ಕ್ಷೇತ್ರದ ಮತದಾರರನ್ನು ನಾನಲ್ಲ, ನನ್ನ ವಂಶವೂ ಮರೆಯೊಲ್ಲ ಕೃತಜ್ಞತಾ ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಭಾವನಾತ್ಮಕ ಹೇಳಿಕೆ
ಚಾಮರಾಜನಗರ

ಕ್ಷೇತ್ರದ ಮತದಾರರನ್ನು ನಾನಲ್ಲ, ನನ್ನ ವಂಶವೂ ಮರೆಯೊಲ್ಲ ಕೃತಜ್ಞತಾ ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಭಾವನಾತ್ಮಕ ಹೇಳಿಕೆ

June 19, 2018

ಚಾಮರಾಜನಗರ:  ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಮತದಾರರನ್ನು ನಾನು ಮಾತ್ರವಲ್ಲ, ನನ್ನ ವಂಶವೂ ಮರೆಯೊದಿಲ್ಲ. ಸದಾ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಕ್ಷೇತ್ರ ಮತ ದಾರರಿಗೆ ಅನಂತ, ಅನಂತ ಕೃತಜ್ಞತೆಗಳು…
-ಎನ್ನುತ್ತ ಭಾವನಾತ್ಮಕವಾಗಿ ಮಾತು ಗಳನ್ನು ಆರಂಭಿಸಿದ ಹಿಂದುಳಿದ ವರ್ಗ ಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಕ್ಷೇತ್ರದ ಜನತೆ ಹಾಗೂ ಸಿದ್ದರಾಮಯ್ಯ, ಧ್ರುವನಾರಾಯಣ ಅವರ ಬೆಂಬಲವನ್ನು ಸ್ಮರಿಸಿದರು. ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಸೋಮವಾರ ಚಾಮ ರಾಜನಗರ ಬ್ಲಾಕ್ ಕಾಂಗ್ರೆಸ್ ಹಾಗೂ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್‍ನಿಂದ ಆಯೋಜಿಸಿದ್ದ ಮತದಾರರಿಗೆ ಕೃತಜ್ಞತೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಾನು ನನ್ನ ಜೀವನದಲ್ಲಿ ಶಾಸಕನಾಗು ತ್ತೇನೆ ಎಂದು ಕನಸು ಕಂಡಿರಲಿಲ್ಲ. ಆದರೂ, 3 ಬಾರಿ ಶಾಸಕನಾದೆ. ಮಂತ್ರಿ ಯಾಗುತ್ತೇನೆ ಅಂತ ಎಂದೂ ಅಂದು ಕೊಂಡಿರಲಿಲ್ಲ. ಆದರೂ ಕ್ಷೇತ್ರದ ಜನರ ಆಶೀರ್ವಾದದಿಂದ ಅದು ಕೂಡ ನೆರವೇರಿದೆ. ಇದಕ್ಕೆಲ್ಲ ಕ್ಷೇತ್ರದ ಮತದಾರರೇ ಕಾರಣ. ನಿಮ್ಮನ್ನು ನನ್ನ ಹೃದಯದಲ್ಲಿ ಇಟ್ಟು ಪೂಜೆ ಮಾಡುತ್ತೇನೆ’ ಎಂದು ಭಾವುಕರಾದರು.
2007ರಲ್ಲಿ ನಾನು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಈ ವೇಳೆ ನನಗೆ ಕೇಂದ್ರ ವಿಪಕ್ಷ ನಾಯಕ ಮಲ್ಲಿ ಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ಆರ್.ಧ್ರುವನಾರಾ ಯಣ ಅವರು ವಿಧಾನಸಭೆಗೆ ಟಿಕೆಟ್ ಕೊಡಿ ಸಿದರು. ಅಂದು ನಾನು 2,600 ಮತಗಳ ಅಂತರದಿಂದ ಗೆಲುವು ಪಡೆದ್ದೆ. 2013ರ ಚುನಾವಣೆಯಲ್ಲಿ 11,000 ಮತಗಳ ಅಂತರದಿಂದ ಗೆಲುವು ಸಾಧಿಸಿದೆ. ಈ ವೇಳೆ ರಾಜ್ಯದಲ್ಲಿ ನಮ್ಮದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದರಿಂದ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತರಲು ಸಾಧ್ಯವಾಯಿತು. ಅಭಿ ವೃದ್ಧಿ ಕೆಲಸಗಳು ಪ್ರಾರಂಭವಾಯಿತು. ಈ ಬಾರಿಯ ಚುನಾವಣೆಯಲ್ಲಿಯೂ ನಾನು 4,901ಮತಗಳ ಅಂತರದಿಂದ ಗೆಲುವು ಪಡೆದು ಸಚಿವನಾಗಿದ್ದೇನೆ. ಇದಕ್ಕೆಲ್ಲ ಕ್ಷೇತ್ರದ ಮತದಾರರೇ ಕಾರಣ ಎಂದು ತಿಳಿಸಿದರು.

