ಮೂಲ ಕಾಂಗ್ರೆಸ್ಸಿಗರಿಗೆ ಆಜಾದ್ ಅಭಯ
ಮೈಸೂರು

ಮೂಲ ಕಾಂಗ್ರೆಸ್ಸಿಗರಿಗೆ ಆಜಾದ್ ಅಭಯ

March 1, 2020

ಬೆಂಗಳೂರು, ಫೆ.29(ಕೆಎಂಶಿ)- ಪಕ್ಷದಲ್ಲಿ ಮೂಲ ಕಾಂಗ್ರೆಸ್ಸಿಗರನ್ನು ಕಡೆಗಾಣಿಸುವ ಪ್ರಶ್ನೆಯೇ ಇಲ್ಲ. ನಿಮಗೆ ದಕ್ಕಬೇಕಾದ ಅಧಿಕಾರ ಶೀಘ್ರದಲ್ಲೇ ಲಭ್ಯವಾಗ ಲಿದೆ ಎಂದು ಕಾಂಗ್ರೆಸ್‍ನ ಹಿರಿಯ ನಾಯಕ ಗುಲಾಮ್ ನಬೀ ಅಜಾದ್ ಇಂದಿಲ್ಲಿ ಶಾಸಕ ಡಿ.ಕೆ.ಶಿವಕುಮಾರ್‍ಗೆ ಭರವಸೆ ನೀಡಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿನ್ನೆ ನಗರಕ್ಕೆ ಬಂದಿದ್ದ ಆಜಾದ್, ಶನಿವಾರ ಬೆಳಿಗ್ಗೆ ಸದಾಶಿವ ನಗ ರದ ಶಿವಕುಮಾರ್ ಮನೆಗೆ ತೆರಳಿ, ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಮುಖಾಮುಖಿ ಚರ್ಚೆ ಮಾಡಿ ದರು. ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್ ಆಳ್ವ ಪಕ್ಷದ ವೇದಿಕೆಯಲ್ಲೇ ಸಿದ್ದರಾಮಯ್ಯ ಅವರ ನಡವಳಿಕೆ ಬಗ್ಗೆ ಬಹಿರಂಗ ಹೇಳಿಕೆ ನೀಡಿದ ನಂತರ ಈ ಬೆಳವಣಿಗೆ ಯಾಗಿದೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಮಗೆ ದೊರೆಯಬೇಕಾದ ಅಧ್ಯಕ್ಷ ಹುದ್ದೆಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಮುನಿಸಿಕೊಂಡ ಶಿವಕುಮಾರ್, ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಅಷ್ಟೇ ಅಲ್ಲ, ಇತ್ತೀಚೆಗೆ ನಡೆದ ಅಧಿವೇಶನ ಸಂದರ್ಭದಲ್ಲೂ ಸಕ್ರಿಯವಾಗಿ ಭಾಗವಹಿಸಲಿಲ್ಲ. ವರಿಷ್ಠರ ಆದೇಶದಂತೆ ಆಜಾದ್ ಶನಿವಾರ ಶಿವಕುಮಾರ್ ಅವರನ್ನು ಭೇಟಿ ಮಾಡಿ, ಪ್ರದೇಶ ಕಾಂಗ್ರೆಸ್ ಪುನಾರಚನೆ ವಿಳಂಬವಾಗಲು ಕಾರಣ ಏನು ಎಂಬುದರ ಬಗ್ಗೆ ಪೂರ್ಣ ಮಾಹಿತಿ ನೀಡಿದ್ದಾರೆ. ಸಂಸತ್ ಅಧಿವೇಶನ ಮುಗಿಯುತ್ತಿದ್ದಂತೆ ಕರ್ನಾಟಕ ಸೇರಿದಂತೆ ರಾಷ್ಟ್ರದ 4 ರಾಜ್ಯಗಳಲ್ಲಿ ಪ್ರದೇಶ ಕಾಂಗ್ರೆಸ್ ಪುನಾರಚನೆ ಕಾರ್ಯವನ್ನು ವರಿಷ್ಠರು ಕೈಗೆತ್ತಿಕೊಳ್ಳಲಿದ್ದಾರೆ. ಅಲ್ಲಿಯವರೆಗೂ ತಾಳ್ಮೆಯಿಂದ ಇರಿ ಎಂದು ಶಿವಕುಮಾರ್‍ಗೆ ಕಿವಿಮಾತು ಹೇಳಿರುವ ಅಜಾದ್, ನಿಮಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ದೊರೆಯುವುದರಲ್ಲಿ ಸಂಶಯವೇ ಬೇಡ ಎಂದಿದ್ದಾರೆ. ಪಕ್ಷಕ್ಕಾಗಿ ದುಡಿದವರನ್ನು ಸೋನಿಯಾಗಾಂಧಿ ಅವರು ಗುರುತಿಸುತ್ತಾರೆ. ಕರ್ನಾಟಕದ ಸಂಪೂರ್ಣ ರಾಜಕೀಯ ಅವರಿಗೆ ತಿಳಿದಿದೆ. ಯಾರು ಏನೇ ಹೇಳಿದರೂ, ನಿಷ್ಠರಿಗೆ ದಕ್ಕಬೇಕಾದ ಅವಕಾಶ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಪಕ್ಷವನ್ನು ಮತ್ತಷ್ಟು ಗಟ್ಟಿ ಮಾಡಲು ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆಯು ಅಜಾದ್ ಸಮಾಲೋಚನೆ ಮಾಡಿದ್ದಾರೆ. ಈ ಸಂದರ್ಭದಲ್ಲೇ ಶಿವಕುಮಾರ್ ಯಾವ ಕಾರಣಕ್ಕೆ ನನಗೆ ದಕ್ಕಬೇಕಾದ ಅಧಿಕಾರ ತಪ್ಪಿಸಲು ನಡೆದಿರುವ ಪ್ರಯತ್ನವನ್ನು ವಿವರಿಸಿದ್ದಾರೆ ಎನ್ನಲಾಗಿದೆ. ಕರ್ನಾಟಕ ಕಾಂಗ್ರೆಸ್ ಏಕಚಕ್ರಾಧಿಪತ್ಯದ ಆಡಳಿತಕ್ಕೆ ಸಿಲುಕಿದೆ. ದೆಹಲಿ ನಾಯಕರು ಕೂಡಾ ಆ ನಾಯಕರ ಮಾತಿಗೆ ಮಣಿದರೆ, ಕಾರ್ಯಕರ್ತರ ಪರಿಸ್ಥಿತಿ ಚಿಂತಾಜನಕವಾಗ ಲಿದೆ. ನೀವು ಅವರಿಗೆ ವಹಿಸಿದ ಹೊಣೆಗಾರಿಕೆ ಎಲ್ಲದರಲ್ಲೂ ವಿಫಲರಾಗಿದ್ದಾರೆ. ನಮಗೆ ಬಂದಿದ್ದ ಅಧಿಕಾರವನ್ನು ಕಳೆದುಕೊಂಡಿದ್ದೇವೆ. ಇದರ ಎಲ್ಲದರ ಅರಿವು ನಿಮಗಿದೆ. ಸಂಘಟನೆ ಮಾಡುವ ಬದಲು ತಮ್ಮ ಹಿತಾಸಕ್ತಿಗಾಗಿ ಒಡೆದಾಳುವ ವ್ಯಕ್ತಿಗಳಿಗೆ ಮಣೆ ಹಾಕಬೇಡಿ ಎಂದು ಶಿವಕುಮಾರ್ ಅಜಾದ್ ಅವರಲ್ಲಿ ಮನವಿ ಮಾಡಿದ್ದಾರೆ. ಏಕಚಕ್ರಾಧಿಪತ್ಯ ಆಡಳಿತ ವಿರೋಧಿಸಿ, ಮೂಲ ಕಾಂಗ್ರೆಸ್ಸಿಗರು ತಟಸ್ಥವಾಗಿ ಉಳಿಯುವ ಮನೋಭಾವನೆ ಹೊಂದಿದ್ದಾರೆ. ಪಕ್ಷದ ಹಿರಿಯ ನಾಯಕಿ ಮಾರ್ಗರೇಟ್ ಆಳ್ವ ಹೇಳಿರುವ ಮಾತು ಸತ್ಯವಾದುದ್ದು ಎಂದಿದ್ದಾರೆ.

Translate »