ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿ ಉನ್ನತ ಸಂಶೋಧನೆಗೆ ನೆರವು: ಮೈಸೂರು ವಿವಿ ಹಂಗಾಮಿ ಕುಲಪತಿ ಪ್ರೊ. ಟಿ.ಕೆ.ಉಮೇಶ್ ಭರವಸೆ
ಮೈಸೂರು

ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿ ಉನ್ನತ ಸಂಶೋಧನೆಗೆ ನೆರವು: ಮೈಸೂರು ವಿವಿ ಹಂಗಾಮಿ ಕುಲಪತಿ ಪ್ರೊ. ಟಿ.ಕೆ.ಉಮೇಶ್ ಭರವಸೆ

June 8, 2018

ಮೈಸೂರು: ಮೈಸೂರಿನ ಪ್ರಾಚ್ಯ ವಿದ್ಯಾ ಸಂಶೋಧನಾಲಯವನ್ನು ಮೇಲ್ದರ್ಜೆಗೇರಿಸಲು ಹಾಗೂ ಉನ್ನತ ಸಂಶೋಧನೆ ಕೈಗೊಳ್ಳಲು ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗದ ಅನುದಾನ ಒದಗಿಸಲು ಪ್ರಾಮಾಣ ಕ ಪ್ರಯತ್ನ ಮಾಡುತ್ತೇನೆ ಎಂದು ಮೈಸೂರು ವಿವಿ ಹಂಗಾಮಿ ಕುಲಪತಿ ಪ್ರೊ.ಟಿ.ಕೆ.ಉಮೇಶ್ ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚ್ಯ ವಿದ್ಯಾ ಸಂಶೋಧನಾಲಯದ ವತಿಯಿಂದ ಮಹಾರಾಜ ಕಾಲೇಜು ಸ್ನಾತಕ ಗ್ರಂಥಾಲಯದಲ್ಲಿ ಹಸ್ತಪ್ರತಿಗಳ ಮಹತ್ವ ಮತ್ತು ಗ್ರಂಥಗಳ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲು ಗುರುವಾರ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮವನ್ನು ತಾಳೆಗರಿಗಳನ್ನು ಪ್ರದರ್ಶಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಯುಜಿಸಿ ತಂಡದೊಂದಿಗೆ ಮಾತುಕತೆ ನಡೆಸಿ ಅನುದಾನ ಒದಗಿಸುವ ಪ್ರಯತ್ನ ಮಾಡುತ್ತೇನೆ. ಹಸ್ತಪ್ರತಿಗಳ ಮಹತ್ವ ಹಾಗೂ ಗ್ರಂಥಗಳನ್ನು ಸಂರಕ್ಷಣೆಗೆ ಅರಿವು ಮೂಡಿಸಬೇಕು ಎನ್ನುವುದಾದರೆ, ಅವುಗಳ ಸಂರಕ್ಷಣೆಯಲ್ಲಿ ಅಗತ್ಯ ಕೆಲಸಗಳು ಸಮರ್ಪಕವಾಗಿ ಆಗುತ್ತಿಲ್ಲ ಎಂಬುದೇ ಅರ್ಥ. ಪ್ರಾಚೀನ ಕಾಲದಲ್ಲಿ ಬರೆಯಲು ಸೂಕ್ತ ಸಾಮಾಗ್ರಿಗಳು ಇರದ ಹಿನ್ನೆಲೆಯಲ್ಲಿ ಕಲ್ಲು, ಬಂಡೆಗಳು, ತಾಳೆಗರಿ ಸೇರಿದಂತೆ ಮೊದಲ ನೈಸರ್ಗಿಕ ವಸ್ತುಗಳನ್ನು ಬಳಸಿಕೊಳ್ಳಲಾಗಿದೆ. ಇವುಗಳನ್ನು ಕಾಪಾಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ಎಂದು ಪ್ರತಿಪಾದಿಸಿದರು.

ಕೌಟಿಲ್ಯನ ಅರ್ಥಶಾಸ್ತ್ರ ಸೇರಿದಂತೆ ಅನೇಕ ಮಹತ್ವದ ಗ್ರಂಥಗಳು ಮೈಸೂರು ವಿವಿಯಲ್ಲಿ ಇದ್ದು, ಇದು ನಮಗೆ ಹೆಮ್ಮೆಯ ವಿಷಯ. ಅವುಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದರು. ಮೈಸೂರು ವಿವಿ ಪ್ರಾಚ್ಯ ವಿದ್ಯಾ ಸಂಶೋಧನಾಲಯದ ಗೌರವ ಸಲಹೆಗಾರ ಟಿ.ವಿ.ಸತ್ಯನಾರಾಯಣ ಮಾತನಾಡಿ, 127 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಮೈಸೂರು ವಿವಿಯ ಪ್ರಾಚ್ಯ ವಿದ್ಯಾ ಸಂಶೋಧನಾಲಯವು ಮೈಸೂರು ವಿವಿ ಸ್ಥಾಪನೆಗೂ ಮುನ್ನವೇ ಆರಂಭವಾಗಿದೆ ಎಂದು ಹೇಳಿದರು.

ಸಂಶೋಧನಾಲಯದಲ್ಲಿ ಸಾವಿರಾರು ಅಮೂಲ್ಯ ಕೃತಿಗಳಿವೆ. 45 ಸಾವಿರ ತಾಳೆ ಪತ್ರಗಳನ್ನು ಸಂಗ್ರಹಣೆ ಮಾಡಿಡಲಾಗಿದೆ. 220ಕ್ಕೂ ಹೆಚ್ಚು ಗ್ರಂಥಗಳನ್ನು ಸಂಶೋಧನಾಲಯ ಪ್ರಕಟಿಸಿದೆ. ಹೀಗೆ ಪ್ರಕಟಗೊಂಡ ಮಹತ್ವದ ಸಂಶೋಧನಾ ಗ್ರಂಥಗಳು ಪ್ರಪಂಚದ ಪ್ರಮುಖ ಗ್ರಂಥಾಲಯದಲ್ಲಿ ಸ್ಥಾನ ಪಡೆದುಕೊಂಡಿವೆ. ಹಸ್ತಪ್ರತಿಗಳು ಯಾರಿಗಾದರೂ ಸಿಕ್ಕಲ್ಲಿ ಅವುಗಳನ್ನು ಸಂಸ್ಥೆಗೆ ತಂದು ಕೊಟ್ಟರೆ ಸಂರಕ್ಷಿಸಲಾಗುವುದು ಎಂದು ತಿಳಿಸಿದರು.

ಜೆಎಸ್‍ಎಸ್ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರೂ ಆದ ಹಸ್ತಪ್ರತಿ ಸಂಶೋಧಕ ಡಾ. ಎನ್.ಎಂ.ಶ್ಯಾಮಸುಂದರ್ ಹಸ್ತಪ್ರತಿಗಳ ಕುರಿತು ಉಪನ್ಯಾಸ ನೀಡಿದರು. ಪ್ರಾಚ್ಯ ವಿದ್ಯಾ ಸಂಶೋಧನಾಲಯದ ನಿರ್ದೇಶಕ ಡಾ. ಎಸ್.ಶಿವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಎಂ.ಎಸ್.ಎಸ್.ಕುಮಾರ್, ಮಹಾರಾಜ ಕಾಲೇಜು ಉಪ ಗ್ರಂಥಪಾಲಕ ಆರ್.ಕೆ.ಸೋಮಶೇಖರ್ ಮತ್ತಿತರರು ಹಾಜರಿದ್ದರು.

Translate »