ಮಂಡ್ಯ, ಫೆ.16-ಶ್ರೀರಂಗಪಟ್ಟಣ ಪೊಲೀಸರು ಐವರು ಹೆದ್ದಾರಿ ದರೋಡೆಕೋರರನ್ನು ಬಂಧಿಸಿ 21.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಐವರಲ್ಲಿ ನಾಲ್ವರು ಅಪ್ರಾಪ್ತ ವಯಸ್ಸಿನವರು ಎಂಬುದು ಆತಂಕಕಾರಿ ವಿಚಾರವಾಗಿದೆ.
ಬೆಂಗಳೂರಿನ ಕೆ.ಪಿ.ಅಗ್ರಹಾರದ ಉದಯ ಅಲಿ ಯಾಸ್ ಗೊಗ್ಗಯ್ಯ ಅಲಿಯಾಸ್ ಕಲಾಕಾರ್(19) ಈ ದರೋಡೆಕೋರರ ತಂಡದ ಕಿಂಗ್‍ಪಿನ್ ಆಗಿದ್ದು, ಈತ ಅಪ್ರಾಪ್ತ ವಯಸ್ಸಿನಲ್ಲಿಯೇ ಅಪರಾಧ ಕೃತ್ಯವೆಸಗಿ ಬಾಲ ಮಂದಿರ ಸೇರಿದ್ದ. ಅಪ್ರಾಪ್ತನಾಗಿರುವ ಈತನ ಸಹೋದರ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಾಲಮಂದಿರದಿಂದ ಬಿಡುಗಡೆಯಾಗಿದ್ದಾನೆ. ಈ ಸಹೋದರರು ಬಾಲಮಂದಿರ ದಲ್ಲಿರುವ ಬಾಲಕರನ್ನೇ ಬಳಸಿಕೊಂಡು ದರೋಡೆ ಕೃತ್ಯಗಳನ್ನು ಎಸಗುವುದನ್ನೇ ಹವ್ಯಾಸ ಮಾಡಿಕೊಂಡಿದ್ದಾರೆ. ಫೆ.2ರಂದು ಮುಂಜಾನೆ 3 ಗಂಟೆ ವೇಳೆಯಲ್ಲಿ ಉದಯನ ಸಹೋದರ ಮೈಸೂರಿನ ಬಾಲಮಂದಿರಕ್ಕೆ ನುಗ್ಗಿ,
ಅಲ್ಲಿನ ಕಾವಲುಗಾರರ ಮೇಲೆ ಹಲ್ಲೆ ನಡೆಸಿ, ಬಾಲಮಂದಿರದ ಬಾಗಿಲು ಮುರಿದು, ಅಲ್ಲಿನ ನಾಲ್ವರು ಬಾಲಕರನ್ನು ಬಿಡಿಸಿಕೊಂಡು ಬಂದಿದ್ದ ಎಂಬ ಆತಂಕಕಾರಿ ವಿಷಯವೂ ಬೆಳಕಿಗೆ ಬಂದಿದ್ದು, ಆ ಬಾಲಕರೂ ಕೂಡ ಈಗ ಬಂಧನಕ್ಕೊಳಗಾಗಿದ್ದಾರೆ.