ಕ್ಷೇತ್ರದಿಂದ ಇದುವರೆಗೂ ಯಾರೂ ಹ್ಯಾಟ್ರಿಕ್ ಸಾಧನೆ ಮಾಡಿಲ್ಲ. ನಾನು ಚಾಮ ರಾಜೇಶ್ವರಸ್ವಾಮಿಯ ಕೃಪೆಯಿಂದ ಹ್ಯಾಟ್ರಿಕ್ ಗೆಲುವು ಪಡೆದಿದ್ದೇನೆ. ಚಾಮರಾಜೇಶ್ವರ ಸ್ವಾಮಿ ಬಳಿ ಬೇಡಿಕೊಂಡಂತೆ ನಾನು ಇಂದು 3ನೇ ಬಾರಿ ಗೆಲುವು ಪಡೆದು ಮಂತ್ರಿಯಾಗಿದ್ದೇನೆ ಎಂದರು.ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿ ಇದೆ. ಆದ್ದರಿಂದ ಅಂದು ಕೊಂಡಷ್ಟು ಕೆಲಸ ಮಾಡಲು ಆಗುವುದಿಲ್ಲ. ಉಪ್ಪಾರ ಸಮು ದಾಯವನ್ನು ಕಾಂಗ್ರೆಸ್ ಮಾತ್ರ ಗುರುತಿ ಸಿದೆ. ಹೀಗಾಗಿ, ಸಮುದಾಯದವರು ಕಾಂಗ್ರೆಸ್ ಬೆಂಬಲಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಆರ್.ಧ್ರುವನಾರಾಯಣ ಮಾತನಾಡಿ, ಚಾಮ ರಾಜನಗರ ಕ್ಷೇತ್ರದಲ್ಲಿ ಹಲವು ಮುನ್ನುಡಿ ಗಳಿಗೆ ನಾಂದಿ ಹಾಡಿರುವ ಪುಟ್ಟರಂಗಶೆಟ್ಟಿ ಅವರು ಪ್ರಸ್ತುತ ಸಚಿವರಾಗಿದ್ದು, ಬಹಳಷ್ಟು ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಅದನ್ನು ಅವರು ಯಶಸ್ವಿಯಾಗಿ ನಿಭಾಯಿ ಸಲಿ ಎಂದು ಶುಭ ಕೋರಿದರು.

ಜಿಲ್ಲೆ ಕಾಂಗ್ರೆಸ್‍ನ ಭದ್ರ ಕೋಟೆಯಾಗಿತ್ತು. ಆದರೂ, ಚುನಾವಣೆಯಲ್ಲಿ 2 ಕ್ಷೇತ್ರವನ್ನು ಕಳೆದುಕೊಂಡಿರುವುದು ಬೇಸರ ತಂದಿದೆ. ಮುಂದಿನ ಚುನಾವಣೆ ಗಳಲ್ಲಿ ಹೀಗಾಗುವುದು ಬೇಡ. ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಲೋಕಸಭಾ ಚುನಾವಣೆಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಜ್ಜಾಗಬೇಕು –ಆರ್.ಧ್ರುವನಾರಾಯಣ, ಸಂಸದ

