ಬಾರ್ ಮಾಲೀಕರ ಸುಲಿಗೆ ಮಾಡುತ್ತಿದ್ದ ನಕಲಿ ವಿಶೇಷ ಚುನಾವಣಾಧಿಕಾರಿ ಬಂಧನ
ಮೈಸೂರು

ಬಾರ್ ಮಾಲೀಕರ ಸುಲಿಗೆ ಮಾಡುತ್ತಿದ್ದ ನಕಲಿ ವಿಶೇಷ ಚುನಾವಣಾಧಿಕಾರಿ ಬಂಧನ

November 30, 2019

ಹುಣಸೂರು, ನ.29(ಎಸಿಪಿ, ಕೆಕೆ, ಹೆಚ್‍ಎಸ್‍ಎಂ)-ಬಾರ್ ಮಾಲೀಕರನ್ನು ಹೆದರಿಸಿ ಹಣ ವಸೂಲಿ ಮಾಡು ತ್ತಿದ್ದ ನಕಲಿ ವಿಶೇಷ ಚುನಾವಣಾಧಿಕಾರಿಯನ್ನು ಹುಣ ಸೂರು ಪೊಲೀಸರು ಬಂಧಿಸಿದ್ದಾರೆ. ಹಾಸನದ ಕಾರ್ಲೆ ಕೊಪ್ಪಲು ಗ್ರಾಮದ ಶಶಿಧರ್ ಬಂಧಿತ ನಕಲಿ ವಿಶೇಷ ಚುನಾವಣಾಧಿಕಾರಿಯಾಗಿದ್ದು, ಕೆಲ ದಿನಗಳಿಂದ ಈತ ಹುಣಸೂರಿನ ಬಾರ್ ಮತ್ತು ವೈನ್ ಸ್ಟೋರ್‍ಗಳಿಗೆ ತೆರಳಿ, ತಾನು ವಿಶೇಷ ಚುನಾವಣಾಧಿಕಾರಿ ಎಂದು ಪರಿಚಯಿಸಿ ಕೊಂಡು `ನಿಮ್ಮಲ್ಲಿ ಹೆಚ್ಚಿನ ಪ್ರಮಾಣದ ಮದ್ಯ ಮಾರಾಟ ವಾಗಿದೆ. ಚುನಾವಣೆಗಾಗಿ ರಾಜಕಾರಣಿಗಳಿಗೆ ನೀವು ಮದ್ಯ ಸರಬರಾಜು ಮಾಡಿದ್ದೀರಿ ಎಂಬ ಮಾಹಿತಿ ನನಗಿದೆ’ ಎಂದು ಹೇಳಿ ದಾಖಲೆಗಳನ್ನು ಪರಿಶೀಲಿಸಿದ್ದಾನೆ. ನಾಮಕಾವಸ್ಥೆಗಾಗಿ ದಾಖಲೆ ಪರಿಶೀಲಿಸಿ ದಂತೆ ನಟಿಸುತ್ತಿದ್ದ ಈತ, ಬಾರ್ ಮತ್ತು ವೈನ್ ಸ್ಟೋರ್ ಮಾಲೀಕರ ಮೇಲೆ ಪ್ರಕರಣ ದಾಖಲಿಸುವುದಾಗಿ ಹೆದರಿಸಿ ಅವರಿಂದ ಹಣ ವಸೂಲಿ ಮಾಡುತ್ತಿದ್ದ ಎಂದು ಹೇಳಲಾಗಿದೆ.

ಬೈಕ್‍ನಲ್ಲಿ ಒಂದು ಫೈಲ್ ಹಿಡಿದು ಬರುತ್ತಿದ್ದ ಈತ, ಖಡಕ್ ಅಧಿಕಾರಿಯಂತೆ ದರ್ಪ ತೋರಿಸುತ್ತಿದ್ದ. ಬಾರ್ ಮಾಲೀಕರು ಟೀ ಅಥವಾ ಕಾಫಿ ಕುಡಿಯುವಂತೆ ಹೇಳಿದರೆ, ಅವರ ಮೇಲೆ ಹರಿಹಾಯ್ದು, ಕೇಸ್ ಹಾಕುವುದಾಗಿ ರಂಪಾಟ ಮಾಡಿ ಬಿಡುತ್ತಿದ್ದ. ಕೊನೆಗೆ ಅವರಿಂದ ಸಾವಿರಾರು ರೂ. ಪಡೆದು ಹೋಗುತ್ತಿದ್ದ. ಈ ಕುರಿತು ಮಾಹಿತಿ ಪಡೆದ ಹುಣಸೂರು ಸರ್ಕಲ್ ಇನ್ಸ್‍ಪೆಕ್ಟರ್ ಪೂವಯ್ಯ ಮತ್ತವರ ತಂಡ ವ್ಯೂಹ ರಚಿಸಿ, ಬಾರ್‍ವೊಂದರ ಮಾಲೀಕರನ್ನು ಈತ ಹೆದರಿಸುತ್ತಿದ್ದ ವೇಳೆ ಆತನನ್ನು ಬಂಧಿಸಿದ್ದಾರೆ. ಈ ಸಂಬಂಧ ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »