ಹೊಸದಿಲ್ಲಿ, ಆ.18- ಕಳೆದ ಏಳು ದಿನಗಳಿಂದ ಹೊಸದಿಲ್ಲಿಯ ಏಮ್ಸ್ (ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ)ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಹಣಕಾಸು ಸಚಿವ, ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ಅವರ ಆರೋಗ್ಯ ಸ್ಥಿತಿ ಗಂಭೀರ ವಾಗಿದೆ ಎಂದು ಮೂಲಗಳು ತಿಳಿಸಿವೆ. ಏಮ್ಸ್ ವೈದ್ಯರು ಆಗಸ್ಟ್ 9ರಂದು ಜೇಟ್ಲಿ ಆರೋಗ್ಯ ಸ್ಥಿರವಾಗಿದೆ ಎಂದು ಪ್ರಕಟಣೆ ನೀಡಿದ್ದರು. ಬಳಿಕ ಅವರ ಆರೋಗ್ಯ ಸ್ಥಿತಿ ಬಗ್ಗೆ ಯಾವುದೇ ವಿಷಯ ಬಹಿರಂಗವಾಗಿರಲಿಲ್ಲ. ಆದರೆ ಮೂಲಗಳ ಪ್ರಕಾರ ಅವರು ಈಗಲೂ ಸಹ ತೀವ್ರ ನಿಗಾ ಘಟಕದಲ್ಲಿದ್ದು ಕೃತಕ ಉಸಿರಾಟ ವ್ಯವಸ್ಥೆ ಮಾಡಲಾಗಿದೆ.
ಮೂಲಗಳ ಪ್ರಕಾರ ಜೇಟ್ಲಿ ಅವರ ಶ್ವಾಸಕೋಶದಲ್ಲಿ ನೀರು ತುಂಬಿದ್ದು, ಈ ಕಾರಣದಿಂದ ಅವರಿಗೆ ಉಸಿರಾಡಲು ಸಮಸ್ಯೆಯಾಗುತ್ತಿದೆ. ಶ್ವಾಸಕೋಶದಿಂದ ನೀರನ್ನು ಹೊರತೆಗೆಯಲಾಗುತ್ತಿದ್ದರೂ, ಮರಳಿ ತುಂಬಿಕೊಳ್ಳುತ್ತಿದೆ. ಹೀಗಾಗಿ ಅವರ ಸ್ಥಿತಿ ಚಿಂತಾಜನಕವಾಗಿದೆ. ಅವರು Soft tissue sarcoma (ಒಂದು ರೀತಿಯ ಕ್ಯಾನ್ಸರ್) ದಿಂದ ಬಳಲುತ್ತಿದ್ದಾರೆ ಎಂದು ವೈದ್ಯಮೂಲಗಳು ತಿಳಿಸಿವೆ.
ಕಳೆದ ಶುಕ್ರವಾರ ಜೇಟ್ಲಿ ಆರೋಗ್ಯ ಸ್ಥಿರವಾಗಿದೆ ಎಂದು ಬುಲಿಟಿನ್ ಬಿಡುಗಡೆ ಮಾಡಲಾಗಿತ್ತು. ಬಳಿಕ ಏಮ್ಸ್ ಕಡೆಯಿಂದ ಯಾವುದೇ ಮಾಹಿತಿ ಹೊರಬಿದ್ದಿರಲಿಲ್ಲ. ಜೇಟ್ಲಿ ಬಹಳ ವರ್ಷಗಳಿಂದ ಮಧುಮೇಹ ಪೀಡಿತರಾಗಿದ್ದು, ಅವರಿಗೆ ಕಿಡ್ನಿ ಕಸಿಯನ್ನು ಸಹ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಅವರಿಗೆ ಸಾಫ್ಟ್ ಟಿಸ್ಯೂ ಕ್ಯಾನ್ಸರ್ ಇದೆ ಎಂಬುದು ಪತ್ತೆಯಾಗಿತ್ತು. ಸ್ಥೂಲಕಾಯದಿಂದ ಮುಕ್ತಿ ಪಡೆಯಲು ಅವರು ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೂ ಸಹ ಒಳಗಾಗಿದ್ದರು.