ಜು.20ರಂದು ಮೊದಲ ಆಷಾಢ ಶುಕ್ರವಾರ ಚಾಮುಂಡಿಬೆಟ್ಟದಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳಲು ಡಿಸಿ ಸೂಚನೆ
ಮೈಸೂರು

ಜು.20ರಂದು ಮೊದಲ ಆಷಾಢ ಶುಕ್ರವಾರ ಚಾಮುಂಡಿಬೆಟ್ಟದಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳಲು ಡಿಸಿ ಸೂಚನೆ

June 23, 2018

ಮೈಸೂರು: 2018ರ ಆಷಾಢ ಶುಕ್ರವಾರಗಳಂದು ಚಾಮುಂಡಿಬೆಟ್ಟದಲ್ಲಿ ಭಕ್ತಾದಿಗಳಿಗೆ ಪೂಜಾ ಸೌಲಭ್ಯಗಳನ್ನು ಒದಗಿಸಲು ಸರ್ವ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಅಧಿಕಾರಿಗಳಿಗೆ ಇಂದಿಲ್ಲಿ ಸೂಚನೆ ನೀಡಿದ್ದಾರೆ.

ಆಷಾಢ ಶುಕ್ರವಾರಗಳಲ್ಲಿ, ನಾಡಿನ ಅದಿ ದೇವತೆ ಚಾಮುಂಡೇಶ್ವರಿ ಅಮ್ಮನವರ ಜನ್ಮೋತ್ಸವ ಧಾರ್ಮಿಕ ಕಾರ್ಯಕ್ರಮಗಳಿಗೆ ಆಗಮಿಸುವ ಭಕ್ತಾದಿಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ಸಂಬಂಧ ಇಂದು ಚಾಮುಂಡಿಬೆಟ್ಟದ ದಾಸೋಹ ಭವನದಲ್ಲಿ ಪೂರ್ವಭಾವಿ ಸಭೆ ನಡೆಸಿದ ಅವರು, ನಿಗದಿತ ಸಮಯದೊಳಗಾಗಿ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿದರು.
ಜುಲೈ 20ರಂದು ಮೊದಲ ಆಷಾಢ ಶುಕ್ರವಾರ, 27 ಎರಡನೇ, ಆಗಸ್ಟ್ 3 ಮೂರನೇ ಹಾಗೂ ಆಗಸ್ಟ್ 10ರಂದು ಕಡೇ ಆಷಾಢ ಶುಕ್ರವಾರಗಳಾಗಿದ್ದು, ಈ ಬಾರಿ ಅತೀ ಹೆಚ್ಚು ಭಕ್ತಾದಿಗಳು ಚಾಮುಂಡಿಬೆಟ್ಟಕ್ಕೆ ಬರುವ ನಿರೀಕ್ಷೆ ಇರುವುದರಿಂದ ಅಗತ್ಯವಿರುವ ಎಲ್ಲಾ ಅನುಕೂಲ ಮಾಡಿಕೊಡಬೇಕೆಂದು ಸೂಚನೆ ನೀಡಿದರು.

ಆಷಾಢ ಶುಕ್ರವಾರಗಳಂದು ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕ ವಾಹನಗಳ ಪ್ರವೇಶ ನಿಷೇಧಿಸಿ, ಮೈಸೂರಿನ ಲಲಿತ ಮಹಲ್ ಹೆಲಿಪ್ಯಾಡ್‍ನಿಂದ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಉಚಿತ ಪ್ರಯಾಣದ ಜೊತೆಗೆ ಲಲಿತ ಮಹಲ್ ಹೆಲಿಪ್ಯಾಡ್‍ನಲ್ಲಿ ಸಾರ್ವಜನಿಕರ ವಾಹನಗಳ ನಿಲುಗಡೆ ಹಾಗೂ ಭದ್ರತೆಗೆ ಸೂಕ್ತ ವ್ಯವಸ್ಥೆ ಮಾಡಬೇಕೆಂದೂ ಅಭಿರಾಮ್ ಜಿ.ಶಂಕರ್ ಅವರು ತಿಳಿಸಿದರು.
ನೂಕು-ನುಗ್ಗಲು ಉಂಟಾದಲ್ಲಿ ಪಾರಾಗಲು ಎಕ್ಸಿಟ್‍ಗಳನ್ನು ಬ್ಯಾರಿಕೇಡ್‍ಗಳಲ್ಲಿ ಮಾಡಬೇಕು. ಚಾಮುಂಡಿಬೆಟ್ಟದಲ್ಲಿ ಸೂಕ್ತ ಭದ್ರತೆ, ಆರೋಗ್ಯ, ಕುಡಿಯುವ ನೀರು, ಪ್ಯಾರಾ ಮೆಡಿಕಲ್ ತಂಡ, ಆಂಬುಲೆನ್ಸ್‍ಗಳು, ಅಗ್ನಿಶಾಮಕ ದಳದ ಸಿಬ್ಬಂದಿಗಳನ್ನು ಒದಗಿಸುವಂತೆಯೂ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮೆಟ್ಟಿಲು ಹತ್ತುವ ಪ್ರಯಾಣಿಕರಿಗಾಗಿ ಅಲ್ಲಲ್ಲಿ ಸೂಚನಾ ಫಲಕ ಹಾಕಬೇಕು. ವಿದ್ಯುತ್ ಕಾಮಗಾರಿಗಳನ್ನು ತಜ್ಞ ಎಲೆಕ್ಟ್ರಿಷಿಯನ್‍ಗಳಿಂದ ತಪಾಸಣೆ ನಡೆಸಿ ಅಪಾಯ ಸಂಭವಿಸದಂತೆ ಮುಂಜಾಗ್ರತೆ ವಹಿಸಬೇಕು. ಸ್ವಚ್ಛತೆ, ಶೌಚಾಲಯಗಳಿಗೆ ಹೆಚ್ಚು ಒತ್ತು ನೀಡುವಂತೆ ಸಲಹೆಯಿತ್ತಿದ್ದಾರೆ.

