ಕೆಎಸ್ಆರ್‌ಟಿಸಿ ಬಸ್ ಚಾಲಕರು, ನಿರ್ವಾಹಕರ ಮೇಲೆ ಪುಂಡರಿಂದ ಮಾರಣಾಂತಿಕ ಹಲ್ಲೆ
ಮೈಸೂರು

ಕೆಎಸ್ಆರ್‌ಟಿಸಿ ಬಸ್ ಚಾಲಕರು, ನಿರ್ವಾಹಕರ ಮೇಲೆ ಪುಂಡರಿಂದ ಮಾರಣಾಂತಿಕ ಹಲ್ಲೆ

August 9, 2018

ಮೈಸೂರು: ಪುಂಡರ ಗುಂಪೊಂದು ಕೆಎಸ್ಆರ್‌ಟಿಸಿ ಬಸ್ ಚಾಲಕ ಮತ್ತು ನಿರ್ವಾಹಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಶ್ರೀರಂಗಪಟ್ಟಣ ತಾಲೂಕು ಹಂಪಾಪುರ ಬಳಿ ಕಳೆದ ರಾತ್ರಿ ನಡೆದಿದೆ.

ಮೈಸೂರಿನ ಸಾತಗಳ್ಳಿ ಕೆಎಸ್ಆರ್‌ಟಿಸಿ ಡಿಪೋಗೆ ಸೇರಿದ ಮೈಸೂರು ನಗರ ಸಾರಿಗೆ ಬಸ್ ಮಾರ್ಗ ಸಂಖ್ಯೆ 110ಬಿ/01ರ ಚಾಲಕ ಸ್ವಾಮಿಗೌಡ ಮತ್ತು ನಿರ್ವಾ ಹಕ ಮಾದೇಗೌಡ ಹಲ್ಲೆಗೊಳಗಾದವ ರಾಗಿದ್ದು, ಕಾವೇರಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೈಸೂರಿನಿಂದ ಹೆಬ್ಬಾಡಿಗೆ ತೆರಳುತ್ತಿದ್ದ ಈ ಬಸ್ ಕಳೆದ ರಾತ್ರಿ ಹಂಪಾಪುರ ಗ್ರಾಮ ದಲ್ಲಿ ಪ್ರಯಾಣಿಕರನ್ನು ಇಳಿಸಿದ ನಂತರ ಮುಂದೆ ಸಾಗಿದೆ. ಹಂಪಾಪುರ ಗೇಟ್ ಬಳಿ ಕೆಲ ಪುಂಡ ಯುವಕರು ರಸ್ತೆ ಮಧ್ಯೆ ನಿಂತು ಮಾತನಾಡುತ್ತಿದ್ದರೆನ್ನಲಾಗಿದ್ದು, ಬಸ್ ಚಾಲಕ ಸ್ವಾಮಿಗೌಡ ಹಾರನ್ ಹೊಡೆದಾಗ, ಪುಂಡರ ಗುಂಪು ಕಲ್ಲು ತೂರಿ ಬಸ್‍ನ ಗಾಜುಗಳನ್ನು ಒಡೆದು ಹಾಕಿದೆ. ಚಾಲಕ ಮತ್ತು ನಿರ್ವಾಹಕ ಬಸ್‍ನಿಂದ ಇಳಿದು ಪ್ರಶ್ನಿಸಿದಾಗ ಅವರ ಮೇಲೆ ಗುಂಪು ಮಾರಣಾಂತಿಕ ಹಲ್ಲೆ ನಡೆಸಿದ್ದು, ಪ್ರಯಾಣಿಕರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಆಗಮಿ ಸುತ್ತಿದ್ದಂತೆಯೇ ಗುಂಪು ಪರಾರಿಯಾ ಗಿದೆ. ಈ ವೇಳೆ ಪೊಲೀಸರು ಮೂವ ರನ್ನು ಬಂಧಿಸಿದ್ದಾರೆ. ತೀವ್ರವಾಗಿ ಗಾಯ ಗೊಂಡ ಸ್ವಾಮಿಗೌಡ ಮತ್ತು ಮಾದೇಗೌಡರನ್ನು ಮೈಸೂರಿನ ಕಾವೇರಿ ಆಸ್ಪತ್ರೆಗೆ 108 ಆಂಬುಲೆನ್ಸ್‍ನಲ್ಲಿ ತಂದು ದಾಖಲಿಸಲಾಗಿದ್ದು, ಸ್ವಾಮಿಗೌಡ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಬಂಧ ಅರಕೆರೆ ಪೊಲೀಸರು ರಮ್ಮನಹಳ್ಳಿ ಗ್ರಾಮದ ರವಿ, ಮಂಜುನಾಥ್, ಸಣ್ಣ, ಕುಮಾರ ಮತ್ತಿತರರ ವಿರುದ್ಧ ಭಾರತ ದಂಡ ಸಂಹಿತೆ 143, 147, 148, 341, 353, 504, 427, 307 ಮತ್ತು 149ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ರವಿ, ಮಂಜುನಾಥ್ ಮತ್ತು ಸಣ್ಣ ಎಂಬುವವರನ್ನು ಬಂಧಿಸಲಾಗಿದ್ದು, ಕುಮಾರ ಸೇರಿದಂತೆ ಏಳು ಮಂದಿಗಾಗಿ ಹುಡುಕಾಟ ನಡೆಸಿದ್ದಾರೆ.

ಮೈಸೂರಲ್ಲೂ ಹಲ್ಲೆ: ಮತ್ತೊಂದು ಪ್ರಕರಣದಲ್ಲಿ ಇಬ್ಬರು ಕೆಎಸ್ಆರ್‌ಟಿಸಿ ಬಸ್ ಚಾಲಕ ಕಂ ನಿರ್ವಾಹಕರ ಮೇಲೆ ಮೈಸೂರಿನಲ್ಲಿ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.ಪ್ರಸನ್ನ ಕುಮಾರ್ ಮತ್ತು ಗೋಪಾಲ್ ಎಂಬುವವರೇ ಹಲ್ಲೆಗೆ ಒಳಗಾದವ ರಾಗಿದ್ದು, ರಾತ್ರಿ ಪಾಳಿ ಕೆಲಸಕ್ಕೆ ಬಂದಿದ್ದ ಇವರು ಊಟಕ್ಕಾಗಿ ತೆರಳುತ್ತಿದ್ದ ವೇಳೆ ಕೆ.ಆರ್. ಸರ್ಕಲ್ ಬಳಿ ಇರುವ ಕಳಿಂಗ ಬಾರ್ ಮುಂದೆ ಕೆಲವರು ಜಗಳವಾಡುತ್ತಿದ್ದರೆನ್ನ ಲಾಗಿದ್ದು, ಈ ಗುಂಪು ಏಕಾಏಕಿ ಇವರಿಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ. ತೀವ್ರವಾಗಿ ಗಾಯಗೊಂಡಿರುವ ಪ್ರಸನ್ನ ಕುಮಾರ್ ಮತ್ತು ಗೋಪಾಲ್, ಕಾವೇರಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿದ್ದು, ಮಾತನಾಡುವ ಸ್ಥಿತಿಯಲ್ಲಿರದ ಕಾರಣ ಅವರಿಂದ ಪೊಲೀಸರು ಹೇಳಿಕೆ ಪಡೆಯಲಿಲ್ಲವಾದರೂ, ಆಸ್ಪತ್ರೆಯ ವೈದ್ಯರಿಂದ ಬಂದ ವರದಿ ಆಧರಿಸಿ ದೇವರಾಜ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

Translate »