ವಿವರ: ಶ್ರೀರಂಗಪಟ್ಟಣದ ಮಣಿಕುಮಾರ್ ಎಂಬುವರು ಫೆ.2ರಂದು ಮುಂಜಾನೆ 5.20ರ ಸುಮಾರಿನಲ್ಲಿ ಬೈಕ್‍ನಲ್ಲಿ ತೆರಳುತ್ತಿದ್ದಾಗ ಮೈಸೂರು-ಬೆಂಗಳೂರು ಹೆದ್ದಾರಿಯ ಗೌರಿಪುರ ಗ್ರಾಮದ ಬಳಿ ಎರಡು ಬೈಕ್‍ಗಳಲ್ಲಿ ಬಂದ ಐವರು ಅವರ ಬೈಕ್(ಕೆಎ 07 ಯು 5413) ಅನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ, ಅವರ ಬಳಿ ಇದ್ದ 500 ರೂ. ನಗದು, ಮೊಬೈಲ್ ಮತ್ತು ಬೈಕ್ ಅನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ಅಲ್ಲಿಂದ ಬೆಂಗಳೂರು ಮಾರ್ಗವಾಗಿ ಅಂದು ಮುಂಜಾನೆ 5.30ರ ಸುಮಾರಿನಲ್ಲಿ ಶುಂಠಿಕೊಪ್ಪದ ರೇಮಾಂಡ್ ಡಿಸೋಜಾ ಅವರು ಬೆಂಗಳೂರಿಗೆ ಕಾರಿನಲ್ಲಿ (ಕೆಎ 12 ಬಿ 7987) ತೆರಳುತ್ತಿದ್ದಾಗ ಕೋಡಿಶೆಟ್ಟಿಪುರ ಗ್ರಾಮದ ಬಳಿ ಈ ಐವರು ಬೈಕ್‍ಗಳನ್ನು ಅಪಘಾತವಾದಂತೆ ರಸ್ತೆಯಲ್ಲಿ ಮಲಗಿಸಿದ್ದರು. ಅಪಘಾತವಾಗಿದೆ ಎಂದು ನಂಬಿದ ರೇಮಾಂಡ್ ಡಿಸೋಜಾ ಕಾರನ್ನು ನಿಲ್ಲಿಸಿದಾಗ ಅವರಿಗೆ ಮಾರಕಾಸ್ತ್ರಗಳನ್ನು ತೋರಿಸಿ, ಅವರ ಬಳಿ ಇದ್ದ 2 ಮೊಬೈಲ್, 1500 ರೂ. ನಗದು ಹಾಗೂ ಕಾರನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಪ್ರಕರಣಗಳು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದವು. ಹೆದ್ದಾರಿ ದರೋಡೆಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಎಸ್ಪಿ ಪರಶುರಾಂ ಅವರು ಎಎಸ್‍ಪಿ ಶ್ರೀಮತಿ ಶೋಭಾರಾಣಿ, ಶ್ರೀರಂಗಪಟ್ಟಣ ಡಿವೈಎಸ್‍ಪಿ ಅರುಣ್ ನಾಗೇಗೌಡ ಮಾರ್ಗದರ್ಶನದಲ್ಲಿ ಶ್ರೀರಂಗಪಟ್ಟಣ ಸರ್ಕಲ್ ಇನ್ಸ್‍ಪೆಕ್ಟರ್ ಕೃಷ್ಣಪ್ಪ, ಮಂಡ್ಯ ಜಿಲ್ಲಾ ಸೆನ್ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಹರೀಶ್ ಬಾಬು, ಸಬ್ ಇನ್ಸ್‍ಪೆಕ್ಟರ್‍ಗಳಾದ ಕೆ.ಎನ್.ಗಿರೀಶ್, ಮುದ್ದು ಮಹದೇವ, ಸಿಬ್ಬಂದಿಗಳಾದ ಚಿಕ್ಕಯ್ಯ, ಮಹೇಶ, ಆನಂದ, ಎಸ್.ಎಸ್.ರವೀಶ, ಕೃಷ್ಣಶೆಟ್ಟಿ, ಶ್ರೀನಿವಾಸಮೂರ್ತಿ, ಟಿ.ಎಸ್. ಕುಮಾರ, ಎಸ್.ಅರುಣ್ ಕುಮಾರ್, ರವಿಕುಮಾರಸ್ವಾಮಿ, ಎಸ್.ಎಸ್.ಚಂದ್ರಶೇಖರ್, ಬಿ.ಮಲ್ಲಿಕಾರ್ಜುನ, ಕೃಷ್ಣೇಗೌಡ, ದಿನೇಶ್, ಜಗದೀಶಯ್ಯ ವಸ್ತ್ರದ್, ಹೆಚ್.ಟಿ.ಮಂಜು, ಜಿಲ್ಲಾ ಪೊಲೀಸ್ ಕಚೇರಿಯ ಸಿಡಿಆರ್ ವಿಭಾಗದ ರವಿಕಿರಣ್, ಲೋಕೇಶ್, ಚಾಲಕರಾದ ಮಂಜುನಾಥ್, ಭಾರ್ಗವ, ಪ್ರಕಾಶ್ ಅವರನ್ನೊಳಗೊಂಡ ವಿಶೇಷ ತಂಡ ರಚಿಸಿದ್ದರು.
