ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧುಗೆ ವಿಶ್ವ ಚಾಂಪಿಯನ್ ಕಿರೀಟ
ಮೈಸೂರು

ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧುಗೆ ವಿಶ್ವ ಚಾಂಪಿಯನ್ ಕಿರೀಟ

August 26, 2019

ಸ್ವಿಜರ್ಲೆಂಡ್, ಆ.25- ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‍ಶಿಪ್ ಮುಡಿಗೇರಿಸಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದ್ದು, ಬ್ಯಾಡ್ಮಿಂಟನ್ ವಿಶ್ವ ಸಾಮ್ರಾಜ್ಞಿಯಾದ ಭಾರತದ ಮೊದಲ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ.

ಸ್ವಿಜರ್ಲೆಂಡ್‍ನ ಬಾಸೆಲ್‍ನಲ್ಲಿ ಭಾನು ವಾರ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ತಮ್ಮ ಬದ್ಧ ವೈರಿ ಜಪಾನ್‍ನ ನೋಜೊಮಿ ಓಕು ಹರಾ ವಿರುದ್ಧ 21-7, 21-7ರ ಅಂತರದ ಗೆಲುವು ದಾಖಲಿಸುವ ಮೂಲಕ ದಾಖಲೆ ಬರೆದು ಚೊಚ್ಚಲ ಬಂಗಾರದ ಕನಸು ನನಸು ಮಾಡಿಕೊಂಡಿದ್ದಾರೆ.

24ರ ಹರೆಯದ ಹೈದರಾಬಾದ್ ಆಟಗಾರ್ತಿ ಪಿ.ವಿ. ಸಿಂಧು, ಸತತ ಐದನೇ ಪ್ರಯತ್ನದಲ್ಲಿ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದು, 2017 ಮತ್ತು 2018ರ ಆವೃತ್ತಿಗಳಲ್ಲಿ ಫೈನಲ್ ಪ್ರವೇಶಿಸಿ, ಸೋತು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದರು. ಅದರಲ್ಲೂ ವಿಶೇಷ ವಾಗಿ 2017ರ ಫೈನಲ್‍ನಲ್ಲಿ ಜಪಾನ್‍ನ ನೋಜೊಮಿ ಓಕುಹರಾ ವಿರುದ್ಧ ಕೇವಲ ಎರಡು ಅಂಕಗಳ ಹಿನ್ನಡೆ ಯೊಂದಿಗೆ ಸೋತು ನಿರಾಸೆ ಅನುಭವಿಸಿದ್ದರು.

ಪ್ರಸ್ತುತ ಅತ್ಯುನ್ನತ ಫಾರ್ಮ್‍ನಲ್ಲಿರುವ ಪಿ.ವಿ.ಸಿಂಧು, ಪಂದ್ಯದ ಆರಂಭದಿಂದಲೇ ನೋಜೊಮಿ ಓಕುಹರಾ ವಿರುದ್ಧ ಆಕ್ರಮಣಕಾರಿ ಆಟಕ್ಕಿಳಿದ ಪರಿಣಾಮ ಒಂದು ಹಂತದಲ್ಲಿ 16-2ರ ಅಂತರದ ಮುನ್ನಡೆ ದಾಖಲಿಸಿದರು. ಅಲ್ಲದೆ ಮೊದಲ ಸುತ್ತನ್ನು 21-7 ರಿಂದ ಸುಲಭವಾಗಿ ವಶಪಡಿಸಿಕೊಂಡರು. ದ್ವಿತೀಯ ಸುತ್ತಿನಲ್ಲೂ ಆಕ್ರಮಣ ಕಾರಿ ಆಟ ಮುಂದುವರಿಸಿದ ಸಿಂಧು, ಎದುರಾಳಿ ಮೇಲೆ ನಿರಂತರ ಒತ್ತಡ ಹೇರುತ್ತಲೇ ಸಾಗಿದರು. ಹಿಂದಿನ ಪ್ರದರ್ಶ ನಕ್ಕೆ ಹೋಲಿಸಿದರೆ ಅನಗತ್ಯ ತಪ್ಪುಗಳಿಗೆ ಯಾವುದೇ ಆಸ್ಪದ ನೀಡದ ಸಿಂಧು, ತಮ್ಮ ಬಲವಾದ ಹೊಡೆತದಿಂ ದಲೇ ಎದುರಾಳಿ ಮೇಲೆ ಸವಾರಿ ಮಾಡಿದರು. ಹಾಗೆಯೇ ದ್ವಿತೀಯ ಸುತ್ತಿನಲ್ಲೂ ಒಂದು ಹಂತದಲ್ಲಿ 16-4ರ ಮುನ್ನಡೆ ಗಳಿಸಿ ಪ್ರಶಸ್ತಿಯತ್ತ ಮುನ್ನಡೆದರು. ಅಂತಿಮವಾಗಿ ದ್ವಿತೀಯ ಗೇಮ್ ಅನ್ನು 21-7ರ ಅಂತರದಲ್ಲಿ ವಶಪಡಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ಶನಿವಾರ ನಡೆದ ಸೆಮಿಫೈನಲ್‍ನಲ್ಲಿ ಸಿಂಧು ಮೂರನೇ ಶ್ರೇಯಾಂಕದ ಆಟಗಾರ್ತಿ ಚೀನಾದ ಚೆನ್ ಯು ಫಿ ಅವರನ್ನು 21-7 ಮತ್ತು 21-14 ಅಂತರದಿಂದ ಮಣಿಸಿ ಫೈನಲ್ ಪ್ರವೇಶಿಸಿದ್ದರು. ಇದರೊಂದಿಗೆ ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಸತತ 3ನೇ ಬಾರಿಗೆ ಫೈನಲ್ ಪ್ರವೇಶಿಸಿದ ವಿಶ್ವದ ಮೊದಲ ಆಟಗಾರ್ತಿ ಎನ್ನುವ ಹೆಗ್ಗ ಳಿಕೆಯನ್ನೂ ತಮ್ಮದಾಗಿಸಿಕೊಂಡರು.

