ಬೆಂಗಳೂರು: ಕರ್ನಾಟಕ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಅಜ್ಜಿ ಕುಟ್ಟೀರ ಎಸ್.ಬೋಪಣ್ಣ ಅವರನ್ನು ಗೌಹಾತಿ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಗಳಾಗಿ ಸುಪ್ರೀಂಕೋರ್ಟ್ ನೇಮಕ ಮಾಡಿದೆ.
ಗೌಹಾತಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಅಜಿತ್ ಸಿಂಗ್ ಅವರು ಇತ್ತೀ ಚೆಗೆ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರನ್ನು ನೇಮಕ ಮಾಡಲಾಗಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಿ, ನ್ಯಾಯಮೂರ್ತಿಗಳಾದ ಮದನ್ ಬಿ.ಲೋಕೂರ್ ಮತ್ತು ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರಿದ್ದ ತ್ರಿಸದಸ್ಯ ಸಮಿತಿಯು ಗೌಹಾತಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಹುದ್ದೆಗೆ ಕರ್ನಾಟಕ ಹೈಕೋರ್ಟ್‍ನ ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ, ಹೆಚ್.ಜಿ.ರಮೇಶ್ ಮತ್ತು ಹುಲವಾಡಿ ಜಿ.ರಮೇಶ್ ಅವರನ್ನು ಪರಿಗಣಿಸಿತ್ತು. ಅಂತಿಮವಾಗಿ ನ್ಯಾಯ ಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಆಯ್ಕೆ ಮಾಡಲಾಗಿದೆ.
ಎ.ಎಸ್.ಬೋಪಣ್ಣ ಅವರು ಕೊಡಗಿನ ಪಾಲಿಬೆಟ್ಟದ ದಿವಂಗತ ಅಜ್ಜಿಕುಟ್ಟೀರ ಸೋಮಯ್ಯ ಅವರ ಪುತ್ರರಾಗಿದ್ದು, ದೇಶದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕಗೊಂಡ ಪ್ರಪ್ರಥಮ ಕೊಡವರು ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.