ಭಕ್ತಾದಿಗಳು ವಿತರಿಸುವ ಪ್ರಸಾದವನ್ನು ಪರೀಕ್ಷಿಸಬೇಕು. ದಾಸೋಹ ಭವನದಲ್ಲೂ ಊಟಕ್ಕೆ ಸರ್ವ ಸಿದ್ಧತೆ ಮಾಡಿ ಪ್ರತಿಯೊಬ್ಬರಿಗೂ ಪ್ರಸಾದ ಲಭ್ಯವಾಗುವಂತೆ ನೋಡಿಕೊಳ್ಳಿ. ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಯಂತ್ರಿಸಲು ಅಗತ್ಯ ಕ್ರಮ ವಹಿಸುವಂತೆಯೂ ಜಿಲ್ಲಾಧಿಕಾರಿಗಳು ಇದೇ ವೇಳೆ ಸೂಚನೆ ನೀಡಿದರು.

ಮತ್ತಷ್ಟು ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಮೊಬೈಲ್, ಚಿನ್ನಾಭರಣ ಕಳವು, ಅಹಿತಕರ ಘಟನೆಗಳಾಗದಂತೆ ನೋಡಿಕೊಂಡು ಎಲ್ಲಿಯೂ ಟ್ರಾಫಿಕ್ ಜಾಮ್ ಆಗದಂತೆ ಎಚ್ಚರ ವಹಿಸಬೇಕು. ಪೊಲೀಸ್ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳ ಅಧಿಕಾರಿಗಳೂ ಆಷಾಢ ಶುಕ್ರವಾರಗಳಂದು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಬೇಕೆಂದೂ ಅವರು ನಿರ್ದೇಶನ ನೀಡಿದರು.

ಎರಡನೇ ಆಷಾಢ ಶುಕ್ರವಾರವಾದ ಜುಲೈ 27ರಂದು ಗ್ರಹಣವಾದ ಕಾರಣ ಅಂದು ರಾತ್ರಿ 9 ಗಂಟೆಯಿಂದ ದೇವಿಗೆ ಅಭಿಷೇಕವಿದೆ. ಹಾಗಾಗಿ ರಾತ್ರಿ 9 ಗಂಟೆಗೆ ಚಾಮುಂಡೇಶ್ವರಿ ದರ್ಶನಕ್ಕೆ ತೆರೆ ಬೀಳಲಿದೆ ಎಂಬುದನ್ನು ಭಕ್ತಾದಿಗಳಿಗೆ ಮಾಧ್ಯಮಗಳ ಮೂಲಕ ಮನವರಿಕೆ ಮಾಡಿಕೊಡಬೇಕು. 3ನೇ ಆಷಾಢ ಶುಕ್ರವಾರದಂದು ಅಮ್ಮನವರ ವರ್ಧಂತಿಯೂ ಇರುವುದರಿಂದ ಭಕ್ತರ ಜಂಗುಳಿ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಅಭಿರಾಮ್ ಜಿ.ಶಂಕರ್ ತಿಳಿಸಿದರು.

ಉಪ ವಿಭಾಗಾಧಿಕಾರಿ ಶಿವೇಗೌಡ, ತಹಶೀಲ್ದಾರ್ ಟಿ.ರಮೇಶ ಬಾಬು, ಮುಜರಾಯಿ ತಹಶೀಲ್ದಾರ್ ಯತಿರಾಜ್ ಸಂಪತ್ ಕುಮಾರನ್, ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಸಾದ್, ಪ್ರಧಾನ ಅರ್ಚಕ ದೀಕ್ಷಿತ್, ಕೆ.ಆರ್.ಉಪ ವಿಭಾಗದ ಎಸಿಪಿ ಧರ್ಮಪ್ಪ, ಲೋಕೋಪಯೋಗಿ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕೆಎಸ್‍ಆರ್‍ಟಿಸಿ ಸೇರಿದಂತೆ ಇತರ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Translate »