ಮೈಸೂರು: ಗಣ್ಯ ಹಾಗೂ ಅತೀ ಗಣ್ಯ ವ್ಯಕ್ತಿಗಳ ಭದ್ರತೆ ಹಾಗೂ ಮನೆಯೊಳಗೆ ಅಡಗಿದ ಭಯೋತ್ಪಾದಕರ ವಿರುದ್ಧ ಹೋರಾಡುವ ಕಾರ್ಯಚರಣೆ ಬಗ್ಗೆ ಮೈಸೂರು ನಗರ ಪ್ಯಾಂಥರ್ಸ್ ಕಮಾಂಡೋ ಪಡೆಯ ಸಿಬ್ಬಂದಿಗಳು ಅತ್ಯಾಕರ್ಷಕ ಅಣಕು ಪ್ರದರ್ಶನ ನೀಡಿ ಗಣರಾಜ್ಯೋತ್ಸವದಲ್ಲಿ ಎಲ್ಲರ ಮನ ಸೆಳೆದರು.
ಮೈಸೂರಿನ ಬನ್ನಿಮಂಟಪದ ಕವಾಯಿತು ಮೈದಾನದಲ್ಲಿ ಶನಿವಾರ ನಡೆದ 70ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪಥಸಂಚಲನ ಮಾಡಿದ ಸಿಟಿ ಪ್ಯಾಂಥರಸ್ ಕಮಾಂಡೋ ತಂಡದ ಸಿಬ್ಬಂದಿಗಳು, ನಂತರ ಗಣ್ಯರನ್ನು ಭಯೋತ್ಪಾದಕರಿಂದ ರಕ್ಷಿಸಿ ಸುರಕ್ಷಿತವಾಗಿ ಕರೆದೊಯ್ಯುವ ಕಾರ್ಯಾಚರಣೆಯನ್ನು ಅಣಕು ಪ್ರದರ್ಶನ ನೀಡುವ ಮೂಲಕ ತೋರಿಸಿಕೊಟ್ಟರು. ಸಾರ್ವಜನಿಕ ಸಭೆ ಸಮಾರಂಭಗಳಿಗೆ ಅತೀ ಗಣ್ಯರನ್ನು ಶಸ್ತ್ರಸಜ್ಜಿತ ಪೊಲೀಸ್ ಸರ್ಪಗಾವಲಿನಲ್ಲಿ ಕರೆತಂದು ವೇದಿಕೆಗೆ ಬಿಟ್ಟನಂತರ ಎಂಟು ದಿಕ್ಕುಗಳಿಗೂ ಮುಖ ಮಾಡಿ ಎಕೆ 47ಗನ್ ಹಿಡಿದು ನಿಂತು ನಿಗಾ ವಹಿಸು ವುದರ ಬಗ್ಗೆ ಅವರು ಅಣಕು ಪ್ರದರ್ಶನ ಮಾಡಿದರು.
ಗಣ್ಯವ್ಯಕ್ತಿ ಮಾತನಾಡಲಾರಂಭಿಸಿದಾಗ ಚಪ್ಪಾಳೆ ಹೊಡೆ ಯುವ ಸಭಿಕರ ಸೋಗಿನಲ್ಲಿ ಕುಳಿತಿದ್ದ ಕೆಲವರು ಹಠಾತನೆ ಗಣ್ಯರೆಡೆಗೆ ಗುಂಡು ಹಾರಿಸಲೆತ್ನಿಸಿದಾಗ ನಿಗಾ ವಹಿಸುತ್ತಿದ್ದ ಭದ್ರತಾ ಸಿಬ್ಬಂದಿಗಳು ಅವರತ್ತ ಗುಂಡು ಹಾರಿಸಿ, ಗಣ್ಯ ವ್ಯಕ್ತಿಯನ್ನು ಸುತ್ತುವರಿದು ರಕ್ಷಿಸುವುದನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು.
ಮತ್ತೊಂದು ಪ್ರಸಂಗದಲ್ಲಿ ಒಂದು ಕಟ್ಟಡದೊಳಗೆ ಅಡಗಿ ರುವ ಭಯೋತ್ಪಾದಕರ ದುಷ್ಕøತ್ಯವನ್ನು ತಡೆಯಲು ಶಸ್ತ್ರಸಜ್ಜಿತ ರಾದ ಪ್ಯಾಂಥರ್ಸ್ ಕಮಾಂಡೋ ತಂಡದ ಸಿಬ್ಬಂದಿ ಬಾಗಿಲಿಗೆ ಬಾಂಬ್ ಸಿಡಿಸಿ ಒಳನುಸುಳಿ ಆಗಂತುಕರ ವಿರುದ್ಧ ಗುಂಡಿನ ದಾಳಿ ನಡೆಸಿ, ಅವರನ್ನು ಹತಮಾಡಿ ಸಂಭವಿಸಬಹುದಾದ ಭಾರೀ ವಿದ್ವಂಸಕ ಕೃತ್ಯಗಳನ್ನು ತಡೆಯುವ ಕಾರ್ಯಾಚರಣೆ ಬಗ್ಗೆಯೂ ಉತ್ತಮ ಪ್ರದರ್ಶನ ನಡೆಸಿ, ನೆರೆದಿದ್ದವರಿಂದ ಸೈ ಎನಿಸಿಕೊಂಡರು.