200 ಪಾಯಿಂಟ್ ರೋಸ್ಟರ್ ವ್ಯವಸ್ಥೆ ಜಾರಿಗೆ ಸುಗ್ರೀವಾಜ್ಞೆ: ಕೇಂದ್ರ ಸಂಪುಟ ಅನುಮೋದನೆ
ಮೈಸೂರು

200 ಪಾಯಿಂಟ್ ರೋಸ್ಟರ್ ವ್ಯವಸ್ಥೆ ಜಾರಿಗೆ ಸುಗ್ರೀವಾಜ್ಞೆ: ಕೇಂದ್ರ ಸಂಪುಟ ಅನುಮೋದನೆ

March 8, 2019

ನವದೆಹಲಿ: ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಲ್ಲಿ ಬೋಧಕರ ನೇಮಕಾತಿಯಲ್ಲಿ ಮೀಸಲಾತಿಗಾಗಿ 200 ಅಂಶಗಳ ರೋಸ್ಟರ್ ಪದ್ಧತಿಯನ್ನು ಜಾರಿಗೊಳಿಸುವ ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸಚಿವ ಸಂಪುಟ ಗುರುವಾರ ನಿರ್ಧರಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆ ಯಲ್ಲಿ ನಡೆದ ಸಚಿವ ಸಂಪುಟ ಸಭೆ ಸುಗ್ರೀವಾಜ್ಞೆಗೆ ಅನುಮೋದನೆ ನೀಡಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

ಉದ್ದೇಶಿತ ಪ್ರಸ್ತಾವನೆ ವಿಶ್ವವಿದ್ಯಾಲಯಗಳಲ್ಲಿ ಬೋಧಕರ ಹುದ್ದೆಗಳ ನೇಮಕಾತಿಯಲ್ಲಿ ದಲಿತರು, ಬುಡಕಟ್ಟು ಸಮುದಾಯ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಖಾತರಿ ಪಡಿಸುತ್ತದೆ. ಕೇಂದ್ರ ಸರ್ಕಾರ ಸಾಮಾಜಿಕ ನ್ಯಾಯದ ಪರವಾಗಿದ್ದು, 200 ಪಾಯಿಂಟ್ ರೋಸ್ಟರ್ ಪದ್ಧತಿ ಜಾರಿ ಗೊಳಿಸಲಿದೆ ಎಂದು `ಮೊನ್ನೆಯಷ್ಟೇ ಮಾನವ ಸಂಪನ್ಮೂಲಗಳ ಸಚಿವ ಪ್ರಕಾಶ್ ಜಾವಡೇಕರ್ ಭರವಸೆ ನೀಡಿದ್ದರು.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ ಹಲವು ರಾಜಕೀಯ ಮುಖಂಡರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ರೋಸ್ಟರ್ ಪದ್ಧತಿ ಜಾರಿಗೆ ಸುಗ್ರೀವಾಜ್ಞೆ ಹೊರಡಿಸುವಂತೆ ಒತ್ತಾಯಿಸಿದ್ದರು. ಅಲ್ಲದೆ ವಿಶ್ವವಿದ್ಯಾಲಯಗಳು ಮತ್ತು ಕಾಲೇಜಿನಲ್ಲಿ 200 ಪಾಯಿಂಟ್ ರೋಸ್ಟರ್ ಪದ್ಧತಿ ಜಾರಿಗೊಳಿಸಿದರೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಯುವಕರಿಗೆ ನ್ಯಾಯ ಸಿಗಲಿದೆ. ಆದರೆ ಮೀಸಲಾತಿಯು ಒಟ್ಟಾರೆ ವಿಶ್ವವಿದ್ಯಾಲಯಕ್ಕೆ ಸಿಗಲಿದೆಯೇ ಹೊರತು ವಿವಿಯ ಪ್ರತ್ಯೇಕ ಘಟಕಗಳಿಗಲ್ಲ ಎಂದು ಪ್ರಕಾಶ್ ಜಾವಡೇಕರ್ ಸ್ಪಷ್ಪಪಡಿಸಿದ್ದರು.

Translate »