ನೂತನ ಸಚಿವ ಸಾ.ರಾ.ಮಹೇಶ್‍ಗೆ ಮೈಸೂರಲ್ಲಿ ಅದ್ಧೂರಿ ಸ್ವಾಗತ
ಮೈಸೂರು

ನೂತನ ಸಚಿವ ಸಾ.ರಾ.ಮಹೇಶ್‍ಗೆ ಮೈಸೂರಲ್ಲಿ ಅದ್ಧೂರಿ ಸ್ವಾಗತ

June 8, 2018

ಮೈಸೂರು:  ಸಚಿವರಾದ ಬಳಿಕ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಕೆ.ಆರ್.ನಗರದ ಶಾಸಕ ಸಾ.ರಾ.ಮಹೇಶ್ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಮೈಸೂರು-ಬೆಂಗಳೂರು ಮುಖ್ಯರಸ್ತೆ, ಟೋಲ್‍ಗೇಟ್ ಬಳಿ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು, ಪಟಾಕಿ ಸಿಡಿಸಿ, ಬೃಹತ್ ಹಾರ ಹಾಕಿ, ಹೂಗುಚ್ಛಗಳನ್ನು ನೀಡಿ, ಆರತಿ ಬೆಳಗಿ, ಜೈಕಾರ ಹಾಕಿ ಸಂಭ್ರಮದಿಂದ ಆತ್ಮೀಯವಾಗಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಸಾ.ರಾ.ಮಹೇಶ್, ನಾನು ಕೆ.ಆರ್.ನಗರದ ಶಾಸಕನಾದರೂ ನೆಲೆಸಿರುವುದು ಮೈಸೂರಿನಲ್ಲಿ. ಇಷ್ಟೊಂದು ಸಂಭ್ರಮದಿಂದ ನನ್ನನ್ನು ಸ್ವಾಗತಿಸಿರುವುದು ಸಂತಸ ತಂದಿದೆ. ನಾನು ಇದನ್ನು ನಿರೀಕ್ಷಿಸಿರಲಿಲ್ಲ. ನಾನು ಯಾವುದೇ ಖಾತೆಗೆ ಬೇಡಿಕೆಯಿಟ್ಟಿಲ್ಲ. ಪಕ್ಷದ ವರಿಷ್ಠರು ಯಾವುದೇ ಖಾತೆ ನೀಡಿದರೂ ಸಮರ್ಥವಾಗಿ ನಿಭಾಯಿಸುತ್ತೇನೆ. ಈ ಸಂದರ್ಭದಲ್ಲಿ ನನ್ನ ಬೆಳವಣಿಗೆಗೆ ಕಾರಣೀಭೂತರಾದ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು.

ಮೇಯರ್ ಭಾಗ್ಯವತಿ, ಉಪಮೇಯರ್ ಇಂದಿರಾ, ಜೆಡಿಎಸ್ ನಗರಾಧ್ಯಕ್ಷ ಕೆ.ಟಿ.ಚೆಲುವೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಶಂಕರೇಗೌಡ, ಮಾಜಿ ಮೇಯರ್‍ಗಳಾದ ಆರ್.ಲಿಂಗಪ್ಪ, ಎಂ.ಜೆ.ರವಿಕುಮಾರ್, ವಿಧಾನಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿಗಳಾದ ನರಸಿಂಹರಾಜ ಕ್ಷೇತ್ರದ ಅಬ್ದುಲ್ಲಾ, ಕೃಷ್ಣರಾಜ ಕ್ಷೇತ್ರದ ಕೆ.ವಿ.ಮಲ್ಲೇಶ್, ನಗರ ಪಾಲಿಕೆ ಸದಸ್ಯರಾದ ಎಸ್‍ಬಿಎಂ ಮಂಜು, ಶಿವಣ್ಣ, ಚನ್ನಪ್ಪ, ಬಾಲು, ಕೆ.ಪಿ.ಅಶ್ವಿನಿ, ಮಾಜಿ ನಗರಾಧ್ಯಕ್ಷ ಕೊಪ್ಪಲು ರಾಜಣ್ಣ, ವಕೀಲ ರವಿಚಂದ್ರೇಗೌಡ, ಅಂಜಲಿ ರಾಮು, ರಾಧಾಕೃಷ್ಣ, ಕೇಬಲ್ ಸುರೇಶ್, ವಸಂತ, ಪ್ರಶಾಂತ್, ಮಹೇಶ್, ಗಿರೀಶ್‍ಗೌಡ ಸೇರಿದಂತೆ ನೂರಾರು ಮಂದಿ ಸಂಭ್ರಮದಿಂದ ನೂತನ ಸಚಿವ ಸಾ.ರಾ.ಮಹೇಶ್ ಅವರನ್ನು ಬರಮಾಡಿಕೊಂಡರು.

ಟ್ರಾಫಿಕ್ ಜಾಮ್: ಸಚಿವ ಸಾ.ರಾ.ಮಹೇಶ್ ಅವರನ್ನು ಸ್ವಾಗತಿಸಲು ಟೋಲ್‍ಗೇಟ್ ಬಳಿ ನೂರಾರು ಮಂದಿ ಜಮಾಯಿಸಿದ್ದರು. ಆದರೆ ಸಾ.ರಾ.ಮಹೇಶ್ ಕಾರನ್ನು ಕಂಡಾಕ್ಷಣ ರಿಂಗ್‍ರಸ್ತೆಯನ್ನು ದಾಟಿ ಕಾರಿನ ಬಳಿ ತೆರಳಿದರು. ಪರಿಣಾಮ ಬೆಂಗಳೂರಿನ ಕಡೆಯಿಂದ ಬರುತ್ತಿದ್ದ ವಾಹನಗಳೆಲ್ಲಾ ಸಾಲುಗಟ್ಟಿ ನಿಂತವು. ಅಲ್ಲದೆ ಅರ್ಧ ಗಂಟೆಗೂ ಹೆಚ್ಚು ಕಾಲ ಎಲ್ಲಾ ಮಾರ್ಗದ ರಸ್ತೆ ಸಂಚಾರವೂ ಅಸ್ತವ್ಯಸ್ಥವಾಯಿತು. ಸುಗಮ ಸಂಚಾರಕ್ಕೆ ಅನುವು ಮಾಡಲು ಪೊಲೀಸರು ಹೆಣಗಾಡಬೇಕಾಯಿತು.

Translate »