ಮಂಡ್ಯದಲ್ಲಿ ಅಂಬರೀಶ್‍ಗೆ ಅಪಾರ ಅಶ್ರುತರ್ಪಣ
ಮಂಡ್ಯ, ಮೈಸೂರು

ಮಂಡ್ಯದಲ್ಲಿ ಅಂಬರೀಶ್‍ಗೆ ಅಪಾರ ಅಶ್ರುತರ್ಪಣ

November 26, 2018

ಮಂಡ್ಯ: ಭಾನುವಾರ ಮುಸ್ಸಂಜೆ ನಗರದೆಲ್ಲೆಡೆ ದುಃಖದ ಕಾರ್ಮೋಡ ಕವಿದಿತ್ತು. ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದೊಳಕ್ಕೆ ಸೂರ್ಯನ ಕಿರಣಗಳು ಸಹ `ಮಂಡ್ಯದ ಗಂಡಿನ’ ಅಂತಿಮ ದರ್ಶನ ಪಡೆಯಲು ಪರದಾಡುವಷ್ಟು ಅಭಿಮಾನಿಗಳ ಸಾಗರವೇ ತುಂಬಿತ್ತು. ಅಭಿಮಾನಿಗಳ ಕಂಬನಿ ಹರಿದಿತ್ತು, ವೇದಿಕೆಗೆ ಹತ್ತಿದಾಗಲೆಲ್ಲಾ ಸಿಳ್ಳೆ, ಕೇಕೆ ಹಾಕುತ್ತಾ ಅಂಬರೀಶ್ ಅಣ್ಣಾಂಗೇ… ಎಂದು ಗದ್ದಲ ವೆಬ್ಬಿಸುವ ಅಭಿಮಾನಿಗಳನ್ನು `ಲೇ ಸುಮ್ಮನಿ ರಲ್ಲೋ, ಸುಮ್ನೆ ನಿಂತ್ಕೊಳ್ರೋ ಅಂತೆಲ್ಲಾ ಸದಾ ಕೆಂಡಕಾರುತ್ತಿದ್ದ ಕಣ್ಣುಗಳು ಸೋತು ಎವೆಯಿಕ್ಕದೆ ಮುಚ್ಚಿದ್ದವು, ಮೈಸೂರು ಪೇಟ ಧರಿಸಿ ಮಲಗಿದ್ದ ಅಂಬರೀಶ್ ಯಾವ ಕ್ಷಣದಲ್ಲಾದರೂ ಎದ್ದು `‘ನಿಮ್ಮ ಮಂಡ್ಯದ ಗಂಡನ್ನ ಇಷ್ಟು ದೊಡ್ಡ ಮಟ್ಟಕ್ಕೆ ಬೆಳಿಸಿದ್ದೀರಿ, ಯಾವು ದಕ್ಕೂ ಕೊರತೆ ಇಲ್ಲದಂತೆ ಬೆಳಿಸಿದ್ದೀರಿ, ನಿಮ್ಮ ಈ ಪ್ರೀತಿ ಅಭಿಮಾನಕ್ಕೆ ಚಿರಋಣಿ’’ ಎನ್ನಬಹುದು ಎಂಬಂತೆ ಭಾಸವಾಗುತ್ತಿತ್ತು..!

ಮುಸ್ಸಂಜೆ ಅಂಬರೀಶ್ ಅಂತಿಮ ದರ್ಶನ ಆರಂಭವಾಗಿದ್ದು ಹೀಗೆ.. ಸಂಜೆ 5ಕ್ಕೆ ಅಂಬರೀಶ್ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಮಂಡ್ಯ ನಗರದ ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಇಂಡಿಯನ್ ಏರ್ ಫೋರ್ಸ್ ಹೆಲಿಕಾಪ್ಟರ್(ಜಡ್. 3009)ನಲ್ಲಿ ತರಲಾಯಿತು. ಅಷ್ಟರ ಲ್ಲಿಯೇ ಕ್ರೀಡಾಂಗಣದ ಸುತ್ತ 20 ಸಾವಿ ರಕ್ಕೂ ಹೆಚ್ಚು ಅಭಿಮಾನಿಗಳು ನೆರೆದಿದ್ದರು. ಅಂಬಿ ಪಾರ್ಥಿವ ಶರೀರದ ಜೊತೆಯೇ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಅಂಬರೀಶ್ ಪತ್ನಿ ಸುಮಲತಾ, ಪುತ್ರ ಅಭಿಷೇಕ್, ಸಚಿವ ಸಾ.ರಾ.ಮಹೇಶ್ ಆಗಮಿಸಿದರು.

