ಮೈಸೂರು,ಫೆ.29(ಎಂಟಿವೈ)- ನಾಳೆಯಿಂದಲೇ(ಮಾ.1) ಜಾರಿಗೆ ಬರು ವಂತೆ ಪ್ರತಿ ಕೆಜಿ ಹಾಲಿಗೆ 1.10 ರೂ. ನಷ್ಟು ಖರೀದಿ ದರ ಹೆಚ್ಚಳ ಮಾಡಲು ಮೈಸೂರು ಜಿಲ್ಲಾ ಹಾಲು ಒಕ್ಕೂಟದ (ಮೈಮುಲ್) ಆಡಳಿತ ಮಂಡಳಿ ಸಭೆ ನಿರ್ಧ ರಿಸಿದೆ.
ಮೈಮುಲ್ ಕಚೇರಿ ಯಲ್ಲಿ ಅಧ್ಯಕ್ಷ ಎಸ್.ಸಿದ್ದೇಗೌಡ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಮೈಮುಲ್ ಆಡಳಿತ ಮಂಡಳಿ ಸಭೆ ಹಾಲು ಖರೀದಿ ದರವನ್ನು ಹೆಚ್ಚಿಸಲು ಸರ್ವಸಮ್ಮತ ನಿರ್ಧಾರ ಕೈಗೊಂಡಿತು. ಈ ನಿರ್ಣಯದಂತೆ ಒಕ್ಕೂಟವು ಹಾಲು ಉತ್ಪಾದ ಕರ ಸಂಘಗಳಿಂದ ತಾನು ಖರೀದಿಸುವ ಶೇ.3.5ರಷ್ಟು ಜಿಡ್ಡಿನಂಶ ಹಾಗೂ ಶೇ.8.5ರಷ್ಟು ಎಸ್‍ಎನ್‍ಎಫ್ ಇರುವ ಪ್ರತಿ ಕೆಜಿ ಹಾಲಿಗೆ ಒಟ್ಟು 32.25 ರೂ. ನೀಡಲಿದೆ. ಅದೇ ವೇಳೆ ಸಂಘಗಳಿಂದ ರೈತರಿಗೆ 30 ರೂ. ಸಂದಾಯ ವಾಗುತ್ತದೆ. ಒಕ್ಕೂಟದಿಂದ ಸಂಘಕ್ಕೆ, ಸಂಘದಿಂದ ರೈತರಿಗೆ ಪಾವತಿಯಾಗುವ ಮೊತ್ತದಲ್ಲಿ 2.25 ರೂ. ವ್ಯತ್ಯಾಸವಿರುತ್ತದೆ. ಇದರಲ್ಲಿ ಹಾಲು ಉತ್ಪಾದಕರ ಸಂಘದ ಸಿಬ್ಬಂದಿಗೆ ನೀಡಲಾಗುತ್ತಿದ್ದ ಮಾರ್ಜಿನನ್ನು ಕೆಜಿಗೆ 10 ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ. ಪರಿಣಾಮ ಇಂದಿನಿಂದ ಕೆಜಿಗೆ 70 ಪೈಸೆ ಸಿಬ್ಬಂದಿಗೆ ದೊರೆಯಲಿದೆ. ಸಭೆಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ಎ.ಟಿ.ಸೋಮ ಶೇಖರ್, ಕೆ.ಜಿ.ಮಹೇಶ್, ಕೆ.ಈರೇಗೌಡ, ಕೆ.ಎಸ್.ಕುಮಾರ್, ಕೆ.ಸಿ.ಬಲರಾಮ್, ಪಿ.ಎಂ.ಪ್ರಸನ್ನ, ಎ.ಸಿ.ಅಶೋಕ್, ಲೀಲಾ, ದಾಕ್ಷಾಯಿಣಿ, ಕಹಾಮದ ಪ್ರತಿನಿಧಿ ಎಂ.ಟಿ. ಕುಲಕರ್ಣಿ, ಸಹಕಾರ ಸಂಘಗಳ ಜಂಟಿ ನಿಬಂಧಕ ಪ್ರಕಾಶ್‍ರಾವ್, ಪಸುಸಂಗೋಪನಾ ಇಲಾಖೆಯ ಡಾ.ತಿಮ್ಮಯ್ಯ, ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಡಿ.ಅಶೋಕ್ ಮತ್ತಿತರರಿದ್ದರು.
ಡಿ.ಅಶೋಕ್ ಅವರು `ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿ, ಮೈಸೂರು ಜಿಲ್ಲಾ ಹಾಲು ಒಕ್ಕೂಟ ಆರಂಭವಾಗಿ 45 ವರ್ಷಗಳು ಸಂದ ಸಂಭ್ರಮಕ್ಕಾಗಿ ಕೆಜಿಗೆ 1.10 ರೂ ಹೆಚ್ಚಳ ಮಾಡಿದ್ದೇವೆ. ಹಾಲು ಖರೀದಿಗೆ ಇಷ್ಟು ಪ್ರಮಾಣದ ಮೊತ್ತ ನೀಡುತ್ತಿರುವುದು ಇದೇ ಮೊದಲು ಎಂದರು. ಮೈಮುಲ್ ವ್ಯಾಪ್ತಿಯಲ್ಲಿ 1090 ಸೊಸೈಟಿಗಳಿದ್ದು, 94 ಸಾವಿರ ರೈತರು ಸದಸ್ಯರಾಗಿದ್ದಾರೆ. ದಿನಕ್ಕೆ 4.75 ಲಕ್ಷ ಲೀ. ಸಂಗ್ರಹವಾಗು ತ್ತದೆ. ಜ.1ರಿಂದ ಫೆ.29ರವರೆಗೆ (2 ತಿಂಗಳಲ್ಲಿ) ಹಾಲಿನ ಖರೀದಿ ದರದಲ್ಲಿ ಒಟ್ಟು 5 ರೂ. ಹೆಚ್ಚಳ ಮಾಡಿದಂತಾಗಿದೆ. ಹಾಲು ಉತ್ಪಾದಕರಿಗೆ ಮಾ.1ರಿಂದ ಕೆಜಿಗೆ 30 ರೂ. ದೊರೆಯಲಿದೆ ಎಂದರು.