ಮೈಸೂರು, ಫೆ.16(ಪಿಎಂ)- ಮೈಸೂರಿನ ಜೆಪಿ ನಗರದ ಎಫ್ ಬ್ಲಾಕ್ನಲ್ಲಿ ವಿವಿಧ ಅನುದಾನ ಹಾಗೂ ದೇಣಿಗೆ ಸೇರಿದಂತೆ 52 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಫೌಂಡೇಷನ್ನ ನೂತನ ಕಟ್ಟಡವನ್ನು ಭಾನುವಾರ ಉದ್ಘಾಟಿಸಲಾಯಿತು.
ಕಟ್ಟಡದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ದೀನ-ದಲಿತರ ಪಾಲಿಗೆ ಡಾ. ಅಂಬೇಡ್ಕರ್ ಸೂರ್ಯನಂತೆ ಬೆಳಕಾಗಿದ್ದಾರೆ. ಮಹಾನ್ ಮಾನವತಾವಾದಿಯಾದ ಅವರ ಚಿಂತನೆಗಳತ್ತ ಇಂದು ಇಡೀ ವಿಶ್ವವೇ ತಿರುಗಿ ನೋಡುತ್ತಿದೆ ಎಂದರು.
ಬುದ್ಧನ ಸಂದೇಶಗಳು ನಮಗೆ ಮಾರ್ಗದರ್ಶನ ಆಗಬೇ ಕಿದೆ. ಬುದ್ಧರ ಪಂಚಶೀಲ ತತ್ವಗಳಲ್ಲಿ ಒಂದಾದ ಶೀಲಕ್ಕೆ ಆದ್ಯತೆ ನೀಡಿದರೆ ನಮ್ಮ ಸಮಾಜ ಉದ್ಧಾರವಾಗಲಿದೆ. ಈ ಸಂಸ್ಥೆಯು ಐಎಎಸ್, ಕೆಎಎಸ್ ತರಬೇತಿ ಪ್ರಾರಂಭಿ ಸಲು ಉದ್ದೇಶಿಸಿರುವುದು ಶ್ಲಾಘನೀಯ. ಶಿಕ್ಷಣಕ್ಕೆ ನಿಮ್ಮ ಸಂಸ್ಥೆ ಹೆಚ್ಚು ಒತ್ತು ನೀಡಬೇಕು. ಪ್ರಸ್ತುತಕ್ಕೆ ಅನುಗುಣ ವಾಗಿ ವಿದ್ಯಾಭ್ಯಾಸ ಹಾಗೂ ತಾಂತ್ರಿಕ ತರಬೇತಿ ಮೊದಲಾದ ವುಗಳನ್ನು ಸಂಸ್ಥೆ ನೀಡಲು ಮುಂದಾಗಬೇಕು. ಶಿಕ್ಷಣದ ಜೊತೆಗೆ ಮೌಲ್ಯಗಳನ್ನು ಹೇಳಿಕೊಡುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಸಿದ್ದರಾಜು ಮಾತನಾಡಿ, ದಲಿತ ಸಮುದಾಯ ಇನ್ನೂ ಹಿಂದುಳಿದಿದ್ದು, ಮುಖ್ಯವಾಹಿನಿಗೆ ಬರಬೇಕಾದರೆ ಸಮುದಾಯದಲ್ಲಿ ಸಂಘಟನೆ ಅಗತ್ಯ. ಸಂಘಟನೆಗೆ ಆದ್ಯತೆ ನೀಡದೇ ಕೈಕಟ್ಟಿ ಕುಳಿತರೆ ಸಮುದಾಯದ ಏಳಿಗೆ ಕಷ್ಟಸಾಧ್ಯ. ನಮ್ಮ ಹಕ್ಕುಗಳು ನಮಗೆ ಪರಿಪೂರ್ಣವಾಗಿ ಲಭಿಸಬೇಕಾ ದರೆ ಹೋರಾಟ ಅನಿವಾರ್ಯ. ಕೇವಲ ಕುಟುಂಬದ ಬಗ್ಗೆ ಕಾಳಜಿ ವಹಿಸಿದರಷ್ಟೇ ಸಾಲದು. ಸಮುದಾಯ ಹಾಗೂ ಸಮಾಜದ ಬಗೆಗೂ ಕಳಕಳಿ ಇಟ್ಟುಕೊಳ್ಳಬೇಕು. ಸಮುದಾ ಯದ ಹಿತಕಾಯುವ ಜನಪ್ರತಿನಿಧಿಗಳ ಆಯ್ಕೆಗೆ ನಮ್ಮ ಆದ್ಯತೆ ಇರಬೇಕೇ ಹೊರತು ಯಾವುದೇ ಆಸೆ ಆಮಿಷ ಗಳಿಗೆ ಒಳಗಾಗಬಾರದು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಫೌಂಡೇಷನ್ನ ಅಧ್ಯಕ್ಷ ಎಂ.ಮಹೇಶ್, 2001-02ರಲ್ಲಿ ಫೌಂಡೇಷನ್ ನೋಂದಣಿ ಯಾಯಿತು. ಪ್ರಸ್ತುತ 303 ಸದಸ್ಯರನ್ನು ಒಳಗೊಂಡು ವಿವಿಧ ಅಭಿವೃದ್ಧಿ ಹಾಗೂ ಸಾಮಾಜಿಕ ಸೇವಾ ಕಾರ್ಯದಲ್ಲಿ ಮುನ್ನಡೆಯುತ್ತಿದೆ. 2013-14ರಲ್ಲಿ ಸಂಘದ ವ್ಯಾಪ್ತಿಯಲ್ಲಿ ಸ್ನೇಹನಿಧಿ ಪತ್ತಿನ ಸಹಕಾರ ಸಂಘ ಸ್ಥಾಪಿಸಿದ್ದು, 650 ಮಂದಿ ಷೇರುದಾರರಾಗಿದ್ದಾರೆ. 75 ಸಾವಿರ ರೂ.ವರೆಗೆ ಸಾಲ ಸೌಲಭ್ಯ ನೀಡಲಾಗಿದೆ ಎಂದು ಹೇಳಿದರು.
ಎಂ.ಕೆ.ಸೋಮಶೇಖರ್ ಅವರ ಶಾಸಕ ಅವಧಿಯ ಪ್ರದೇಶಾಭಿವೃದ್ಧಿ ಅನುದಾನದ 20 ಲಕ್ಷ ರೂ. ಹಾಗೂ ಸಂಘದ ಸರ್ವಸದಸ್ಯರ ಸದಸ್ಯತ್ವದ ಹಣ, ದೇಣಿಗೆಯ 12 ಲಕ್ಷ ರೂ. ವೆಚ್ಚದಲ್ಲಿ ಫೌಂಡೇಷನ್ನ ಕಟ್ಟಡದ ನೆಲ ಅಂತಸ್ತು ನಿರ್ಮಿಸಲಾಗಿದೆ. ಅದೇ ರೀತಿ ಬಿ.ಎಲ್.ಭೈರಪ್ಪ ಅವರು ಮೇಯರ್ ಆಗಿದ್ದ ವೇಳೆ ಅವರ ಪಾಲಿಕೆ ಸದಸ್ಯತ್ವ ಅನುದಾನದ 20 ಲಕ್ಷ ರೂ. ವೆಚ್ಚದಲ್ಲಿ ಮೊದಲ ಅಂತಸ್ತು ನಿರ್ಮಿಸಲಾಗಿದೆ ಎಂದು ವಿವರಿಸಿದರು. ಮಾಜಿ ಮೇಯರ್ ಬಿ.ಎಲ್.ಭೈರಪ್ಪ, ಪಾಲಿಕೆ ಸದಸ್ಯರಾದ ಶಾಂತಮ್ಮ ಎಂ.ವಡಿ ವೇಲು, ಶಾರದಮ್ಮ ಈಶ್ವರ್ ಸೇರಿದಂತೆ ಫೌಂಡೇಷನ್ನ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.