ಕ್ರೀಡಾಂಗಣದ ಮುಖ್ಯ ಗೇಟ್‍ನಲ್ಲಿ ವಿಐಪಿಗಳಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ದಕ್ಷಿಣ ಮತ್ತು ಉತ್ತರದ ಗೇಟ್‍ನಲ್ಲಿ ಸಾರ್ವಜನಿಕರಿಗೆ ಅವಕಾಶ ನೀಡಲಾಗಿತ್ತು. ಪುಟ್ಟ ಮಕ್ಕಳು, ವೃದ್ಧರು, ಹೆಂಗಸರು ಎಲ್ಲರೂ ಇದ್ದರು. ಕ್ಷಣ ಕ್ಕೊಮ್ಮೆ ‘ಅಂಬರೀಶಣ್ಣ ನಿಗೇ ಜಯವಾಗಲಿ… ಮಂಡ್ಯದ ಗಂಡಿಗೆ ಜಯ ವಾಗಲಿ ಘೋಷಗಳು ಮೊಳಗುತ್ತಲೇ ಇದ್ದವು. ಕೈಯ್ಯಲ್ಲಿ ಮೊಬೈಲ್ ಹಿಡಿದು ಕೊಂಡು ಪಾರ್ಥಿವ ಶರೀರದ ಫೋಟೋ ತೆಗೆಯಲು ಯತ್ನಿಸುತ್ತಿರುವ ಅಭಿಮಾನಿ ಗಳನ್ನು ಸಾಗಹಾಕಲು ಪೊಲೀಸರು ಹರಸಾಹಸ ಪಡುತ್ತಿದ್ದರು. ಮುಗಿಲು ಮುಟ್ಟುವ ಜಯಕಾರದ ಜೊತೆಗೇ ಮೃತದೇಹ ಕಂಡು

‘ಅಣ್ಣಾ… ನಮ್ಮನ್ನು ಬಿಟ್ಬುಟ್ಟು ಹೋಗ್ಬಿಟ್ಯಲ್ಲಾ… ಅಣ್ಣಾ…’ಎಂಬ ರೋಧನವೂ ಕೇಳಿಸುತ್ತಿತ್ತು. ನೆಚ್ಚಿನ ಅಂಬರೀಶಣ್ಣನ ದರ್ಶನಕ್ಕಾಗಿ ಕಿಲೋಮೀಟರ್‍ವರೆಗೆ ಸರತಿ ಸಾಲಿನಲ್ಲಿ ಅಭಿಮಾನಿಗಳು ನಿಂತಿದ್ದು ಕಂಡು ಬಂತು. ವಿಐಪಿಗಳಿಗೆ ಪ್ರತ್ಯೇಕ ದರ್ಶನ ವ್ಯವಸ್ಥೆ ಕಲ್ಪಿಸಿರುವ ಕುರಿತೂ ಆಕ್ರೋಶ ವ್ಯಕ್ತವಾಯಿತು. ‘ಅವ್ರು ಮಾತ್ರ ಆರಾಮಾಗಿ ನಿಂತ್ಕಂಡು ನೋಡ್ತವ್ರೆ. ನಮ್ಮನ್ನು ಇಲ್ಲಿ ಸರಿಯಾಗಿ ನೋಡಕೂ ಬಿಡದಂಗೆ ತಳ್ತಾರೆ ಪೊಲೀಸ್ರು’ ಎಂದು ಹಲವು ಅಭಿಮಾನಿಗಳು ಗೊಣಗುತ್ತಿದ್ದುದು ಕಂಡು ಬಂತು. ಒಟ್ಟಾರೆ ಕರ್ಮ ಭೂಮಿ ಬೆಂಗಳೂರಿನಿಂದ ಜನ್ಮಭೂಮಿ ಮಂಡ್ಯಕ್ಕೆ ಬಂದ `ಅಂಬಿ’ ಅಂತಿಮಯಾತ್ರೆಯಲ್ಲಿ ಅಭಿಮಾನ..ನಮನ..ಆಕ್ರಂದನವೇ ಕಂಡು ಬಂತು.!

ಸಚಿವ ಸಿ.ಎಸ್.ಪುಟ್ಟರಾಜು ಖುದ್ದು ನಿರ್ವಹಣೆ: ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರೇ ಖುದ್ದು ಸ್ಥಳದಲ್ಲಿಯೇ ಹಾಜರಿದ್ದು ಎಲ್ಲಾ ಕಾರ್ಯಗಳ ನಿರ್ವಹಣೆಯ ಜೊತೆಗೆ ಪೊಲೀಸರಿಗೆ ಭದ್ರತೆಯ ಬಗ್ಗೆ ಸೂಚನೆ ನೀಡುತ್ತಿದ್ದರು. ಅಂಬರೀಶ್ ಆಪ್ತರಾದ ಅಮರಾವತಿ ಚಂದ್ರಶೇಖರ್, ಬೇಲೂರು ಸೋಮಶೇಖರ್ ಮತ್ತಿತರರು ಸಾಥ್ ನೀಡುತ್ತಿದ್ದುದು ಕಂಡು ಬಂತು.

