ಸೇನೆಗೇ ಸವಾಲಾದ ಸೈನಿಕರ ನಾಡು
ಕೊಡಗು, ಮೈಸೂರು

ಸೇನೆಗೇ ಸವಾಲಾದ ಸೈನಿಕರ ನಾಡು

August 20, 2018

ಮಡಿಕೇರಿ: ಭಾರತೀಯ ಸೇನೆಗೆ ಹಲವಾರು ಸೈನಿಕರು ಹಾಗೂ ಸೇನಾಧಿಕಾರಿಗಳನ್ನು ಕೊಡುಗೆ ನೀಡಿದ ಸೈನಿಕರ ನಾಡು ಕೊಡಗು ಇದೀಗ ಸೇನೆಗೇ ಸವಾಲಾಗಿ ಪರಿಣಮಿಸಿದೆ.

ಕೊಡಗಿನಲ್ಲಿ ಸುರಿದ ಭಾರೀ ಮಳೆಗೆ ಪ್ರವಾಹ ವೇರ್ಪಟ್ಟು ಮನೆ ಹಾಗೂ ಗುಡ್ಡಗಳು ಕುಸಿದ ಪರಿಣಾಮ ಪ್ರಾಣ ಉಳಿಸಿಕೊಳ್ಳಲು ಬೆಟ್ಟವೇರಿ ಕಳೆದ 4 ದಿನಗಳಿಂದ ಕುಳಿತು ರಕ್ಷಣೆಗಾಗಿ ಅಂಗಲಾಚುತ್ತಿರುವ ಜನರ ರಕ್ಷಿಸಲು ಕೊಡಗಿಗೆ ಬಂದಿರುವ ಸೇನಾ ಪಡೆಗೆ ಇಲ್ಲಿನ ಭೌಗೋಳಿಕ ಪರಿಸ್ಥಿತಿ ತಿಳಿಯದೇ ಭಾರೀ ಸವಾಲು ಎದುರಾಗಿದೆ.

ಇಂದೂ ಕೂಡ ಮಳೆ ಸುರಿದ ಪರಿಣಾಮ ಉಂಟಾದ ಹವಾಮಾನ ವೈಪರೀತ್ಯದ ಕಾರಣ ಸೇನೆಯ ಹೆಲಿಕಾಪ್ಟರ್ಗಳ ಬಳಕೆ ಸಾಧ್ಯವಾಗಿಲ್ಲ. ಇದರಿಂದಾಗಿ ಬೆಟ್ಟವೇರಿ ಕುಳಿತಿ ರುವ ನೂರಾರು ಸಂತ್ರಸ್ತರ ನರಕ ಯಾತನೆ ಮುಂದುವರೆದಿದೆ. ಸೇನಾ ಪಡೆಗಳು ಇಂದು ಮುಕ್ಕೋಡ್ಲು, ಮಣ್ಣಂಗೇರಿ, ದೇವಸ್ತೂರು, ಪಾಲೂರು, ಮಾದಾಪುರ ಮುಂತಾದೆಡೆ ನೂರಾರು ಜನರನ್ನು ಪ್ರಾಣ ಒತ್ತೆ ಇಟ್ಟು ರಕ್ಷಿಸಿದೆ. ರಸ್ತೆಗಳು ಕುಸಿದಿರುವ ಕಾರಣ ಸೇನೆಯ ಟ್ರಕ್‍ಗಳು ಸಂಚರಿಸಲು ಅಸಾಧ್ಯವಾಗಿದ್ದು, ಯೋಧರು ಹತ್ತಾರು ಕಿ.ಮೀ. ದೂರ ಕಾಲ್ನಡಿಗೆಯಲ್ಲೇ ತೆರಳಿ ಜನರನ್ನು ರಕ್ಷಿಸಬೇಕಾದ ಅನಿ ವಾರ್ಯತೆ ಬಂದೊದಗಿತು. ಹಟ್ಟಿಹೊಳೆಯಲ್ಲಿ ಹುಚ್ಚು ಪ್ರವಾಹ ಹರಿಯುತ್ತಿರುವ ಕಾರಣ ಒಂದು ಬದಿಯಿಂದ ಮತ್ತೊಂದು ಬದಿಯ ಮರಗಳಿಗೆ ಹಗ್ಗಗಳನ್ನು ಕಟ್ಟಿ ಅದರ ಮೂಲಕ ಸಂತ್ರಸ್ತರನ್ನು ತಲುಪಿದ ಯೋಧರು, ಸಂತ್ರಸ್ತರನ್ನು ಹೊತ್ತುಕೊಂಡೇ ಹಗ್ಗದಲ್ಲಿ ನೇತಾಡುತ್ತಾ ಮತ್ತೊಂದು ಬದಿಗೆ ಬಂದು ದಡ ಸೇರಿಸುತ್ತಿದ್ದುದು ರೋಮಾಂಚನಕಾರಿ ಮಾತ್ರವಲ್ಲದೇ, ಅಪಾಯಕಾರಿ ಕಾರ್ಯಾ ಚರಣೆಯೂ ಆಗಿತ್ತು. ನಾಲ್ಕೈದು ದಿನದಿಂದ ಸರಿಯಾಗಿ ಊಟವೂ ಇಲ್ಲದೇ ಬಳಲಿರುವ ವೃದ್ಧರನ್ನು ಯೋಧರು ಹೆಗಲ ಮೇಲೆ ಕೂರಿಸಿಕೊಂಡು ಹತ್ತಾರು ಕಿ.ಮೀ. ಕಾಲ್ನಡಿಗೆ ಯಲ್ಲೇ ಬಂದು ಸುರಕ್ಷಿತ ಸ್ಥಳಕ್ಕೆ ಸೇರಿಸುತ್ತಿದ್ದ ದೃಶ್ಯ ಸರ್ವೇಸಾಮಾನ್ಯವಾಗಿತ್ತು. ಪರ ಊರುಗಳಿಂದ ಬಂದಿರುವ ಯೋಧರಿಗೆ ಕೊಡಗಿನ ಭೌಗೋಳಿಕ ಮಾಹಿತಿ ಇಲ್ಲದ ಕಾರಣ ಸ್ಥಳೀಯ ಯುವಕರು ಯೋಧರಿಗೆ ಮಾರ್ಗದರ್ಶನ ನೀಡಬೇಕಾಗಿತ್ತು.

