ಕೆರೆಗಳನ್ನು ತುಂಬಿಸಲು 10 ಕೋಟಿ ಯೋಜನೆಗೆ ಅನುಮೋದನೆ
ಮೈಸೂರು

ಕೆರೆಗಳನ್ನು ತುಂಬಿಸಲು 10 ಕೋಟಿ ಯೋಜನೆಗೆ ಅನುಮೋದನೆ

November 18, 2018

ತಿ.ನರಸೀಪುರ: ರೈತರ ಕೃಷಿ ಭೂಮಿಗೆ ಹೆಚ್ಚಿನ ನೀರಾವರಿ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಕೆರೆಗಳಿಗೆ ನೀರು ತುಂಬಿಸುವ 10 ಕೋಟಿ ರೂ.ಗಳ ಯೋಜನೆಯೊಂದನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದೆ ಎಂದು ಶಾಸಕ ಎಂ.ಅಶ್ವಿನ್ ಕುಮಾರ್ ಹೇಳಿದರು. ಪಟ್ಟಣದ ನಂಜನಗೂಡು ರಸ್ತೆಯಲ್ಲಿರುವ ಎಂ.ಮಹದೇವಪ್ಪ ಸ್ಮಾರಕ ಭವನದಲ್ಲಿ ಇಂದು ನಡೆದ 38ನೇ ವರ್ಷದ ಹುಟ್ಟುಹಬ್ಬ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಕೆರೆಗಳಿಗೆ ನೀರು ತುಂಬಿಸುವ ಮಹತ್ವದ ಯೋಜನೆಯನ್ನು 10 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ರೂಪಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರಿಂದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ಯೋಜನೆ ಅನುಷ್ಠಾನಗೊಂಡರೆ ನಾಲೆಗಳಿಂದ ಕೆರೆಗಳಿಗೆ ನೇರವಾಗಿ ನೀರು ತುಂಬಿಸಲು ನಾಲೆಗಳು ನಿರ್ಮಾಣ ಮಾಡಲಾಗುತ್ತದೆ. ರಾಜ್ಯದಲ್ಲಿ ರೈತಪರ ಸರ್ಕಾರ ಆಡಳಿತವನ್ನು ನಡೆಸುತ್ತಿರುವುದರಿಂದ ಯೋಜನೆ ರೂಪಿಸುವಾಗ ರೈತರಿಗೆ ಮೊದಲ ಆದ್ಯತೆ ನೀಡಲಾಗು ವುದು ಎಂದು ತಿಳಿಸಿದರು. ವಾಟಾಳು ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಜಿಪಂ ಸದಸ್ಯ ಎಸ್.ವಿ.ಜಯಪಾಲ ಭರಣಿ, ಮಾಜಿ ಸದಸ್ಯ ಎಂ.ಆರ್.ಸೋಮಣ್ಣ, ಎಸ್ಸಿ/ಎಸ್ಟಿ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಹೊಸಪುರ ಕೆ.ಮಲ್ಲು, ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಎನ್.ಪ್ರಭುಸ್ವಾಮಿ ಇನ್ನಿತರರಿದ್ದರು.

Translate »