ಮಂಗಳೂರು ಪೊಲೀಸರೊಂದಿಗೆ ಒಡನಾಡಿ ಕಾರ್ಯಾಚರಣೆ ವೇಶ್ಯಾವಾಟಿಕೆ ಅಡ್ಡೆಯಲ್ಲಿ ಬಂಧಿಗಳಾಗಿದ್ದ 6 ಬಾಂಗ್ಲಾ ಯುವತಿಯರ ರಕ್ಷಣೆ
ಮೈಸೂರು

ಮಂಗಳೂರು ಪೊಲೀಸರೊಂದಿಗೆ ಒಡನಾಡಿ ಕಾರ್ಯಾಚರಣೆ ವೇಶ್ಯಾವಾಟಿಕೆ ಅಡ್ಡೆಯಲ್ಲಿ ಬಂಧಿಗಳಾಗಿದ್ದ 6 ಬಾಂಗ್ಲಾ ಯುವತಿಯರ ರಕ್ಷಣೆ

June 23, 2018

ಮೈಸೂರು: ಮೈಸೂರಿನ ಒಡನಾಡಿ ಸೇವಾ ಸಂಸ್ಥೆ ಮತ್ತು ಮಂಗಳೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಮಂಗಳೂರಿನ ವೇಶ್ಯಾವಾಟಿಕೆ ಅಡ್ಡೆಯಲ್ಲಿ ಬಂಧಿತರಾಗಿದ್ದ ಬಾಂಗ್ಲಾದೇಶದ 6 ಯುವತಿಯರನ್ನು ರಕ್ಷಿಸಿದ್ದಾರೆ.

ಮಂಗಳೂರಿನ ಪಂಪ್ ವೆಲ್ ಬಳಿ ಇರುವ ಅನ್ನಪೂರ್ಣ ಲಾಡ್ಜ್ (ಗ್ರ್ಯಾಂಡ್ ರೀಜೆನ್ಸಿ) ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಒಡನಾಡಿ ಸೇವಾ ಸಂಸ್ಥೆಯ ಕಾರ್ಯಕರ್ತರು ಇಂದು ಮುಂಜಾನೆಯಿಂದಲೇ ಲಾಡ್ಜ್ ಸಮೀಪ ಬೀಡು ಬಿಟ್ಟು ದಾಳಿಗೆ ಕಾರ್ಯತಂತ್ರ ರೂಪಿಸಿದರು.

ಮಂಗಳೂರು ಪೊಲೀಸರು ಮತ್ತು ಮಕ್ಕಳ ಸಹಾಯವಾಣಿ ಅಧಿಕಾರಿಗಳೊಂದಿಗೆ ಸೂಕ್ತ ಸಮಯದಲ್ಲಿ ಲಾಡ್ಜ್ ಮೇಲೆ ದಾಳಿ ನಡೆಸಲಾಯಿತು. ಲಾಡ್ಜ್‍ನ ಕೊಠಡಿಯ ಶೌಚಾಲಯವೊಂದರಲ್ಲಿ ಸುಮಾರು ಒಂದು ಅಡಿಯಷ್ಟು ಗುಪ್ತ ಮಾರ್ಗವೊಂದಿದ್ದು, ಅದರ ಮೂಲಕ ಪ್ರವೇಶಿಸಬಹುದಾಗಿದ್ದ ರಹಸ್ಯ ಕೊಠಡಿಯಲ್ಲಿ ಕೂಡಿ ಹಾಕಲಾಗಿದ್ದ ಬಾಂಗ್ಲಾದೇಶದ 6 ಮಂದಿ ಯುವತಿಯರನ್ನು ರಕ್ಷಿಸಿದರು.

ಈ ವೇಳೆ ಹೈಟೆಕ್ ವೇಶ್ಯಾವಾಟಿಕೆ ಜಾಲದ ಕಿಂಗ್‍ಪಿನ್ ಶಿವರಾಮ ಪೂಜಾರಿ ಎಂಬಾತ ಪರಾರಿಯಾಗಿದ್ದು, ಲಾಡ್ಜ್‍ನಲ್ಲಿದ್ದ 15 ಮಂದಿ ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ. ರಕ್ಷಿಸಲ್ಪಟ್ಟ ಯುವತಿಯರ ಬಳಿ ಇದ್ದ ಬಾಂಗ್ಲಾ ಕರೆನ್ಸಿ ಹಾಗೂ ಐಡಿ ಕಾರ್ಡ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಮಂಗಳೂರು ಪೊಲೀಸರೊಂದಿಗೆ ಒಡನಾಡಿ ಸೇವಾ ಸಂಸ್ಥೆಯ ಮುಖ್ಯಸ್ಥರಾದ ಸ್ಟ್ಯಾನ್ಲಿ, ಪರಶು, ಕಾರ್ಯಕರ್ತರುಗಳಾದ ಪ್ರದೀಪ್, ನಗೀನಾ ಬೇಗಂ ಮತ್ತು ಪೃಥ್ವಿರಾಜ್ ಭಾಗವಹಿಸಿದ್ದರು. ಈ ಯಶಸ್ವಿ ಕಾರ್ಯಾಚರಣೆಗೆ ಸಹಕರಿಸಿದ ಮಂಗಳೂರಿನ ಡಿಸಿಪಿ ಉಮಾ ಪ್ರಶಾಂತ್, ಎಸಿಪಿ ಕೆ.ಟಿ.ನಾಯಕ್ ಮತ್ತು ಮಕ್ಕಳ ಸಹಾಯವಾಣಿ ಮುಖ್ಯಸ್ಥರಾದ ರೆನ್ನಿ ಡಿಸೋಜ ಹಾಗೂ ತಂಡಕ್ಕೆ ಒಡನಾಡಿ ಸೇವಾ ಸಂಸ್ಥೆ ಕೃತಜ್ಞತೆ ಸಲ್ಲಿಸಿದೆ.

Translate »