ಸ್ಥಳೀಯರ ಸಹಕಾರ ಪಡೆದು ಸಂಕಷ್ಟದಲ್ಲಿ ಸಿಲುಕಿರುವ ನಿರಾಶ್ರಿತರನ್ನು ತಲುಪಿದ ಯೋಧರು, ಅವರನ್ನು ಸುರಕ್ಷಿತವಾಗಿ ಕರೆತಂದು ದಡ ಸೇರಿಸಿದರೆ, ಮತ್ತೊಂದು ತಂಡ ನಿರಾಶ್ರಿತರನ್ನು ಪರಿಹಾರ ಕೇಂದ್ರಗಳಿಗೆ ಸಾಗಿಸುತ್ತಿತ್ತು.

ಮೊದಲ ಬಾರಿಗೆ ವಾಯು ಸೇನೆಯ ಹೆಲಿಕಾಪ್ಟರ್‌ನಿಂದ ಅಗತ್ಯ ವಸ್ತುಗಳ ರವಾನೆ

ಭಾರತೀಯ ವಾಯುಪಡೆ ಹಾಗೂ ಭೂಸೇನೆಯ ಯೋಧರು ಸಂಕಷ್ಟದಲ್ಲಿರುವ ಕೊಡಗಿನ ಜನರನ್ನು ರಕ್ಷಣೆ ಮಾಡುವುದಕ್ಕೆ ಧಾವಿಸಿದರಾದರೂ, ಬಿರುಗಾಳಿ ಮತ್ತು ಪ್ರತಿಕೂಲ ಹವಾಮಾನದಿಂದ ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ನಡೆಸಲು ಸಾಧ್ಯವಾಗಿರಲಿಲ್ಲ. ನಿನ್ನೆ ಮೈಸೂರಿನಿಂದ ಒಂದು ಲಘು ವಿಮಾನದಲ್ಲಿ ಅಗತ್ಯ ವಸ್ತುಗಳನ್ನು ಮಡಿಕೇರಿಗೆ ರವಾನಿಸಿ ಪುನರ್ ವಸತಿ ಕೇಂದ್ರಕ್ಕೆ ನೀಡುವುದಕ್ಕೆ ಉದ್ದೇಶಿಸಲಾಗಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಮಡಿಕೇರಿಯತ್ತ ತೆರಳಿದ್ದ ವಿಮಾನ ಕೇರಳದತ್ತ ಪ್ರಯಾಣ ಬೆಳೆಸಿ ಅಲ್ಲಿನ ಪುನರ್ ವಸತಿ ಕೇಂದ್ರಕ್ಕೆ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಿತ್ತು. ಆದರೆ ಮೈಸೂರು ನಗರ ಪಾಲಿಕೆ ಸಿಬ್ಬಂದಿ ಪುರಭವನದಲ್ಲಿ ಸಂಗ್ರಹವಾದ ವಸ್ತುಗಳನ್ನು ಅಚ್ಚುಕಟ್ಟಾಗಿ ಪ್ಯಾಕ್ ಮಾಡಿದ್ದರಿಂದ ಇಂದು ಬೆಳಿಗ್ಗೆ ವಿವಿಧ ವಸ್ತುಗಳುಳ್ಳ 80 ಕೆ.ಜಿ. ತೂಕದ ಆಹಾರ ಪೊಟ್ಟಣಗಳುಳ್ಳ ಚೀಲವನ್ನು ವಾಯುಪಡೆಯ ಸಿಬ್ಬಂದಿಗಳು ಮಡಿಕೇರಿಯ ಪುನರ್ ವಸತಿ ಕೇಂದ್ರಕ್ಕೆ ಆಗಸದಿಂದ ಯಶಸ್ವಿಯಾಗಿ ಕೆಳಗಿಳಿಸಿದೆ.

