾರಣಾಂತಿಕ ನಿಫಾ ವೈರಾಣು ಸೋಂಕಿನ ಮರಣ ಮೃದಂಗ ಮುಂದುವರೆದಿದ್ದು, ಭಾನುವಾರ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಕೇರಳದ ಕೊಯಿಕ್ಕೋಡ್‍ನ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ನಿಫಾ ವೈರಾಣು ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ 26 ವರ್ಷದ ಅಬಿನ್ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಆ ಮೂಲಕ ನಿಫಾ ವೈರಾಣು ಸೋಂಕಿಗೆ ಬಲಿಯಾದವರ ಸಂಖ್ಯೆ 13ಕ್ಕೆ ಏರಿಕೆಯಾದಂತಾಗಿದೆ. ಇನ್ನು ಮೃತ ಅಬಿನ್, ಕೇರಳದ ಪಾಲಾಳಿ ಜಿಲ್ಲೆಯ ನಿವಾಸಿಯಾಗಿದ್ದು, ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ. ನಿನ್ನೆಯಷ್ಟೇ ಸರ್ಕಾರಿ ಆಸ್ಪತ್ರೆಯಲ್ಲಿ ಕಲ್ಯಾಣ ಎಂಬ ಮಹಿಳೆ ಇದೇ ನಿಫಾ ವೈರಾಣು ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದರು. ಇನ್ನು ಇದಕ್ಕೂ ಮೊದಲು ಸೋಂಕು ಪೀಡಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ನರ್ಸ್ ಲಿನಿ ಕೂಡ ಇದೇ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದು ಆತಂಕಕ್ಕೆ ಕಾರಣವಾಗಿದ್ದು ಮಾತ್ರವಲ್ಲದೇ ದೇಶಾದ್ಯಂತ ವ್ಯಾಪಕ ಚರ್ಚೆಗೂ ಕಾರಣವಾಗಿತ್ತು. ಅಂತೆಯೇ ಮೊದಲಿಗೆ ಸೋಂಕು ಕಾಣ ಸಿಕೊಂಡ ಕೊಯಿಕ್ಕೋಡ್‍ನ ಪೆರಂಬರಾದಲ್ಲಿ ಇನ್ನೂ 16 ಮಂದಿಯಲ್ಲಿ ಸೋಂಕು ಕಾಣ ಸಿಕೊಂಡಿದೆ. ಸೋಂಕು ಪೀಡಿತರೆಲ್ಲರ ರಕ್ತದ ಮಾದರಿಯನ್ನು ಪರೀಕ್ಷೆ ಮಾಡಲಾಗಿದ್ದು, ಸೋಂಕು ಪೀಡಿತರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ನಿಗೂಢವಾಗಿ ಹಬ್ಬುತ್ತಿರುವ ಈ ಮಾರಣಾಂತಿಕ ಸೋಂಕಿನ ಪ್ರಸರಣಕ್ಕೆ ಕಾರಣವಾದ ಅಂಶ ಯಾವುದು ಎಂದು ಈವರೆಗೂ ಪತ್ತೆಯಾಗಿಲ್ಲ.

Translate »