ಗಣ್ಯರ ಕಂಬನಿ: ಕತ್ತಲೆಯಾಗುತ್ತಿದ್ದರೂ ಚಿತ್ರರಂಗದ, ರಾಜಕೀಯ ಕ್ಷೇತ್ರದ ಗಣ್ಯರು ಅಂತಿಮ ದರ್ಶನ ಪಡೆದುಕೊಳ್ಳಲು ಬರುತ್ತಲೇ ಇದ್ದರು. ಸಂಜೆ 6.30ಕ್ಕೆ ಸುತ್ತೂರು ದೇಶೀಕೇಂದ್ರ ಮಹಾಸ್ವಾಮೀಜಿ, ಚುಂಚನಗಿರಿ ಮಠದ ಪುರುಷೋತ್ತಮಾನಂದ ಸ್ವಾಮೀಜಿ, ಸಾರಿಗೆ ಸಚಿವ ಜಿ.ಟಿ.ದೇವೆಗೌಡ, ಮಾಜಿ ಸಂಸದ ಜಿ.ಮಾದೇಗೌಡ, ಸಂಸದ ಎಲ್.ಆರ್.ಶಿವರಾಮೇಗೌಡ, ಬಿಜೆಪಿಯ ಸಿ.ಟಿ.ರವಿ, ಮಾಜಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಕೆ.ಸುರೇಶ್‍ಗೌಡ ದಂಪತಿ, ರವೀಂದ್ರ ಶ್ರೀಕಂಠಯ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಆತ್ಮಾನಂದ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಮಾಜಿ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ಜಿ.ಬಿ ಶಿವಕುಮಾರ್, ಕಲ್ಪನಾ ಸಿದ್ದರಾಜು, ಮಾಜಿ ಸಚಿವ ನರೇಂದ್ರಸ್ವಾಮಿ, ಚಿತ್ರನಟರಾದ ಮಂಡ್ಯ ರಮೇಶ್ ದಂಪತಿ, ಅನಂತನಾಗ್- ಗಾಯತ್ರಿ ದಂಪತಿ, ರಾಕ್‍ಲೈನ್ ವೆಂಕಟೇಶ್, ನಿರ್ದೇಶಕ ಪ್ರೇಮ್, ನಿಖಿಲ್, ಯಶ್, ರವಿಶಂಕರ್ ಕುಮಾರಸ್ವಾಮಿ ಸೇರಿದಂತೆ ರಾಜಕೀಯ ಗಣ್ಯರು, ಚಿತ್ರರಂಗದ ಹಲವು ಗಣ್ಯರು ಬಂದು ಅಂತಿಮ ದರ್ಶನ ಪಡೆದರು. ಇದಕ್ಕೂ ಮುನ್ನ ಬೆಂಗಳೂರಿನಿಂದ ಬಂದ ಅಂಬರೀಶ್ ಪಾರ್ಥಿವ ಶರೀರಕ್ಕೆ ಡಿಸಿ ಎನ್. ಮಂಜುಶ್ರೀ ನೇತೃತ್ವದಲ್ಲಿ ಪುಷ್ಪನಮನ ಸಲ್ಲಿಸಲಾಯಿತು.

1_Page

ಗಣ್ಯರ ಅಭಿಪ್ರಾಯ: ಅಂಬರೀಶ್ ಅವರ ಏಕವಚನವೇ ಜನ್ರಿಗೆ ಇಷ್ಟವಾಗಿತ್ತು, ಒಮ್ಮೆ ಅವರು ನನ್ನ ಕ್ಷೇತ್ರಕ್ಕೆ ಭೇಟಿ ನೀಡಿದ್ರು. ಆ ವೇಳೆ ನಾನು ರವಿ ಮನೆಯಲ್ಲೇ ಊಟ ಮಾಡ್ತೀನಿ ಅಂತಾ ಬಂದಿದ್ರು ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ನೆನಪಿಸಿಕೊಂಡರು.