ಕೊಡಗಿನ ಜಲಾಘಾತ; ಸಂಕಷ್ಟದಲ್ಲಿ 50 ಸಾವಿರ ಮಂದಿ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಉಂಟಾಗಿರುವ ಪ್ರವಾಹದ ಪರಿಣಾಮ 50 ಸಾವಿರಕ್ಕೂ ಅಧಿಕ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಮಾರು 4 ಸಾವಿರ ಮಂದಿ ತಮ್ಮ ಗ್ರಾಮಗಳ ಸಂಪರ್ಕ ಕಳೆದುಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 41 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ಅಲ್ಲಿ ಒಟ್ಟು 5818 ಮಂದಿ ಆಶ್ರಯ ಪಡೆದಿದ್ದಾರೆ. ಭಾರತೀಯ ಸೇನಾ ಪಡೆ ಮುಕ್ಕೋಡ್ಲು ಗ್ರಾಮದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರನ್ನು ರಕ್ಷಿಸುವ ಕಾರ್ಯ ಕೈಗೊಂಡಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ಜೋಡುಪಾಲ ಮತ್ತು 2ನೇ ಮಣ್ಣಂಗೇರಿಯಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿತ್ತು. ಭಾರತೀಯ ನೌಕಾದಳವು ದೇವಸ್ತೂರು ಮತ್ತು ಕಾಲೂರು ಗ್ರಾಮಗಳಲ್ಲಿ ಸಂತ್ರಸ್ತರ ರಕ್ಷಣೆಗೆ ನಿಂತಿತ್ತು. ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ ತಂಡವು ತಂತಿಪಾಲದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಇಂದು ನಡೆದ ಸೇನಾ ಕಾರ್ಯಾಚರಣೆಯಲ್ಲಿ ಸುಮಾರು 500 ಮಂದಿಯನ್ನು ರಕ್ಷಿಸಲಾಗಿದೆ. ಮುಕ್ಕೋಡ್ಲುವಿನ ವ್ಯಾಲಿಡ್ ವ್ಯೂ ರೆಸಾರ್ಟ್‍ನಲ್ಲಿ ಆಶ್ರಯ ಪಡೆದಿದ್ದ ಸುಮಾರು 90 ಮಂದಿ ಗ್ರಾಮಸ್ಥರನ್ನು ಡೋಗ್ರಾ ರೆಜಿಮೆಂಟ್ ಸೈನಿಕರು ರಕ್ಷಿಸಿದ್ದಾರೆ. ದೇವಸ್ತೂರು ಗ್ರಾಮದಲ್ಲಿ ಮನೆ ತೊರೆಯಲು ನಿರಾಕರಿಸಿದ್ದ ವೃದ್ಧರೊಬ್ಬರನ್ನು ಮನವೊಲಿಸಿ ರಕ್ಷಿಸಲಾಗಿದೆ.

Translate »