ಮೈಸೂರು: ಗಾಂಧೀಜಿಯವರು ದಕ್ಷಿಣ ಆಫ್ರಿಕಾದ ಪೀಟರ್ ಮಾರ್ಟ್‍ಬರ್ಗ್ ರೈಲ್ವೆ ನಿಲ್ದಾಣದಲ್ಲಿ ಅಪಮಾನಕ್ಕೊಳಗಾಗಿ ಇಂದಿಗೆ 125 ವರ್ಷಗಳು. ಈ ಜನಾಂಗೀಯ ಭೇದದ ಘಟನೆ ಬಳಿಕ ಮಹಾತ್ಮರಾದ ಸನ್ನಿವೇಶ ಸ್ಮರಿಸಿ, ಭಾರತೀಯರ ಸ್ವಾಭಿಮಾನ ಎತ್ತಿಹಿಡಿಯಲು ವಿವಿಧ ಸಂಘಟನೆಗಳ ವತಿಯಿಂದ ಗುರುವಾರ ಮೈಸೂರು ರೈಲ್ವೆ ನಿಲ್ದಾಣದಲ್ಲಿ ರೈಲಿನ ಬೋಗಿ ಕಿಟಕಿ-ಬಾಗಿಲಿಗೆ ಖಾದಿ ವಸ್ತ್ರಗಳನ್ನು ಕಟ್ಟಲಾಯಿತು.
ಶ್ರೀರಂಗಪಟ್ಟಣ ತಾಲೂಕಿನ ಕಡತನಾಳುವಿನ ಸಮರ್ಪಣಾ ಟ್ರಸ್ಟ್, ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ಶ್ರೀ ವೆಂಕಟೇಗೌಡ ಸೇವಾ ಸಮಿತಿ, ದಕ್ಷಿಣ ನೈರುತ್ಯ ರೈಲ್ವೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಈ ವಿನೂತನ ಕಾರ್ಯಕ್ರಮವನ್ನು ಗಂಜಾಂನ ಹಿರಿಯ ಸಾಹಿತಿ ಪ್ರೊ.ಕರಿಮುದ್ದೀನ್ ಬೋಗಿ ಬಾಗಿಲಿಗೆ ಖಾದಿ ವಸ್ತ್ರ ಕಟ್ಟುವ ಮೂಲಕ ಉದ್ಘಾಟಿಸಿದರು.
1893ರ ಜೂ.7ರಂದು ದಕ್ಷಿಣ ಆಫ್ರಿಕಾದಲ್ಲಿ ರೈಲಿನಲ್ಲಿ ಪ್ರಯಾಣ ಸುತ್ತಿದ್ದ ರಾಷ್ಟ್ರಪಿತ ಮಹಾತ್ಮಗಾಂಧಿಯವರನ್ನು ಜನಾಂಗೀಯ ಭೇಧ ನೀತಿ ಅನುಸರಿಸಿ, ಅಪಮಾನ ಮಾಡಿದ್ದಲ್ಲದೆ, ಅವರನ್ನು ರೈಲಿನಿಂದ ಹೊರ ಹಾಕಲಾಯಿತು. ಈ ಅಮಾನುಷ ಘಟನೆಯಿಂದ ಗಾಂಧೀಜಿಯವರು, ಜನಾಂಗೀಯ ಭೇದ ನೀತಿಯ ವಿರುದ್ಧ ಸಂಘಟನಾತ್ಮಕ ಹಾಗೂ ಅಹಿಂಸಾ ಮಾರ್ಗದಲ್ಲಿ ಮಾನವನ ಘನತೆ ಎತ್ತಿಹಿಡಿಯುವ ಮಟ್ಟಕ್ಕೆ ಬೆಳೆದರು. ಆ ಮೂಲಕ ಮಹಾತ್ಮರಾಗಿ ಹೊರಹೊಮ್ಮಿದ ಹಿನ್ನೆಲೆಯಲ್ಲಿ ಆ ಸನ್ನಿವೇಶ ಸ್ಮರಿಸುವ ಸಲುವಾಗಿ ಈ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬೆಂಗಳೂರಿಗೆ ತೆರಳುತ್ತಿದ್ದ ಸೂಪರ್ ಪಾಸ್ಟ್ ರೈಲಿನ ಬೋಗಿಯ ಬಾಗಿಲುಗಳಿಗೆ ಖಾದಿ ವಸ್ತ್ರಗಳನ್ನು ಕಟ್ಟುವ ಮೂಲಕ ಪ್ರಯಾಣ ಕರ ಗಮನ ಸೆಳೆದು, ಅಹಿಂಸಾ ಸಂದೇಶ ಸಾರಲಾಯಿತು. ಬೋಗಿಗಳ ಬಾಗಿಲುಗಳಿಗೆ ಮಾತ್ರವಲ್ಲದೆ, ಕಿಟಕಿಗಳಿಗೆ ಗಾಂಧಿ ಭಾವಚಿತ್ರ ಅಂಟಿಸಿದ ಬಿಳಿಯ ಖಾದಿ ವಸ್ತ್ರಗಳನ್ನು ಕಟ್ಟಿ ಭಾರತೀಯರ ಸ್ವಾಭಿಮಾನ ಮೆರೆಯಲಾಯಿತು.
ವೆಂಕಟೇಗೌಡ ಸೇವಾ ಸಮಿತಿ ಅಧ್ಯಕ್ಷ ಡಾ.ಕೆ.ವೈ.ಶ್ರೀನಿವಾಸ್, ಗಾಂಧಿವಾದಿ ಡಾ.ಬಿ.ಸುಜಯ್, ಪಾಂಡವಪುರದ ಕನ್ನಡ ಪರಿಷತ್ ಅಧ್ಯಕ್ಷ ಬಿ.ರಮೇಶ್, ನೇತಾಜಿ ಕ್ರೀಡಾ ಬಳಗದ ಅಧ್ಯಕ್ಷ ಮಲ್ಲಿಕಾರ್ಜುನ, ಕ್ಯಾತನಹಳ್ಳಿಯ ವಿಶ್ವೇಶ್ವರಯ್ಯ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಎಸ್.ಮೋಹನ್‍ಕುಮಾರ್, ಪಾಂಡವಪುರದ ಭಾರತ್ ವಿಕಾಸ ಪರಿಷತ್‍ನ ಲೋಕೇಶ್ ಮತ್ತಿತರರು ಪಾಲ್ಗೊಂಡಿದ್ದರು.