ಅಪಘಾತದಲ್ಲಿ 30ಕ್ಕೂ ಹೆಚ್ಚು ಜನ ಬಲಿಯಾದದ್ದು ಕರಾಳ ದಿನ. ಅದೇ ದಿನ ರಾಷ್ಟ್ರಕ್ಕೆ ಗೌರವ ತಂದುಕೊಟ್ಟ ರಾಜ್‍ಕುಮಾರ್ ಅವರಷ್ಟೇ ಎತ್ತರಕ್ಕೆ ಬೆಳೆದಿದ್ದ ದಿಗ್ಗಜ ಅಂಬರೀಶ್ ಸಾವು ಮತ್ತಷ್ಟು ದುಃಖ ಹೆಚ್ಚಿಸಿದೆ ಎಂದು ಮಾಜಿ ಸಚಿವ ಚಲುವರಾಯ ಸ್ವಾಮಿ ಸಂತಾಪ ಸೂಚಿಸಿದ್ದಾರೆ. ಅಂಬರೀಶ್ ಅವರನ್ನು ಒಂದು ಕ್ಷಣವೂ ಮರೆಯಲು ಸಾಧ್ಯವಿಲ್ಲ. ದಿನೇ ದಿನೆ ಅವರ ನೆನಪು ಹೆಚ್ಚುತ್ತೆ. ನೋವು ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದರು.

ಇನ್ನು ಅಂಬಿ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಸುತ್ತೂರು ಶ್ರೀಗಳು, ಅಂಬರೀಶ್ ಅವರು ಮೃತಪಟ್ಟಿರುವುದು ನಿಜಕ್ಕೂ ವಿಷಾದಕರ. ಮಂಡ್ಯದಲ್ಲಿ ಹುಟ್ಟಿ ಮೈಸೂರಿನಲ್ಲಿ ಬೆಳೆದಂತವರು. ಕನ್ನಡ ನಾಡು ನುಡಿಗೆ ಬದ್ಧರಾಗಿದ್ದರು. ಅಂಬರೀಶ್ ಅವರದು ಕಲಾ ಕ್ಷೇತ್ರದಲ್ಲಿ ವಿಶಿಷ್ಟ ವ್ಯಕ್ತಿತ್ವ. ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದರು. ಮತ ಹಾಕಿ ಅಂತಾ ಕರೆಯದಿದ್ರೂ ಅವರೇ ಸ್ವತಃ ಬಂದು ನನ್ನ ಪರ ಮತ ಹಾಕಿದ್ರು. ಫೋನ್ ಮಾಡಿ ನೀನು ಗೆಲ್ಲುತ್ತಿಯಾ ಹೋಗು ಅಂತಾ ಹೇಳಿದ್ರು ಎಂದು ಸಂಸದ ಎಲ್. ಆರ್. ಶಿವರಾಮೇಗೌಡ ಸ್ಮರಿಸಿದರು.

ಆರೋಗ್ಯ ಸರಿಯಿಲ್ಲದಿದ್ದರೂ, ಚೈತನ್ಯ ಚಿಲುಮೆಯಾಗಿದ್ದರು. ಆರೋಗ್ಯದ ಬಗ್ಗೆ ವಿಚಾರಿಸಿದಾಗ ವಿಷಯವನ್ನು ಬೇರೆಡೆಗೆ ಹೊರಳಿಸುತ್ತಿದ್ದರು. ದೈಹಿಕವಾಗಿ ಅವರು ನಮ್ಮನ್ನು ಬಿಟ್ಟು ಹೋಗಿದ್ದಾರೆ, ಅಭಿಮಾನಿಗಳ ಹೃದಯದಲ್ಲಿ ಇನ್ನೂ ಜೀವಂತವಾಗಿದ್ದಾರೆ ಎಂದು ನಟ ಅನಂತನಾಗ್ ಹೇಳಿದರು. ಅಂಬರೀಶ್ ಅಂತಿಮ ದರ್ಶನ ಪಡೆದು ಬಳಿಕ ಮಾತನಾಡಿದ ಸಚಿವ ಹೆಚ್.ಡಿ.ರೇವಣ್ಣ, ಅಂಬರೀಶ್ ಒಬ್ಬ ಅಜಾತ ಶತ್ರು, ಚಿತ್ರರಂಗ ಒಬ್ಬ ಯಜಮಾನನ್ನು ಕಳೆದುಕೊಂಡಿದೆ. ಮಂಡ್ಯದ ಗಂಡನ್ನು ನಾವು ಕಳೆದುಕೊಂಡಿದ್ದೇವೆ ಎಂದರು. ಅಂಬರೀಶ್ ಅಂತಿಮ ದರ್ಶನದ ಬಳಿಕ ಮಾತನಾಡಿದ ಸಚಿವ ಜಿ.ಟಿ.ದೇವೇಗೌಡ, ಅಂಬರೀಶ್ ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದಿದ್ದರು. ಕಾವೇರಿ ವಿಚಾರ ಬಂದಾಗ ಕೇಂದ್ರದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಖಡಕ್ ಮಾತು, ಏಕವಚನ ಮೂಲಕ ಗಮನ ಸೆಳೆದಿದ್ದರು. ಅವರು ಕೇವಲ ಮಂಡ್ಯದ ಗಂಡಲ್ಲ, ನಾಡಿನ ಗಂಡು ಎಂದು ಬಣ್ಣಿಸಿದರು.

