ಚಾಮುಂಡೇಶ್ವರಿ ದೇವಾಲಯದಲ್ಲಿ ಅಭಿಷೇಕ ಸೇವೆ ಶುಲ್ಕ 550 ರೂ.ಗೆ ಏರಿಕೆ
ಮೈಸೂರು

ಚಾಮುಂಡೇಶ್ವರಿ ದೇವಾಲಯದಲ್ಲಿ ಅಭಿಷೇಕ ಸೇವೆ ಶುಲ್ಕ 550 ರೂ.ಗೆ ಏರಿಕೆ

August 9, 2018

ಮೈಸೂರು: ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಿಗೆ ಅಭಿಷೇಕ ಸೇವೆ ಶುಲ್ಕ 300 ರೂ.ನಿಂದ 550ರೂ.ಗೆ ಹೆಚ್ಚಳ ಮಾಡಿದ್ದು, ಇಬ್ಬರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ದೇವಾಲಯ ಆಡಳಿತ ಮಂಡಳಿ ನಿರ್ಧರಿಸಿದೆ.

ಚಾಮುಂಡಿ ಬೆಟ್ಟ ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿತಾಣವೂ ಆಗಿದೆ. ಹಾಗಾಗಿ ಪ್ರತಿ ನಿತ್ಯ ಸಾವಿರಾರು ಮಂದಿ ಇಲ್ಲಿಗೆ ಆಗಮಿಸುತ್ತಾರೆ. ದೇವಿಗೆ ಅಭಿಷೇಕಕ್ಕೆ ಈ ಹಿಂದೆ ಇದ್ದ 300 ರೂ ಶುಲ್ಕ ವನ್ನು 550 ರೂ.ಗೆ ಕಳೆದ ಒಂದೂವರೆ ತಿಂಗಳ ಹಿಂದೆಯೇ ಹೆಚ್ಚಿಸಲಾಗಿದೆ. ಒಬ್ಬರಿಗೆ ಇದ್ದ ಪ್ರವೇಶವನ್ನು ಇಬ್ಬರಿಗೆ ಹೆಚ್ಚಿಸಲಾಗಿದೆ. ಈ ನಿರ್ಧಾರ ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ.

ಅಭಿಷೇಕ ಸೇವೆ ಶುಲ್ಕ ಹೆಚ್ಚಳಕ್ಕೆ ಸಂಬಂಧಿಸಿದಂತೆ ದೇವಾಲಯದ ಇಓ ಕೆ.ಎಂ.ಪ್ರಸಾದ್, `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಈ ಹಿಂದೆ ಅಭಿಷೇಕ ಸೇವೆಗೆ 300 ರೂ. ಶುಲ್ಕ ಪಡೆದು ಒಬ್ಬರಿಗೆ ಮಾತ್ರ ದೇವಾಲಯಕ್ಕೆ ನೇರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿತ್ತು. ಅಲ್ಲದೆ ಆಷಾಢ ಶುಕ್ರವಾರದಂದು ಅಭಿಷೇಕದ ಟಿಕೆಟ್ ಪಡೆದಿರುವವರು 50 ರೂ. ಟಿಕೆಟ್ ಮೂಲಕ ದರ್ಶನಕ್ಕೆ ಅವಕಾಶವಿತ್ತು. ಈಗ ಆಷಾಢ ಮಾಸದ ಶುಕ್ರವಾರದ ಪೂಜೆಯ ದಿನ ಅಭಿಷೇಕದ ಟಿಕೆಟ್ ಪಡೆದಿರುವವರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿದೆ. ಈ ಹಿಂದೆ ಒಬ್ಬರಿಗೆ ಪ್ರವೇಶ ನೀಡಲಾಗುತ್ತಿತ್ತು. ಈಗ ಇಬ್ಬರಿಗೆ ಪ್ರವೇಶಾವಕಾಶ ನೀಡಲಾಗುತ್ತಿದೆ. ಇದರೊಂದಿಗೆ ಅಭಿಷೇಕದ ಪ್ರಸಾದವನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ದೇವಾಲಯಕ್ಕೆ ಒಬ್ಬರು ಭಕ್ತರು ಬಂದು ಅಭಿಷೇಕದ ಟಿಕೆಟ್ ಕೇಳಿದರೆ ಅವರಿಗೆ 300 ರೂ. ಟಿಕೆಟ್ ಬೇಕಾದರೂ ಪಡೆಯಬಹುದಾಗಿದೆ. ಇದಕ್ಕೆ ಒಂದು ಲಾಡು ನೀಡಲಾಗುತ್ತದೆ. ಭಕ್ತರ ಒತ್ತಾಯದ ಮೇರೆಗೆ ಇಬ್ಬರಿಗೆ ಅವಕಾಶ ನೀಡಿ 550 ರೂ. ದರ ನಿಗಧಿ ಮಾಡಲಾಗಿದೆ. ಎಲ್ಲಾ ಸೇವೆಗಳಿಗೆ ನಿಗಧಿ ಮಾಡಿರುವ ಶುಲ್ಕವನ್ನು ವೆಬ್‍ಸೈಟ್‍ನಲ್ಲಿ ಹಾಕಲಾಗಿದೆ. ಎಲ್ಲವೂ ಪಾರದರ್ಶಕವಾಗಿ ನಡೆಯುತ್ತಿದೆ. ಅಲ್ಲದೆ ದೇವಾಲಯಕ್ಕೆ ಬರುವ ಭಕ್ತರು ಇಂತಿಷ್ಟೇ ಹಣ ನೀಡುವಂತೆ ಎಂದಿಗೂ ಬಲವಂತ ಮಾಡದಂತೆ ಕೌಂಟರ್‍ನಲ್ಲಿರುವ ಸಿಬ್ಬಂದಿಗೆ ಸೂಚಿಸಿದ್ದೇನೆ. 100 ರೂ., 200 ರೂ., 300 ರೂ. ಪಾವತಿಸಿದರೂ ರಶೀದಿ ನೀಡಿ ದೇವಾಲಯಕ್ಕೆ ಕಳುಹಿಸುವಂತೆ ತಿಳಿಸಿದ್ದೇನೆ. ಆಷಾಢ ಮಾಸದ ಶುಕ್ರವಾರದಂದು ಮಾತ್ರ ವಿಶೇಷ ಪ್ರವೇಶಕ್ಕೆ 300 ರೂ. ನಿಗಧಿ ಮಾಡಲಾಗಿದೆ. ಸಾಮಾನ್ಯ ದಿನಗಳಲ್ಲಿ ವಿಶೇಷ ದರ್ಶನಕ್ಕೆ 100 ರೂ. ಶುಲ್ಕ ನಿಗಧಿ ಮಾಡಲಾಗಿದೆ ಎಂದು ವಿವರಿಸಿದರು.

Translate »