ಇದಕ್ಕೂ ಮೊದಲು ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಸಿಂಧು 12-21, 23-21, 21-19ರಿಂದ ಚೈನಿಸ್ ತೈಪಿಯ ತೈ ಜು ವಿಂಗ್ ವಿರುದ್ಧ ಜಯ ಸಾಧಿಸಿದರು. ಈ ಆಟಗಾರ್ತಿಯರು ಒಟ್ಟು 15 ಬಾರಿ ಮುಖಾಮುಖಿಯಾಗಿದ್ದು, ಸಿಂಧು 5ನೇ ಗೆಲುವು ದಾಖಲಿಸಿದರು. 2013ರ ಆವೃತ್ತಿಯಲ್ಲಿ ಸಿಂಧು ಕಂಚಿನ ಪದಕ ಗಳಿಸಿದ್ದರು. ಅದಾದ ಬಳಿಕ 2014ರ ಆವೃತ್ತಿಯಲ್ಲೂ ಕಂಚಿನ ಪದಕ ಗೆದ್ದಿದ್ದರು. ಇದರೊಂದಿಗೆ, ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧು ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‍ಷಿಪ್‍ನಲ್ಲಿ ಒಟ್ಟು 5 ಪದಕ (ಹಾಲಿ ಆವೃತ್ತಿಯದೂ ಸೇರಿ) ಗೆದ್ದಂತಾಗಿದೆ.

8ನೇ ವರ್ಷಕ್ಕೇ ಬ್ಯಾಡ್ಮಿಂಟನ್ ಆರಂಭಿಸಿದ ಪಿ.ವಿ.ಸಿಂಧು

ವಿಶ್ವ ಚಾಂಪಿಯನ್ ಬ್ಯಾಡ್ಮಿಂಟನ್ ಆಟಗಾರ್ತಿ ಪುಸರ್ಲಾ ವೆಂಕಟ ಸಿಂಧು (ಪಿ.ವಿ.ಸಿಂಧು) ಹೈದರಾಬಾದ್‍ನಲ್ಲಿ 1995ರ ಜು.5ರಂದು ಜನಿಸಿದರು. ತಂದೆ ಪಿ.ವಿ.ರಮಣ ಮತ್ತು ತಾಯಿ ಪಿ.ವಿಜಯ ಇಬ್ಬರೂ ವಾಲಿಬಾಲ್ ಆಟಗಾರ ರಾಗಿದ್ದರೂ, ಸಿಂಧು ಮಾತ್ರ ಬ್ಯಾಡ್ಮಿಂಟನ್ ಕಡೆಗೆ ಆಕರ್ಷಿತರಾದರು. ಅದಕ್ಕೆ ಕಾರಣ, 2001ರ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದ ಪುಲ್ಲೇಲ ಗೋಪಿಚಂದ್‍ರ ಯಶಸ್ಸು ಮತ್ತು ಅವರಿಂದ ಪಡೆದ ಸ್ಫೂರ್ತಿ. ಹೀಗಾಗಿ ತನ್ನ 8ನೇ ವಯಸ್ಸಿನಲ್ಲೇ ಸಿಂಧು ಬ್ಯಾಡ್ಮಿಂಟನ್ ಆಡಲು ಪ್ರಾರಂಭಿಸಿದ್ದರು.

ಮೊದಲಿಗೆ ಸಿಂಧು ಅವರು ಸಿಕಂದರಾಬಾದ್‍ನ ಭಾರತೀಯ ರೈಲ್ವೆ ಇನ್ಸ್ಟಿ ಟ್ಯೂಟ್ ಆಫ್ ಸಿಗ್ನಲ್ ಇಂಜಿನಿಯರಿಂಗ್ ಮತ್ತು ದೂರಸಂಪರ್ಕ ಸಂಸ್ಥೆಯ ಬ್ಯಾಡ್ಮಿಂಟನ್ ಕೋಚ್ ಮೆಹಬೂಬ್ ಅಲಿ ಅವರ ಮಾರ್ಗದರ್ಶನ ದೊಂದಿಗೆ ಕ್ರೀಡೆಯ ಮೂಲಭೂತ ಅಂಶಗಳನ್ನು ಕಲಿತರು. ನಂತರ ಅವರು ಪುಲ್ಲೇಲ ಗೋಪಿಚಂದ್ ಅವರ ಬ್ಯಾಡ್ಮಿಂಟನ್ ಅಕಾಡೆಮಿಗೆ ಸೇರಿದರು. ಈ ವೇಳೆ ಅವರು ಹಲವಾರು ಪ್ರಶಸ್ತಿಗಳನ್ನು ಗೆದ್ದರು. 10 ವರ್ಷದೊಳಗಿನವರ ವಿಭಾಗದಲ್ಲಿ 5ನೇ ಸರ್ವೋ ಅಖಿಲ ಭಾರತ ಶ್ರೇಣಿಯ ಚಾಂಪಿಯನ್ ಶಿಪ್‍ನ ಡಬಲ್ಸ್ ವಿಭಾಗದಲ್ಲಿ ಮತ್ತು ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು. 13 ವರ್ಷದೊಳಗಿನ ವಿಭಾಗದಲ್ಲಿ ಪಾಂಡಿಚೇರಿಯಲ್ಲ್ಲಿ ನಡೆದ ಕಿರಿಯರ ಸಿಂಗಲ್ಸ್
ಪ್ರಶಸ್ತಿ ಗೆದ್ದರು ಮತ್ತು ಅಖಿಲ ಭಾರತ ಕೃಷ್ಣ ಖೇತಾನ್ ಟೂರ್ನಮೆಂಟ್‍ನ ಡಬಲ್ಸ್‍ನಲ್ಲಿ ಗೆದ್ದರು. 14 ವರುಷದೊಳಗಿ ನವರ 51ನೇ ನ್ಯಾಷನಲ್ ಸ್ಕೂಲ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನೂ ಗೆದ್ದರು.

ಕ್ರೀಡಾ ವೃತ್ತಿಜೀವನ: ಸಿಂಧು ಅವರು 2009ರಲ್ಲಿ ಕೊಲಂಬೊದಲ್ಲಿ ನಡೆದ ಸಬ್ ಜೂನಿ ಯರ್ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಕಂಚಿನ ಪದಕ ಗಳಿಸಿದರು. 2010 ರಲ್ಲಿ ನಡೆದ ಇರಾನ್ ಫಜ್ರ್ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಲೆಂಜ್ ಪಂದ್ಯಾವಳಿ ಯಲ್ಲಿ ಸಿಂಗಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದರು. 2010ರಲ್ಲಿ ಮೆಕ್ಸಿಕೋದಲ್ಲಿ ನೆಡೆದ ಕಿರಿಯರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದರು. 2010ರ ಉಬರ್ ಕಪ್‍ನಲ್ಲಿ ಭಾರತದ ರಾಷ್ಟ್ರೀಯ ತಂಡದಲ್ಲಿ ತಂಡದ ಸದಸ್ಯರಾಗಿದ್ದರು. ಪ್ರಸ್ತುತ ಅವರು ಬಿಡಬ್ಲ್ಯೂಎಫ್ ಜೂನಿಯರ್ ಶ್ರೇಯಾಂಕ ಗಳಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಪತ್ರಿಕೆಯೊಂದರ ಪ್ರಕಾರ “ಸಿಂಧು ಅವರು ತನ್ನ ಮನೆಯಿಂದ 56 ಕಿಮೀ ದೂರ ಪ್ರಯಾಣ ಮಾಡಿ ದೈನಂದಿನ ತರಬೇತಿ ಶಿಬಿರಗಳಲ್ಲಿ ಸಮಯಕ್ಕೆ ಸರಿಯಾಗಿ ಹಾಜರಾಗಿ ಅಗತ್ಯವಿರುವಷ್ಟೂ ಕಾರ್ಯಕ್ಷಮತೆ ತೋರುವುದು ಮತ್ತು ಶಿಸ್ತುಬದ್ಧವಾದ ಅವರ ಜೀವನವು ಅವರೊಬ್ಬ ಉತ್ತಮ ಬ್ಯಾಡ್ಮಿಂಟನ್ ಆಟಗಾರ್ತಿ ಅನ್ನುವುದನ್ನು ಬಿಂಬಿಸುತ್ತದೆ.

Translate »