ರಸ್ತೆ ಬದಿ ಗೋಡೆ, ಕಾಂಪೌಂಡ್‍ಗಳ ಮೇಲೆ  ರಾರಾಜಿಸುತ್ತಿದೆ ನಾಡಿನ ಕಲೆ, ಸಂಸ್ಕೃತಿ…!
ಮೈಸೂರು

ರಸ್ತೆ ಬದಿ ಗೋಡೆ, ಕಾಂಪೌಂಡ್‍ಗಳ ಮೇಲೆ  ರಾರಾಜಿಸುತ್ತಿದೆ ನಾಡಿನ ಕಲೆ, ಸಂಸ್ಕೃತಿ…!

September 21, 2018

ಮೈಸೂರು:  ದಸರಾ ಮಹೋತ್ಸವಕ್ಕೆ ಮೈಸೂರು ಸಜ್ಜುಗೊಳ್ಳುತ್ತಿದ್ದು, ಪ್ರಮುಖ ರಸ್ತೆಗಳ ಗೋಡೆ, ಕಾಂಪೌಂಡ್‌ಗಳ ಮೇಲೆ ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಬಿಂಬಿಸುವ ಚಿತ್ರಗಳು ಮೈದಳೆಯುತ್ತಿವೆ.

ಕೆ.ಆರ್‍ಎಸ್ ರಸ್ತೆ, ರೈಲ್ವೇ ಬ್ರಿಡ್ಜ್‍ನ ಬೃಹತ್ ಗೋಡೆಯ ಮೇಲೆ ಈಗಾಗಲೇ ಚಿತ್ರ ಬಿಡಿಸಲಾಗಿತ್ತು. ಆದರೆ ಬಣ್ಣ ಮಾಸಿದ್ದರಿಂದ ಹೊಸದಾಗಿ ಬಣ್ಣ ತುಂಬಲಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತಿವೆ. ಹಾಗೆಯೇ ಜೆಎಲ್‍ಬಿ ರಸ್ತೆಯಲ್ಲಿರುವ ಮಹಾರಾಣಿ ಕಾಲೇಜು, ವಿದ್ಯಾರ್ಥಿನಿಲಯದ ಕಾಂಪೌಂಡ್‍ಗಳ ಮೇಲೂ ಚಿತ್ರಗಳನ್ನು ಬಿಡಿಸಲಾಗುತ್ತಿದೆ.

ಹುಣಸೂರು ರಸ್ತೆಯಲ್ಲಿ ಮಹಾರಾಣಿ ಕಾಲೇಜು ಕಾಂಪೌಂಡ್‍ಗೆ ಹೊಂದಿಕೊಂಡಂತಿರುವ ಪ್ರಯಾಣಿಕರ ತಂಗುದಾಣ, ಪಾಳು ಬಿದ್ದಂತೆ ಕಾಣುತ್ತಿತ್ತು. ಇದೀಗ ಹಳೆಯದಾಗಿದ್ದ ಬಸ್ ಶೆಲ್ಟರ್ ವಿಶೇಷ ಚಿತ್ರಕಲೆಯಿಂದ ಹೊಸರೂಪ ಪಡೆಯುತ್ತಿದೆ. ದಸರಾ ಸಂದರ್ಭದಲ್ಲಿ ಮೈಸೂರಿನ ಕಾಂಪೌಂಡ್‍ಗಳಲ್ಲೂ ನಾಡಿನ ಪರಂಪರೆ ಬಿಂಬಿಸಬೇಕು. ಇದರಿಂದ ನಗರದ ಸೌಂದರ್ಯ ಇಮ್ಮಡಿಯಾಗುವುದರ ಜೊತೆಗೆ ಪ್ರವಾಸಿಗರಿಗೂ ವಿಶೇಷ ಅನುಭವವಾಗುತ್ತದೆ ಎಂಬುದು ನಗರಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಅವರ ಅಭಿ ಪ್ರಾಯ. ಈ ನಿಟ್ಟಿನಲ್ಲಿ ವಿಶೇಷ ಆಸಕ್ತಿ ವಹಿಸಿದ ಅವರು, ಪ್ರಾಯೋಜಕರ ಸಹಕಾರದೊಂದಿಗೆ ಅನೇಕ ಕಡೆಗಳಲ್ಲಿ ಚಿತ್ರಕಲೆಯಲ್ಲಿ ಸಂಸ್ಕೃತಿ ಬಿಂಬಿಸುವ ಪ್ರಯತ್ನ ಮುಂದುವರಿಸಿದ್ದಾರೆ. ಅನೇಕ ಉದ್ಯಮಿಗಳು ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಕಾವಾ ಹಳೆಯ ವಿದ್ಯಾರ್ಥಿಗಳು ಸೇರಿದಂತೆ ಅನೇಕ ಕಲಾವಿದರು ಚಿತ್ರಕಲೆಯಲ್ಲಿ ಮಗ್ನರಾಗಿದ್ದಾರೆ.

ದಸರಾ ಜಂಬೂ ಸವಾರಿ, ಮೆರವಣಿಗೆಯಲ್ಲಿ ಸಾಗುವ ಕಲಾತಂಡಗಳು, ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ, ಗಾರುಡಿ ಗೊಂಬೆ, ಕಾಡು ಪ್ರಾಣಿಗಳು, ನೃತ್ಯಗಾರರು, ರೈಲು ಬಂಡಿ ಹೀಗೆ ವಿಭಿನ್ನ ಚಿತ್ರಗಳು ಕಣ್ಮನ ಸೆಳೆಯುತ್ತಿವೆ. ಅಲ್ಲದೆ ಕೆಆರ್‍ಎಸ್ ರಸ್ತೆಯಲ್ಲಿ ರುವ ಗುಡಿಯಾಕಾರದ ವಾಲ್ ಛೇಂಬರ್ ಗಳು ವಿಶೇಷವಾದ ವಾರ್ಲಿ ಆರ್ಟ್ ಚಿತ್ರ ಕಲೆಯಿಂದ ವಿಭಿನ್ನವಾಗಿ ಕಾಣುತ್ತಿವೆ.


ಸರಸ್ವತಿಪುರಂ ಅಗ್ನಿಶಾಮಕ ಠಾಣೆ ರಸ್ತೆ ಯಲ್ಲಿರುವ ರೈಲ್ವೇ ಬ್ರಿಡ್ಜ್, ವಾಣಿ ವಿಲಾಸ ವಾಟರ್ ವಕ್ರ್ಸ್ ಕಾಪೌಂಡ್, ಚೆಲುವಾಂಬ ಪಾರ್ಕ್‍ನ ಗ್ರಿಲ್ ನಡುವೆ ಇರುವ ಕಂಬಗಳು ಸೇರಿದಂತೆ ಹಲವೆಡೆ ಚಿತ್ರಕಲೆ ಮೂಲಕ ನಗರದ ಸೌಂದರ್ಯ ಹೆಚ್ಚಿಸುವ ಚಿಂತನೆ ಯಿದೆ ಎಂದು ಜಗದೀಶ್ ತಿಳಿಸಿದ್ದಾರೆ.

Translate »