ಅರುಣ್ ಜೇಟ್ಲಿ ಪಂಚಭೂತಗಳಲ್ಲಿ ಲೀನ
ಮೈಸೂರು

ಅರುಣ್ ಜೇಟ್ಲಿ ಪಂಚಭೂತಗಳಲ್ಲಿ ಲೀನ

August 26, 2019

ನವದೆಹಲಿ, ಆ.25- ಶನಿವಾರ ನಿಧನರಾದ ಬಿಜೆಪಿ ಟ್ರಬಲ್ ಶೂಟರ್ ಎಂದೇ ಖ್ಯಾತಿ ಪಡೆದಿದ್ದ ಮಾಜಿ ಕೇಂದ್ರ ಹಣಕಾಸು ಸಚಿವ ಅರುಣ್ ಮಹಾರಾಜ್ ಕಿಶನ್ ಜೇಟ್ಲಿ (66) ಅವರು ಭಾನುವಾರ ಮಧ್ಯಾಹ್ನ ಪಂಚಭೂತಗಳಲ್ಲಿ ಲೀನವಾದರು.

ಇಂದು ಮಧ್ಯಾಹ್ನ ದೆಹಲಿಯ ನಿಗಂ ಬೋಧ್ ಘಾಟನ್‍ನಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅರುಣ್ ಜೇಟ್ಲಿ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ಇದಕ್ಕೂ ಮುನ್ನ ಅರುಣ್ ಜೇಟ್ಲಿ ಅವರ ಪಾರ್ಥಿವ ಶರೀರವನ್ನು ಬಿಜೆಪಿ ಪ್ರಧಾನ ಕಚೇರಿಯಿಂದ ನಿಗಂಬೋಧ್‍ವರೆಗೆ ಮೆರ ವಣಿಗೆ ಮೂಲಕ ತರಲಾಯಿತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ, ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು, ಯೋಗಗುರು ಬಾಬಾ ರಾಮ್ ದೇವ್, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ಕೇಂದ್ರ ಸಚಿವರು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಅಂತ್ಯಕ್ರಿಯೆಯಲ್ಲಿ ಭಾಗ ವಹಿಸಿ ಅರುಣ್ ಜೇಟ್ಲಿ ಅವರಿಗೆ ಅಂತಿಮ ನಮನ ಸಲ್ಲಿಸಿದರು.

ಇನ್ನು ಬಹ್ರೈನ್‍ನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಕಾರ್ಯ ಕ್ರಮದಲ್ಲಿ ತಮ್ಮ ‘ಸ್ನೇಹಿತ’ ಜೇಟ್ಲಿ ಅವರನ್ನು ಸ್ಮರಿಸಿದ್ದಾರೆ. `ನನ್ನ ಸ್ನೇಹಿತ ಇಹಲೋಕ ತ್ಯಜಿಸಿರುವಾಗ ನಾನು ಇಷ್ಟು ದೂರದಲ್ಲಿರುವೆ ಎಂಬುದನ್ನು ಊಹಿಸಲೂ ಕಷ್ಟ ವಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ನಾವು ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಜೀ ಅವರನ್ನು ಕಳೆದುಕೊಂಡೆವು. ಇಂದು ನಾನು ನನ್ನ ಸ್ನೇಹಿತ ಅರುಣ್ ಅವರನ್ನು ಕಳೆದುಕೊಂಡಿರುವೆ’ ಎಂದು ದುಃಖ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮುನ್ನ ಅವರು ಜೇಟ್ಲಿ ಕುಟುಂಬ ಸದಸ್ಯರೊಂದಿಗೆ ಮಾತನಾಡಿ, ಸಂತಾಪ ಸೂಚಿಸಿದರು. ಆಗ ಕುಟುಂಬ ಸದಸ್ಯರು, ಮೋದಿ ಅವರಿಗೆ ತಮ್ಮ ಪ್ರಮುಖ ಪ್ರವಾಸ ವನ್ನು ಮೊಟಕುಗೊಳಿಸದಂತೆ ಸಲಹೆ ನೀಡಿದ್ದರು ಎನ್ನಲಾಗಿದೆ. ಮೋದಿ ಅವರು ಇಂದು ಫ್ರಾನ್ಸ್‍ನಲ್ಲಿ ನಡೆಯುತ್ತಿರುವ ಜಿ-7 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಏಮ್ಸ್ ಆಸ್ಪತ್ರೆಯಲ್ಲಿ ಶನಿವಾರ ಕೊನೆಯುಸಿರೆಳೆದಿದ್ದರು. ಕೆಲ ದಿನಗಳ ಕಾಲ ಅವರನ್ನು ವೆಂಟಿಲೇಟರ್‍ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ನಂತರ, ಶುಕ್ರವಾರ ರಾತ್ರಿಯಿಂದ ಅವರು ಚಿಕಿತ್ಸೆಗೆ ಸ್ಪಂದಿಸುವುದನ್ನು ನಿಲ್ಲಿಸಿದ್ದು, ಶನಿವಾರ ಇಹಲೋಕ ತ್ಯಜಿಸಿದರು. ಅವರು ತಮ್ಮ ಪತ್ನಿ, ಪುತ್ರ ಹಾಗೂ ಮಗಳನ್ನು ಅಗಲಿದ್ದಾರೆ.

ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದ ಅರುಣ್ ಜೇಟ್ಲಿ ಕಳೆದ ಜನವರಿಯಲ್ಲಿ ಅಮೆರಿಕದಲ್ಲಿ ಕ್ಯಾನ್ಸರ್‍ಗೆ ಚಿಕಿತ್ಸೆ ಪಡೆದಿದ್ದರು. ವೃತ್ತಿಯಲ್ಲಿ ವಕೀಲರಾಗಿದ್ದ ಜೇಟ್ಲಿ, ಮೋದಿ ಅವರ ಮೊದಲ ಅವಧಿಯ ಸಂಪುಟದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು.

Translate »