ನ.29ರಂದು ಕೈಗಾರಿಕೋದ್ಯಮಿಗಳಿಗೆ  ಮೈಸೂರಲ್ಲಿ ಅರಿವು ಕಾರ್ಯಕ್ರಮ
ಮೈಸೂರು

ನ.29ರಂದು ಕೈಗಾರಿಕೋದ್ಯಮಿಗಳಿಗೆ  ಮೈಸೂರಲ್ಲಿ ಅರಿವು ಕಾರ್ಯಕ್ರಮ

November 27, 2018

ಮೈಸೂರು:  ಕರ್ನಾಟಕ ಸರ್ಕಾರದ ಎಂಎಸ್‍ಎಂಇ ನಿರ್ದೇಶನಾಲಯ, ಭಾರತ ಸರ್ಕಾರದ ಎಂಎಸ್‍ಎಂಇ ಅಭಿವೃದ್ಧಿ ಸಂಸ್ಥೆ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ, ಜಿಲ್ಲಾ ಕೈಗಾರಿಕಾ ಕೇಂದ್ರ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪರಿಷತ್, ಮೈಸೂರು ಕೈಗಾರಿಕೆಗಳ ಸಂಘ ಹಾಗೂ ಮೈಸೂರಿನ ಎಲ್ಲಾ ಕೈಗಾರಿಕಾ ಸಂಸ್ಥೆ ಸಂಯುಕ್ತಾಶ್ರಯ ದಲ್ಲಿ ಕರ್ನಾಟಕ ಸರ್ಕಾರದ ಕೈಗಾರಿಕಾ ನೀತಿ 2014-19 ಹಾಗೂ ವ್ಯವಹಾರ ಚಟು ವಟಿಕೆಗೆ ಸರಳೀಕೃತ ಪರಿಸರದ ಅರಿವು ಮೂಡಿಸುವ ಕಾರ್ಯಕ್ರಮವನ್ನು ನ.29 ರಂದು ಬೆಳಿಗ್ಗೆ 10.30ಕ್ಕೆ ನಗರದ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಆಯೋಜಿಸಿದೆ.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಕಾರ್ಯಕ್ರಮವನ್ನು ಉದ್ಘಾಟಿಸುವರು. ಸಣ್ಣ ಕೈಗಾರಿಕಾ ಸಚಿವ ಎಸ್.ಆರ್. ಶ್ರೀನಿವಾಸ್, ಮಹಾಪೌರರಾದ ಪುಷ್ಪಲತಾ ಜಗನ್ನಾಥ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ತನ್ವೀರ್ ಸೇಠ್, ಆರ್.ಧರ್ಮಸೇನ, ಕೈಗಾರಿಕಾ ಇಲಾಖೆ ನಿರ್ದೇಶಕ ದರ್ಪಣ್ ಜೈನ್, ಕಾಸಿಯಾ ಅಧ್ಯಕ್ಷ ಬಸವರಾಜ್ ಎಸ್.ಜವಳಿ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಬಿ.ಸಿ.ಶಿವಪ್ರಕಾಶ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಾಸಕರಾದ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದು, ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷ ವಾಸು ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೈಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳು ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಕೈಗಾರಿಕಾ ನೀತಿ ಮತ್ತು ಯೋಜನೆಗಳ ಬಗ್ಗೆ ವಿವರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೈಗಾರಿಕಾ ನೀತಿಯಲ್ಲಿರುವ ಯೋಜನೆಗಳು ರಿಯಾಯಿತಿ, ವಿನಾಯಿತಿ, ಭಾರತದಲ್ಲಿ ಮೊದಲ ಬಾರಿಗೆ ಕರ್ನಾಟಕ ಸರ್ಕಾರ ಸಣ್ಣ ಕೈಗಾರಿಕೆಗಳಿಗೆ ನೀಡಲಿರುವ ಶೇ.4 ಬಡ್ಡಿ ದರದ ಸಾಲದ ಯೋಜನೆ, ಪರಿಶಿಷ್ಟ ಜಾತಿ, ವರ್ಗ, ಅಲ್ಪ ಸಂಖ್ಯಾತ, ಮಹಿಳಾ ಮತ್ತು ಹಿಂದುಳಿದ ವರ್ಗದ ಉದ್ಯಮಿಗಳಿಗೆ ಲಭ್ಯವಿರುವ ಸುಲಭ ಕಂತುಗಳ ಶೇ.25ರಿಂದ 50ರಷ್ಟು ರಿಯಾಯಿತಿ ದರದ ಕೈಗಾರಿಕಾ ನಿವೇಶನ ಮತ್ತು ಶೆಡ್‍ಗಳನ್ನು ಪಡೆಯುವ ಯೋಜನೆ ಬಗ್ಗೆ ಅರಿವು ಮೂಡಿಸಲಾಗುವುದು.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ರಾಜ್ಯಾದ್ಯಂತ ಇರುವ ಪ್ರತಿನಿಧಿಗಳು, ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಮುನ್ನೂರಕ್ಕೂ ಹೆಚ್ಚು ಹಾಲಿ ಮತ್ತು ಭಾವಿ ಕೈಗಾರಿಕೋದ್ಯಮಿಗಳು ಭಾಗವಹಿಸಲು ನೋಂದಾಯಿಸಿದ್ದಾರೆ ಎಂದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪರಿಷತ್ ಅಧ್ಯಕ್ಷ ರವಿ ಕೋಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »