ಆಷಾಢ ಶುಕ್ರವಾರ: ಚಾ.ಬೆಟ್ಟದಲ್ಲಿ ಸುಗಮ ಧಾರ್ಮಿಕ ಕಾರ್ಯಗಳಿಗೆ ಜಿಲ್ಲಾಡಳಿತ ಸರ್ವ ವ್ಯವಸ್ಥೆ
ಮೈಸೂರು

ಆಷಾಢ ಶುಕ್ರವಾರ: ಚಾ.ಬೆಟ್ಟದಲ್ಲಿ ಸುಗಮ ಧಾರ್ಮಿಕ ಕಾರ್ಯಗಳಿಗೆ ಜಿಲ್ಲಾಡಳಿತ ಸರ್ವ ವ್ಯವಸ್ಥೆ

June 26, 2019

ಮೈಸೂರು,ಜೂ.25(ಆರ್‍ಕೆ)- ಆಷಾಢ ಶುಕ್ರವಾರಗಳಂದು ಚಾಮುಂಡಿಬೆಟ್ಟದಲ್ಲಿ ನೂಕು-ನುಗ್ಗಲು, ಸಂಚಾರ ಸಮಸ್ಯೆ ಯನ್ನು ತಪ್ಪಿಸುವ ಸಲುವಾಗಿ ಕೆಲ ನಿಯಮಗಳನ್ನು ಶಿಸ್ತುಬದ್ಧವಾಗಿ ಪಾಲಿಸಲು ಮೈಸೂರು ಜಿಲ್ಲಾಡಳಿತ ಮುಂದಾಗಿದೆ.

ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್, ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲ ಕೃಷ್ಣ, ಡಿಸಿಪಿ ಎಂ.ಮುತ್ತುರಾಜ್ ಅವರು ಇಂದು ಚಾಮುಂಡಿಬೆಟ್ಟಕ್ಕೆ ತೆರಳಿ ಸ್ಥಳ ಪರಿಶೀಲಿಸಿದರು. ಚಾಮುಂಡೇಶ್ವರಿ ದೇವರ ದರ್ಶನಕ್ಕೆ ಬರುವ ಭಕ್ತಾದಿಗಳು ಸಾಲುಗಟ್ಟಿ ನಿಲ್ಲಲು, ಪ್ರವೇಶ ಮತ್ತು ನಿರ್ಗಮನ ಸರಳ ಗೊಳಿಸುವ ಹಾಗೂ ಸರಾಗವಾಗಿ ಯಾವುದೇ ಅಡಚಣೆ ಇಲ್ಲದೆ ದರ್ಶನ ಮಾಡಲು ಅವಕಾಶ ಕಲ್ಪಿಸುವ ಬಗ್ಗೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಪ್ರಸಾದ್, ಪ್ರಧಾನ ಅರ್ಚಕ ಡಾ.ಎನ್.ಶಶಿಶೇಖರ ದೀಕ್ಷಿತ್‍ರೊಂದಿಗೆ ಸಮಾಲೋಚಿಸಿದರು.

ಅನಗತ್ಯವಾಗಿ ದೇವಸ್ಥಾನದ ಆವರಣ ದಲ್ಲಿ ನಿಲ್ಲುವುದು, ದಾಸೋಹ ಭವನದಲ್ಲಿ ಪ್ರಸಾದಕ್ಕಾಗಿ ಭಕ್ತರ ನೂಕು-ನುಗ್ಗಲು ತಪ್ಪಿಸಬೇಕು, ಸಂಚಾರ ಸುಗಮಗೊಳಿಸ ಬೇಕು, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಸ್ವಚ್ಛತೆ, ಬೀದಿದೀಪ ಸೌಲಭ್ಯ ವನ್ನು ಒದಗಿಸುವ ಮೂಲಕ ಎಲ್ಲಾ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಗಣ್ಯರು, ಅತಿ ಗಣ್ಯರು ಬಂದಾಗ ದರ್ಶನ ವ್ಯವಸ್ಥೆ ಬೆಟ್ಟದ ಮೇಲೆ ದೇವ ಸ್ಥಾನದ ಬಳಿಗೆ ಯಾವುದೇ ವಾಹನ ಗಳನ್ನು ಬಿಡದಂತೆ ಎಚ್ಚರ ವಹಿಸುವುದು, ಆವರಣದಲ್ಲಿ ಖಾಸಗಿಯವರಿಗೆ ಪ್ರಸಾದ ವಿನಿಯೋಗ ಮಾಡಲು ಅವಕಾಶ ನೀಡದೆ, ಕೇವಲ ದಾಸೋಹ ಭವನದಲ್ಲಿ ಅಥವಾ ದೂರದ ಸ್ಥಳದಲ್ಲಿ ಸ್ಥಳಾವಕಾಶ ನೀಡುವ ಬಗ್ಗೆಯೂ ಇದೇ ವೇಳೆ ಚರ್ಚಿಸಲಾಯಿತು.

