ಮಂಡ್ಯ, ಫೆ.16(ನಾಗಯ್ಯ)- ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಮೈಸೂರು-ಬೆಂಗಳೂರು ಹೆದ್ದಾರಿ ಯಲ್ಲಿ ದರೋಡೆ ನಡೆಸಲು ಸಂಚು ರೂಪಿಸಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಮದ್ದೂರು ಪೆÇಲೀಸರು ಯಶಸ್ವಿ ಯಾಗಿದ್ದಾರೆ. ಬೆಂಗಳೂರಿನ ಪದ್ಮ ನಾಭನಗರದ ಓಂ ಪ್ರಕಾಶ್, ಉತ್ತರಹಳ್ಳಿಯ ಸುರೇಶ್, ಮದ್ದೂ ರಿನ ಲೀಲಾವತಿ ಬಡಾವಣೆ ನಿವಾಸಿ ಸಂಜಯ್ ಹಾಗೂ ಪ್ರಜ್ವಲ್ ಬಂಧಿತರು. ಮತ್ತೊಬ್ಬ ಆರೋಪಿ ಕಾರ್ತಿಕ್ ಪರಾರಿಯಾಗಿದ್ದಾನೆ.
ಹಿನ್ನೆಲೆ: ಬೆಂಗಳೂರು ಮೂಲದ ಓಂಪ್ರಕಾಶ್ ಎಂಬುವರಿಗೆ ಸೇರಿದ ಕಾರಿಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿಕೊಂಡು ಓಂ ಪ್ರಕಾಶ್, ಸುರೇಶ್, ಸಂಜಯ್, ಪ್ರಜ್ವಲ್ ಮತ್ತು ಕಾರ್ತಿಕ್ ಅವರನ್ನೊಳಗೊಂಡ ಐವರ ತಂಡ ಹೆದ್ದಾರಿ ದರೋಡೆಗೆ ಸಂಚು ರೂಪಿಸಿತ್ತು. ಮಾರ್ಗ ಮಧ್ಯೆ ಕೊಪ್ಪ ವೃತ್ತದ ಬಳಿ ರಸ್ತೆಯಲ್ಲೇ ಕಾರು ಕೆಟ್ಟು ನಿಂತಿದೆ. ಪರಿಣಾಮ ಹೆದ್ದಾರಿ ಸಂಚಾರಕ್ಕೆ ತೊಡಕುಂಟಾಗಿ ಹಿಂದಿನಿಂದ ಬರುತ್ತಿದ್ದ ವಾಹನಗಳ ಚಾಲಕರು ಕಾರನ್ನು ಪಕ್ಕಕ್ಕೆ ಸರಿಸುವಂತೆ ಸೂಚಿಸಿದ್ದಾರೆ. ಆದರೆ ಪಾನಮತ್ತರಾಗಿದ್ದ ಆರೋಪಿಗಳು ಅವರೊಂದಿಗೆ ಮಾತಿನ ಚಕಮಕಿಗಿಳಿದು ಹಲ್ಲೆಗೆ ಮುಂದಾಗಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ ಸ್ಥಳೀಯರು ಆರೋಪಿಗಳನ್ನು ಸಮಾಧಾನಪಡಿಸಲೆತ್ನಿಸಿ ವಿಫಲರಾಗಿದ್ದಾರೆ. ಆಗ ಕಾರಿನಲ್ಲಿದ್ದ ಮಾರಕಾಸ್ತ್ರಗಳನ್ನು ಕಂಡು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಅಲ್ಲದೇ, ಸ್ಥಳದಿಂದ ತೆರಳದಂತೆ ಆರೋಪಿಗಳಿಗೆ ದಿಗ್ಭಂಧನ ವಿಧಿಸಿದ್ದಾರೆ. ಸ್ಥಳಕ್ಕಾಗಮಿಸಿದ ಮದ್ದೂರು ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆಯುವ ವೇಳೆ ಒಬ್ಬ ಪರಾರಿಯಾಗಿದ್ದು, ನಾಲ್ವರನ್ನು ಬಂಧಿಸಿದ್ದಾರೆ. ಪರಿಶೀಲನೆಯ ವೇಳೆ ಕಾರಿನಲ್ಲಿ ಚಾಕು, ಡ್ರ್ಯಾಗರ್, ಮಂಕಿ ಕ್ಯಾಪ್, ಹ್ಯಾಂಡ್ ಗ್ಲೌಸ್, ಕಬ್ಬಿಣದ ಮೊಳೆಗಳು, ಪೆಪ್ಪರ್ ಸ್ಪ್ರೇ ಹಾಗೂ ಮಾಸ್ಕ್ ಮತ್ತಿತರ ವಸ್ತುಗಳು ಪತ್ತೆಯಾಗಿದ್ದು ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮದ್ದೂರು ಠಾಣೆ ಪಿಎಸ್‍ಐ ಮಂಜೇಗೌಡ ಮಾಧ್ಯಮದವರಿಗೆ ತಿಳಿಸಿದ್ದಾರೆ.