ಕಾರ್ಮಿಕ ವಿರೋಧಿ ಕೇಂದ್ರ ಸರ್ಕಾರ: ಶೇಷಾದ್ರಿ ಕಿಡಿ
ಮೈಸೂರು

ಕಾರ್ಮಿಕ ವಿರೋಧಿ ಕೇಂದ್ರ ಸರ್ಕಾರ: ಶೇಷಾದ್ರಿ ಕಿಡಿ

January 9, 2019

ಮೈಸೂರು: ಕೇಂದ್ರ ಸರ್ಕಾರ ಉದ್ಯಮಿಗಳಾದ ಅಂಬಾನಿ, ಅದಾನಿ, ಟಾಟಾ. ಬಿರ್ಲಾ ಸೇರಿದಂತೆ ಬೆರಳೆಣಿಕೆಯಷ್ಟು ಮಂದಿ ಮಾತ್ರ ಬಡವರೆಂದು ಭಾವಿಸಿರುವುದರಿಂದಲೇ ನಿರಂತರವಾಗಿ ಬಡ ಹಾಗೂ ಕಾರ್ಮಿಕ ವಿರೋಧಿ ನೀತಿ ಅನುಸರಿಸಲು ಕಾರಣ ಎಂದು ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಹೆಚ್.ಆರ್.ಶೇಷಾದ್ರಿ ಕಿಡಿಕಾರಿದ್ದಾರೆ.

ಭಾರತ್ ಬಂದ್ ಹಿನ್ನೆಲೆಯಲ್ಲಿ ಮೈಸೂರಿನ ಪುರಭವನದಲ್ಲಿ ಮಂಗಳವಾರ ನಡೆದ ಕಾರ್ಮಿಕರ ಸಮಾವೇಶದಲ್ಲಿ ಮಾತ ನಾಡಿದ ಅವರು, ನಿರಂತರವಾಗಿ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವ ಕೇಂದ್ರ ಸರ್ಕಾರಕ್ಕೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದುಡಿಯುವ ವರ್ಗದ ವರು ತಕ್ಕಪಾಠ ಕಲಿಸಲಿದ್ದಾರೆ ಎಂದರು.

ಉದ್ಯಮಿಗಳ ಒಡೆತನದ ಕಂಪನಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ವರ್ತಿಸುತ್ತಿದ್ದಾರೆ. ಉದ್ಯಮಿಗಳು ಸಾಲ ಮರುಪಾವತಿಸದಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರವೇ ಕಾರ್ಪೊರೇಟ್ ಕಂಪನಿಗಳ ಸಾಲ ಮನ್ನಾ ಮಾಡಿದೆ. ಆದರೆ, ರೈತರ ಸಾಲ ಮನ್ನಾ ವಿಚಾರ ಹಾಗೂ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವ ವಿಚಾರದಲ್ಲಿ ಮಾತ್ರ ಸರ್ಕಾರ ಇಂಥ ಉದಾರ ನೀತಿ ಅನುಸರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಹುರಾಷ್ಟ್ರೀಯ ಕಂಪನಿಗಳ ಪರವಾಗಿ ಕೇಂದ್ರ ಸರ್ಕಾರದ ನೀತಿಗಳಿವೆ. ಕಾರ್ಮಿ ಕರ ಹಿತವನ್ನು ಬದಿಗೊತ್ತಿ ಕಾರ್ಮಿಕ ಕಾನೂನನ್ನು ತಿದ್ದುಪಡಿ ಮಾಡುವ ಮೂಲಕ ಬಹುರಾಷ್ಟ್ರೀಯ ಕಂಪನಿಗಳಿಗೆ ಬಹುಪರಾಕ್ ಹಾಕುತ್ತಿದೆ. ಇದರಿಂದ ಕಾರ್ಮಿಕರು ಮತ್ತಷ್ಟು ಶೋಷಣೆಗೆ ಗುರಿ ಯಾಗುತ್ತಿದ್ದಾರೆ. ಸರ್ಕಾರ ಸಾರ್ವಜನಿಕ ವಲಯದ ಬ್ಯಾಂಕ್‍ಗಳ ವಿಲೀನ ಹಾಗೂ ಸಾರ್ವಜನಿಕ ವಲಯದ ಕೈಗಾರಿಕೆಗಳನ್ನು ಖಾಸಗೀಕರಣ ಮಾಡುವ ಮೂಲಕ ಕಾರ್ಮಿಕರಲ್ಲಿ ಉದ್ಯೋಗದ ಅಭದ್ರತೆ ಸೃಷ್ಟಿಸಿದೆ. ಹೆಚ್‍ಎಎಲ್, ಹೆಚ್‍ಎಂಟಿ, ಬೆಮೆಲ್‍ನಂತಹ ಉತ್ತಮ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ನಾಶ ಮಾಡಲು ಹೊರಟಿದೆ ಎಂದು ಆರೋಪಿಸಿದರು.

ಕಳೆದ ನಾಲ್ಕು ವರ್ಷ ಎಂಟು ತಿಂಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ಕಾರ್ಮಿ ಕರ ಪರವಾದ ಒಂದು ತೀರ್ಮಾನವನ್ನೂ ಕೈಗೊಂಡಿಲ್ಲ. 70ರ ದಶಕದಲ್ಲಿ ಅಂದಿನ ರೂಪಾಯಿ ಬೆಲೆ ಆಧಾರದ ಮೇಲೆ ಗ್ರಾಚ್ಯುಟಿ ಕಾಯ್ದೆ ರೂಪಿಸಲಾಗಿತ್ತು. ಅದನ್ನು ಇಂದಿನ ಬೆಲೆಗೆ ಅನುಗುಣವಾಗಿ ಪರಿಷ್ಕರಣೆ ಮಾಡುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಮೇಟಿ ಮಾತನಾಡಿ, ಬಂಡವಾಳಶಾಹಿಗಳ ಪರವಾಗಿ ಚರ್ಚೆ ನಡೆಸಲು ಸಮಯವನ್ನು ಮೀಸಲಿಡುವ ಕೇಂದ್ರ ಸರ್ಕಾರ ಕಾರ್ಮಿಕರ ಸಮಸ್ಯೆ ಆಲಿಸುವ ಸೌಜನ್ಯ ತೋರುತ್ತಿಲ್ಲ. ಬದಲಾಗಿ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ. ಸರ್ಕಾರ ತನ್ನ ನಿಲುವು ಬದಲಾಯಿಸಿಕೊಳ್ಳದೆ ಇದ್ದರೆ ತೀವ್ರ ಸ್ವರೂಪದ ಹೋರಾಟ ನಡೆಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಿವಿಧ ಕಾರ್ಖಾನೆಗಳ ನೌಕರರು, ಅಂಗನವಾಡಿ, ಆಶಾ ಕಾರ್ಯಕರ್ತೆ ಯರು, ಬಿಸಿಯೂಟ ತಯಾರಕರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಸಮಾವೇಶದಲ್ಲಿ ಕಾರ್ಮಿಕ ಮುಖಂಡ ರಾದ ಬಾಲಾಜಿ ರಾವ್, ಎಚ್.ಬಿ. ರಾಮ ಕೃಷ್ಣ, ಪುಟ್ಟಯ್ಯ, ಬಸವರಾಜು, ಜಯ ರಾಮು, ಅನಿಲ ಕುಮಾರ್, ವಸಂತ ಕುಮಾರಿ, ಬಾಲಾಜಿ ಸಿಂಗ್, ಯಶೋಧರ್, ಬಿ.ಜಗನ್ನಾಥ್ ಇತರರು ಇದ್ದರು.

Translate »