ಲಲಿತ ಮಹಲ್ ಹೆಲಿಪ್ಯಾಡ್ ಬಳಿ ವಾಹನ ನಿಲುಗಡೆ ಮಾಡಿ ಅಲ್ಲಿಂದ ಕೆಎಸ್ ಆರ್‍ಟಿಸಿ ಬಸ್ಸುಗಳಲ್ಲಿ ಬೆಟ್ಟಕ್ಕೆ ತೆರಳಬೇಕು, ರಾತ್ರಿ 9 ಗಂಟೆ ನಂತರ ಗ್ರಾಮಸ್ಥರು, ಸ್ಥಳೀಯ ವ್ಯಾಪಾರಸ್ಥರನ್ನು ಹೊರತು ಪಡಿಸಿ ಉಳಿದಂತೆ ಸಾರ್ವಜನಿಕ ವಾಹನಗಳ ಪ್ರವೇಶ ನಿಷೇಧಿಸುವ ಬಗ್ಗೆ ಕೆ.ಆರ್. ಉಪ ವಿಭಾಗದ ಎಸಿಪಿ ಅವರು ಸಲ್ಲಿಸಿರುವ ಪ್ರಸ್ತಾವನೆಯನ್ನು ಗಂಭೀರ ವಾಗಿ ಪರಿಗಣಿಸಿರುವ ಜಿಲ್ಲಾಡಳಿತವು, ಒಂದೆರಡು ದಿನಗಳಲ್ಲಿ ನಿರ್ಧಾರಗೊಳ್ಳುವ ಬಗ್ಗೆಯೂ ಪ್ರಸ್ತಾಪಿಸಲಾಯಿತು.

ರಾತ್ರಿ ವೇಳೆ ಭಕ್ತಾದಿಗಳಲ್ಲದವರು ಮೋಜಿಗಾಗಿ ಚಾಮುಂಡಿಬೆಟ್ಟಕ್ಕೆ ತೆರಳಿ ಅಚಾತುರ್ಯ ಉಂಟು ಮಾಡುವುದು, ಅಪರಾಧ ಎಸಗುತ್ತಿರುವ ಬಗ್ಗೆ ವರದಿ ಯಾಗಿರುವ ಹಿನ್ನೆಲೆಯಲ್ಲಿ ಅಗತ್ಯ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು, ಕಾನೂನು-ಸುವ್ಯವಸ್ಥೆ ಕಾಪಾಡುವಂತೆಯೂ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಳು ಸಲಹೆ ನೀಡಿದರು. ಸಂಚಾರ ವಿಭಾಗದ ಎಸಿಪಿ ಜಿ.ಎನ್.ಮೋಹನ್, ದೇವರಾಜ ಉಪ ವಿಭಾಗದ ಎಸಿಪಿ ಹೆಚ್.ಎಸ್. ಗಜೇಂದ್ರ ಪ್ರಸಾದ್, ಕೆ.ಆರ್.ವಿಭಾಗದ ತಿಮ್ಮಪ್ಪ ನಾಯಕ, ಕೆ.ಆರ್.ಠಾಣೆ ಇನ್ಸ್‍ಪೆಕ್ಟರ್ ನಾರಾಯಣಸ್ವಾಮಿ ಸೇರಿದಂತೆ ಹಲವು ಅಧಿಕಾರಿಗಳು ಪರಿಶೀಲನೆ ವೇಳೆ ಉಪಸ್ಥಿತರಿದ್ದರು.

Translate »