ಈ ತಂಡವು ದರೋಡೆ ನಡೆದ ದಿನ ಮೈಸೂರು-ಬೆಂಗಳೂರು ರಸ್ತೆಯಲ್ಲಿನ ಸಿಸಿ ಕ್ಯಾಮರಾ ಫುಟೇಜ್‍ಗಳು ಮತ್ತು ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿರುವ ಟವರ್‍ಗಳಲ್ಲಿ ಕಾರ್ಯ ನಿರ್ವಹಿಸಿದ ಮೊಬೈಲ್‍ಗಳ ವಿವರಗಳನ್ನು ಕಲೆ ಹಾಕಿ, ತನಿಖೆಯನ್ನು ಆರಂಭಿಸಿತು. ಉದಯ ಮತ್ತು ಅಪ್ರಾಪ್ತ ಬಾಲಕರೇ ಈ ಕೃತ್ಯದಲ್ಲಿ ತೊಡಗಿದ್ದಾರೆ ಎಂಬ ನಿರ್ಧಾರಕ್ಕೆ ಬಂದಿದ್ದರು. ಫೆ.12ರಂದು ಉದಯನನ್ನು ಬಂಧಿಸಿದ ಪೊಲೀಸರು, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಈತನ ಜೊತೆ ನಾಲ್ವರು ಅಪ್ರಾಪ್ತ ಬಾಲಕರು ದರೋಡೆ ಕೃತ್ಯಗಳಲ್ಲಿ ತೊಡಗಿ ರುವುದು ಬೆಳಕಿಗೆ ಬಂದಿದೆ. ನಂತರ ಆತ ನೀಡಿದ ಸುಳಿವಿನ ಮೇರೆಗೆ ನಾಲ್ವರು ಬಾಲಕರನ್ನು ಬಂಧಿಸಿದ್ದಾರೆ. ನಾಲ್ವರಲ್ಲಿ ಓರ್ವ ಉದಯನ ಸಹೋದರನಾದರೆ, ಉಳಿದ ಮೂವರು ಫೆ.2ರಂದು ಮುಂಜಾನೆ ಮೈಸೂರಿನ ಬಾಲಮಂದಿರದಿಂದ ತಪ್ಪಿಸಿಕೊಂಡು ಹೋದವರಾಗಿದ್ದಾರೆ. ಐಷಾರಾಮಿ ಜೀವನಕ್ಕಾಗಿ ಚಿಕ್ಕ ವಯಸ್ಸಿನಲ್ಲೇ ದರೋಡೆ ಕೃತ್ಯಕ್ಕೆ ಇಳಿದಿದ್ದ ಈ ತಂಡವು ಫೆ.2ರಂದು ಮೈಸೂರಿನ ಬಾಲಮಂದಿರದಿಂದ ಪರಾರಿಯಾದ ನಂತರ ಅದೇ ದಿನ ಶ್ರೀರಂಗಪಟ್ಟಣದಲ್ಲಿ ಎರಡು ದರೋಡೆಗಳನ್ನು ನಡೆಸಿದ್ದಲ್ಲದೇ, ನಂತರ 10 ದಿನಗಳ ಅವಧಿಯಲ್ಲಿ ತುಮಕೂರು ಜಿಲ್ಲೆ ದಾಬಾಸ್ ಪೇಟೆ, ಹುಳಿಮಾವು, ಸರ್ಜಾಪುರ, ಬೆಂಗಳೂರಿನ ಚೆನ್ನಮ್ಮನ ಕೆರೆ ಅಣೆಕಟ್ಟು ಪೊಲೀಸ್ ಠಾಣಾ ವ್ಯಾಪ್ತಿ, ಪೀಣ್ಯ, ಗಿರಿನಗರ, ಕಾಮಾಕ್ಷಿಪಾಳ್ಯ, ಕೆಂಗೇರಿ, ಬಸವೇಶ್ವರನಗರ ಮತ್ತು ಅತ್ತಿಬೆಲೆಯಲ್ಲಿ ಇದೇ ರೀತಿ ದರೋಡೆ ಕೃತ್ಯಗಳಲ್ಲಿ ತೊಡಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ದರೋಡೆ ತಂಡದ ಕಿಂಗ್‍ಪಿನ್ ಉದಯ್ ವಿರುದ್ಧ ಬೇಗೂರು ಪೊಲೀಸ್ ಠಾಣೆಯಲ್ಲಿ 3, ಗಿರಿನಗರದಲ್ಲಿ 1, ಪೀಣ್ಯದಲ್ಲಿ 2, ರಾಜರಾಜೇಶ್ವರಿ ನಗರದಲ್ಲಿ 2, ಪರಪ್ಪನ ಅಗ್ರಹಾರದಲ್ಲಿ 2, ಕುಂಬಳಗೋಡಿನಲ್ಲಿ 2, ತಲಗಟ್ಟಪುರದಲ್ಲಿ 3, ಸೂರ್ಯ ಸಿಟಿ ಮತ್ತು ಅತ್ತಿಬೆಲೆಯಲ್ಲಿ ತಲಾ ಒಂದು, ತಾವರೆಕೆರೆ ಮತ್ತು ಬ್ಯಾಟರಾಯನಪುರದಲ್ಲಿ ತಲಾ 2, ಬೇಡರಹಳ್ಳಿಯಲ್ಲಿ 1, ಸರ್ಜಾಪುರದಲ್ಲಿ 1, ತಿರುಮಲ ಶೆಟ್ಟಿಹಳ್ಳಿ, ಬೊಮ್ಮನಹಳ್ಳಿ, ಮಡಿ ವಾಳದಲ್ಲಿ ತಲಾ 3, ಎಚ್‍ಎಸ್‍ಆರ್ ಲೇಔಟ್‍ನಲ್ಲಿ 1, ಮಾದನಾಯಕನಹಳ್ಳಿಯಲ್ಲಿ 2, ಹಾಸನದ ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ 1 ಸೇರಿದಂತೆ 32 ಪ್ರಕರಣಗಳು ದಾಖಲಾಗಿವೆ. ಬಂಧಿಸಲ್ಪಟ್ಟಿರುವ ಅಪ್ರಾಪ್ತ ಬಾಲಕರ ವಿರುದ್ಧ ರಾಜ್ಯದ ವಿವಿಧ ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ 34ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಭಾನುವಾರ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಎಸ್ಪಿ ಪರಶುರಾಂ ತಿಳಿಸಿದರು. ಬಂಧಿತರಿಂದ 1 ಮಾರುತಿ ಸ್ವಿಫ್ಟ್ ಡಿಸೈರ್ ಕಾರು, 8 ದ್ವಿಚಕ್ರ ವಾಹನ, 12 ಗ್ರಾಂ ತೂಕದ ತಾಳಿ ಸಮೇತ ಇರುವ ಕರಿಮಣಿ ಹಾಗೂ ಚಿನ್ನದ ಗುಂಡುಗಳು ಇರುವ ಸರ, 4 ಗ್ರಾಂ ತೂಕದ ಚಿನ್ನದ ಉಂಗುರ, 25 ಮೊಬೈಲ್‍ಗಳು, 1 ಟ್ಯಾಬ್, 1 ವೈಫೈ ಹಾಟ್‍ಸ್ಪಾಟ್, 2 ಕ್ಯಾಮರಾ, 2 ಲಾಂಗ್‍ಗಳು, 2 ಮಚ್ಚು, 2 ಸ್ಪ್ಯಾನರ್ ಸೇರಿದಂತೆ 21.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಎಸ್ಪಿ ತಿಳಿಸಿದರು.