ಮೈಸೂರು: ಬೆಂಗಳೂರು ಬೃಹತ್ ನಗರ ಪಾಲಿಕೆ ಮಾದರಿಯಲ್ಲಿ ನಾಯಿ ಸಾಕಲು ಪರವಾನಗಿ ಪಡೆಯುವ ನಿಯಮಾವಳಿ ರೂಪಿಸಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿದೆ.ನಾಯಿ ಸಾಕಲು ಅನುಮತಿ ಪಡೆಯಬೇಕೆಂಬ ಕಾನೂನನ್ನು ರಾಜ್ಯ ಸರ್ಕಾರ ಜೂನ್ 4ರಂದು ರೂಪಿಸಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾರಿಗೆ ತರಲು ಮುಂದಾಗಿದ್ದು, ಅದರಲ್ಲಿ ಒಂದು ಅಪಾರ್ಟ್‍ಮೆಂಟ್‍ಗೆ ಒಂದು ನಾಯಿ ಸಾಕಲು ಮಾತ್ರ ಅವಕಾಶವಿರುವ ನಿಯಮವೂ ಸೇರಿದೆ.
ಸರ್ಕಾರದ ಈ ನಿಯಮದ ಪ್ರಸ್ತಾವನೆಯನ್ನು ಕೌನ್ಸಿಲ್ ಮುಂದಿಟ್ಟು ಅನುಮೋದನೆ ಪಡೆದುಕೊಂಡ ನಂತರ ಜಾರಿಗೆ ತರಲು ಬಿಬಿಎಂಪಿ ಮುಂದಾಗಿದೆ. ಅದೇ ನಿಯಮವನ್ನು ಮೈಸೂರು ನಗರದಲ್ಲಿ ಜಾರಿಗೆ ತರಲು ನಗರ ಪಾಲಿಕೆಯು ಪ್ರಕ್ರಿಯೆ ಆರಂಭಿಸಿದೆ. 2017ರ ಸೆಪ್ಟೆಂಬರ್ 7ರಂದು ಕುವೆಂಪುನಗರದಲ್ಲಿ ಸಾಕು ನಾಯಿಯೊಂದು ವ್ಯಕ್ತಿಗೆ ಕಚ್ಚಿ ಗಾಯಗೊಳಿಸಿದ ನಂತರ ಪಾಲಿಕೆಯು ಪರವಾನಗಿ ನಿಯಮವನ್ನು ಕಡ್ಡಾಯಗೊಳಿಸಲು ಮುಂದಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಆಟವಾಡುತ್ತಿದ್ದ 2 ವರ್ಷದ ಅಮೋಘ ವರ್ಷ ಎಂಬ ಬಾಲಕ ಸಾಕು ನಾಯಿಯೊಂದರ ದಾಳಿಗೊಳಗಾಗಿದ್ದನು. ನಾಯಿಗಳ ದಾಳಿಯಿಂದಾಗಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣ ಸಿದ್ದ ಮೈಸೂರು ಮಹಾನಗರ ಪಾಲಿಕೆಯು ನಾಯಿ ಸಾಕುವವರು ಅನುಮತಿ ಪಡೆಯಬೇಕೆಂಬುದನ್ನು ಕಡ್ಡಾಯಗೊಳಿಸಲೂ ಮುಂದಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ನಾಯಿ ಸಾಕುವವರು ಪಾಲಿಕೆಯಲ್ಲಿ ಹೆಸರು ನೋಂದಾಯಿಸಿ, ಪರವಾನಗಿಯನ್ನು ಪಡೆಯಬೇಕೆಂದು ನಿಯಮ ತಿಳಿಸುತ್ತದೆ ಎಂದು ಮೈಸೂರು ಮಹಾನಗರ ಪಾಲಿಕೆ ಪಶು ವೈದ್ಯ ವಿಭಾಗದ ಅಸಿಸ್ಟೆಂಟ್ ಡೈರೆಕ್ಟರ್ ಡಾ||ಎಸ್.ಸಿ. ಸುರೇಶ ಅವರು `ಮೈಸೂರು ಮಿತ್ರ’ನಿಗೆ ತಿಳಿಸಿದರು.
