ಸಲಗನ ದಾಳಿಗೆ ಆಟೋ ಜಖಂ
ಕೊಡಗು

ಸಲಗನ ದಾಳಿಗೆ ಆಟೋ ಜಖಂ

June 29, 2018

ಮಡಿಕೇರಿ: ಒಂಟಿ ಸಲಗದ ದಾಳಿಯಿಂದ ಆಟೋ ಒಂದು ಜಖಂಗೊಂಡ ಘಟನೆ ಮಡಿಕೇರಿ ಸಮೀಪದ ಪೊನ್ನಚೆಟ್ಟಿ ಎಸ್ಟೇಟ್ ಬಳಿ ಸಂಭವಿಸಿದೆ. ಭಜರಂಗದಳದ ತಾಲೂಕು ಉಪಾಧ್ಯಕ್ಷ ದುರ್ಗೇಶ್ ಎಂಬವರಿಗೆ ಸೇರಿದ ಆಟೋ ಜಖಂಗೊಂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ದುರ್ಗೇಶ್ ಬುಧವಾರ ಸಂಜೆ ತಮ್ಮ ಮನೆ ಬಳಿ ಆಟೋ ನಿಲ್ಲಿಸಿ ತೆರಳಿದ್ದರು. ರಾತ್ರಿ ವೇಳೆ ಧಾಳಿ ಮಾಡಿದ ಒಂಟಿ ಸಲಗ, ಆಟೋ ರಿಕ್ಷಾವನ್ನು ಉರುಳಿಸಿ ಮೇಲು ಹೊದಿಕೆಯನ್ನು ದಂತದಿಂದ ತಿವಿದು, ಹರಿದು ಹಾಕಿದೆ. ಮಾತ್ರವಲ್ಲದೆ ಕಾಫಿ ತೋಟಕ್ಕೆ ತೆರಳಿದ ಸಲಗ, ಕಾಫಿ ತೋಟ ಧ್ವಂಸ ಮಾಡಿದ್ದು ಬಾಳೆ, ಅಡಿಕೆ ಫಸಲಿಗೆ ಹಾನಿ ಮಾಡಿದೆ.

ಗ್ರಾಮಸ್ಥರಿಂದ ಮಾಹಿತಿ ಪಡೆದ ಮಡಿಕೇರಿ ಉಪವಲಯ ಅರಣ್ಯಾಧಿಕಾರಿ ಬಾಬು ರಾಥೋಡ್ ಮತ್ತು ರ್ಯಾಪಿಡ್ ರೆಸ್ಪಾನ್ಸ್ ತಂಡದ ಸಿಬ್ಬಂದಿ ಗಳು, ಹಾನಿಯ ಕುರಿತು ಪರಿಶೀಲನೆ ನಡೆಸಿದರು. ಈ ಸಂದರ್ಭ ಸ್ಥಳೀಯ ನಿವಾಸಿಗಳು ಅರಣ್ಯ ಇಲಾಖೆ ನೀಡುವ ಅಲ್ಪ ಪರಿಹಾರ ನಮಗೆ ಬೇಡ, ಕಾಡಾನೆಗಳು ನಾಡಿಗೆ ಬರದಂತೆ ತಡೆಯಲು ಶಾಶ್ವತ ಪರಿಹಾರ ರೂಪಿಸಬೇಕೆಂದು ಒತ್ತಾಯಿಸಿದರು.

Translate »