ಅಂಬರೀಶ್ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ಯಶ್, ಸಚಿವ ಪುಟ್ಟರಾಜು: ಮಂಡ್ಯದ ಜನರಿಗೂ ತಂದೆಯ ಕೊನೆಯ ದರ್ಶನ ಕೊಡಬೇಕು ಎಂಬ ಉದ್ದೇಶದಿಂದ ಅಂಬರೀಶ್ ಮಗ ಅಭಿಷೇಕ್ ಒತ್ತಾಯದಂತೆ ಸೇನಾ ವಿಶೇಷ ಹೆಲಿಕಾಪ್ಟರ್ ಮೂಲಕ ಮಂಡ್ಯಕ್ಕೆ ಬಂದ ಪಾರ್ಥಿವ ಶರೀರವನ್ನು ಹೆಲಿಕಾಫ್ಟರ್ ಬಳಿಯಿಂದ ದರ್ಶನಕ್ಕೆ ನಿಗದಿಪಡಿಸಿದ ಜಾಗದವರೆಗೂ ನಟ ಯಶ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ಸಚಿವ ಪುಟ್ಟರಾಜು ಮತ್ತಿತರರು ತಮ್ಮ ಹೆಗಲ ಮೇಲೆ ಹೊತ್ತು ಸಾಗಿದರು. ಚಿತ್ರರಂಗದವರ ಅನೇಕ ಸಮಸ್ಯೆಗಳಿಗೆ ಸದಾ ಮುಂದೆ ನಿಂತು ತಮ್ಮವರಿಗಾಗಿ ಅಂಬರೀಶ್ ಹೆಗಲಾಗಿ ನಿಲ್ತಿದ್ರು. ಇಂದು ಅವರ ಪಾರ್ಥಿವ ಶರೀರಕ್ಕೆ ಹೆಗಲು ನೀಡಿ ಯಶ್ ಹಾಗೂ ರಾಕ್‍ಲೈನ್ ವೆಂಕಟೇಶ್ ತಮ್ಮ ಗೌರವ ಸೂಚಿಸಿದ್ರು. ಸಚಿವ ಪುಟ್ಟರಾಜು ಸೇರಿದಂತೆ ಜೆಡಿಎಸ್‍ನ ಶಾಸಕರಾದ ಅನ್ನದಾನಿ, ಎಂ.ಶ್ರೀನಿವಾಸ್, ಕೆ.ಟಿ.ಶ್ರೀಕಂಠೇಗೌಡ, ಹೋಮ್ ಗಾರ್ಡ್ ಕಮಾಂಡೋ ಮಹೇಶ್ ಕೂಡ ಅಂಬಿ ಪಾರ್ಥಿವ ಶರೀರಕ್ಕೆ ತಮ್ಮ ಹೆಗಲು ನೀಡಿ ಗೌರವ ಸೂಚಿಸಿದ್ದುದು ಕಂಡು ಬಂತು.

ಎರಡು ಸಾವಿರ ಪೊಲೀಸ್ ನಿಯೋಜನೆ: ನಗರದ ಸರ್.ಎಂ.ವಿಶ್ವೇಶರಯ್ಯ ಕ್ರೀಡಾಂಗಣಕ್ಕೆ ಇಂದು ಸಂಜೆ ತರಲಾದ ನಟ ಅಂಬರೀಶ್ ಅವರ ಪಾರ್ಥಿವ ಶರೀರ ಅಂತಿಮ ದರ್ಶನ ವೇಳೆ ಸುಮಾರು 2000 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಕಾನೂನು ಸುವ್ಯವಸ್ಥೆ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಮಂಡ್ಯ, ಹಾಸನ ಮೈಸೂರಿನಿಂದ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ದಕ್ಷಿಣ ವಲಯ ಐಜಿಪಿ ಕೆ.ವಿ.ಶರತ್ ಚಂದ್ರ ಹಾಗೂ ಮಂಡ್ಯ ಎಸ್ಪಿ ಶಿವಪ್ರಕಾಶ್ ದೇವರಾಜ್ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

Translate »