ಪ್ರಾಣ ಪಾಲನಾ ಮಂಡಳಿ (Animal Welfare Board)ರೂಪಿಸಿರುವ ನಿಯಮಾವಳಿಗಳೇನು ಎಂಬುದರ ಬಗ್ಗೆ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಗೆ ಹೋಗಿ ಅಧಿಕಾರಿಗಳಿಂದ ಮಾಹಿತಿ ಪಡೆದು ಅಧ್ಯಯನ ನಡೆಸಿದ ನಂತರ ನಾವು ಮೈಸೂರು ಮಹಾನಗರ ಪಾಲಿಕೆ ಕೌನ್ಸಿಲ್ ಸಭೆಗೆ ಇಡುತ್ತೇವೆ. ನಂತರವಷ್ಟೇ ಪರವಾನಗಿ ನಿಯಮವನ್ನು ಜಾರಿಗೆ ತರಬೇಕೆಂದೂ ಡಾ.ಸುರೇಶ್ ತಿಳಿಸಿದರು.
ಮೈಕ್ರೋ ಚಿಪ್ ಅಳವಡಿಕೆ : ನಾಯಿಗಳು ಯಾರಿಗೆ ಸೇರಿದ್ದು ಎಂಬುದನ್ನು ಗುರುತಿಸಲೆಂದು ನಾಯಿಯ ಮೈಮೇಲಿನ ಚರ್ಮದೊಳಕ್ಕೆ ಅಳವಡಿಸುತ್ತೇವೆ. ಅದರಲ್ಲಿ ಮೈಕ್ರೋಚಿಪ್ ಇರುತ್ತದೆ. ಆ ನಾಯಿಯನ್ನು ಸ್ಕ್ಯಾನ್ ಮಾಡಿದಾಗ ಅದರ ಸಂಖ್ಯೆ ಮತ್ತು ಮಾಲೀಕರ್ಯಾರು ಎಂಬುದು ತಿಳಿಯುತ್ತದೆ ಎಂದು ಅವರು ತಿಳಿಸಿದ್ದಾರೆ.
ಮೈಸೂರಲ್ಲಿ 60,000 ನಾಯಿಗಳು: 2011ರ ಗಣತಿ ಪ್ರಕಾರ ಮೈಸೂರಲ್ಲಿ 20,000 ಸಾಕು ನಾಯಿಗಳು ಹಾಗೂ 40,000 ಬೀದಿ ನಾಯಿಗಳಿವೆ. 20 ಪೆಟ್ ಕ್ಲಿನಿಕ್‍ಗಳು, 11 ಸರ್ಕಾರಿ ಪಶು ಆಸ್ಪತ್ರೆಗಳಿವೆ. 50 ಮಂದಿ ಪೆಟ್ ಪ್ರಾಕ್ಟೀಷನರ್‍ಗಳು ನಾಯಿಗಳ ಚಿಕಿತ್ಸೆ ಕಾರ್ಯದಲ್ಲಿ ನಿರತರಾಗಿದ್ದಾರೆ.
ನಿಯಮಾವಳಿಗೆ ವಿರೋಧ: ನಾಯಿ ಸಾಕಲು ಅನುಮತಿ ನಿಯಮಾವಳಿ ರೂಪಿಸುವುದಕ್ಕೆ ಮೈಸೂರಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಕುರಿತು ಕೆನೈನ್ ಕ್ಲಬ್ ಆಫ್ ಮೈಸೂರು ಅಧ್ಯಕ್ಷ ಬಿ.ಪಿ. ಮಂಜುನಾಥ. ಅವರು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಮೈಸೂರು ಹಾಗೂ ಬೆಂಗಳೂರು ಪರಿಸ್ಥಿತಿಯಲ್ಲಿ ವ್ಯತ್ಯಾಸವಿದೆ. ಬೆಂಗಳೂರಲ್ಲಿ ಸ್ಥಳಾಭಾವವಿದೆ. ಜನಸಂಖ್ಯೆ ಹೆಚ್ಚಾಗಿದೆ. ಆದರೆ ಮೈಸೂರಲ್ಲಿ ಆ ಸಮಸ್ಯೆ ಇಲ್ಲದಿರುವುದರಿಂದ ಇಲ್ಲಿ ನಿಯಮ ಜಾರಿ ಅನಗತ್ಯ ಎಂದರು.
ಲೈಸನ್ಸ್ ಪಡೆಯುವಂತಹ ನಿಯಮ ಹೇರಲಿ. ಆದರೆ ಒಂದು ಫ್ಯಾಮಿಲಿ ಒಂದೇ ನಾಯಿ ಸಾಕಬೇಕೆಂಬ ಕಡ್ಡಾಯ ಸರಿಯಲ್ಲ. ಮುಂದಿನ ವಾರ ನಾಯಿ ಸಾಕುವವರ ಸಭೆ ಕರೆದು ಚರ್ಚಿಸುತ್ತೇವೆ ಎಂದು ಅವರು ತಿಳಿಸಿದರು.