ಶಾಸಕ ಡಾ.ಯತೀಂದ್ರ ಮಾತನಾಡಿ, ಕಾಂಗ್ರೆಸ್ ಸಾಮಾಜಿಕ ನ್ಯಾಯದಡಿ ಕೆಲಸ ನಿರ್ವಹಿಸುತ್ತಿದೆ. ರಾಜ್ಯ ದಲ್ಲಿ ಆಡಳಿತ ವಿರೋಧಿ ಅಲೆ ಇರಲಿಲ್ಲ. ಆದರೂ ಸಹ ಹಲವು ಕಾರಣಗಳಿಂದ ಕಾಂಗ್ರೆಸ್ ಬಹುಮತಗಳಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಶಾಸಕ ಅನಿಲ್ ಚಿಕ್ಕಮಾದು, ಮಾಜಿ ಶಾಸಕರಾದ ಎಸ್.ಜಯಣ್ಣ, ಎ.ಆರ್. ಕೃಷ್ಣಮೂರ್ತಿ, ಎಸ್.ಬಾಲರಾಜು, ಮುಖಂಡ ಗಣೇಶ್‍ಪ್ರಸಾದ್, ಕೆಪಿಸಿಸಿ ಪ್ರಧಾನ ಕಾರ್ಯ ದರ್ಶಿ ವಸಂತಿ ಶಿವಣ್ಣ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಮಾಜಿ ಸಂಸದ ಎ.ಸಿದ್ದರಾಜು, ಎಐಸಿಸಿ ಸದಸ್ಯೆ ಡಾ.ಪುಷ್ಪ ಅಮರನಾಥ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಸದಸ್ಯರಾದ ಕೆ.ಪಿ. ಸದಾಶಿವಮೂರ್ತಿ, ಕೆರೆಹಳ್ಳಿ ನವೀನ್, ಶಶಿಕಲಾ, ತಾ.ಪಂ. ಅಧ್ಯಕ್ಷೆ ದೊಡ್ಡಮ್ಮ, ನಗರಸಭೆ ಅಧ್ಯಕ್ಷೆ ಶೋಭಾ, ಉಪಾಧ್ಯಕ್ಷ ರಾಜಪ್ಪ, ಎಪಿಎಂಸಿ ಅಧ್ಯಕ್ಷ ಬಿ.ಕೆ. ರವಿ ಕುಮಾರ್, ಉಪಾಧ್ಯಕ್ಷ ಮಹದೇವಸ್ವಾಮಿ, ಮುಖಂಡರಾದ ಎಸ್.ನಂಜುಂಡಸ್ವಾಮಿ, ಸೈಯದ್‍ರಫೀ, ಉಮೇಶ್, ಸುಹೇಲ್ ಆಲಿಖಾನ್, ಲತಾ ಜಯಣ್ಣ, ಜಿಯಾ ವುಲ್ಲ ಷರೀಫ್, ಕಾವೇರಿ ಶಿವಕುಮಾರ್, ಪದ್ಮಾ ಪುರುಷೋತ್ತಮ್, ಎ.ಎಸ್. ಗುರು ಸ್ವಾಮಿ, ಮುನ್ನಾ, ಅರಕಲವಾಡಿ ಸೋಮ ನಾಯ್ಕ, ಕಾಗಲವಾಡಿ ಚಂದ್ರು, ಕಾಂತ ರಾಜು ಮತ್ತಿತರರು ಹಾಜರಿದ್ದರು.

‘ಮಹದೇಶ್ವರನಾ ಆಣೆಗೂ ನಾನು ಆ ಕೆಲಸ ಮಾಡಿಲ್ಲ’

ಚಾಮರಾಜನಗರ:  ಜಿಲ್ಲೆಯ ಬೇರೆ ಕ್ಷೇತ್ರಗಳಲ್ಲಿ ನಾನು ಉಪ್ಪಾರರ ಮತಗಳನ್ನು ಕಾಂಗ್ರೆಸ್‍ಗೆ ಹಾಕಿಸಿಲ್ಲ ಎಂಬ ಆಪಾದನೆ ನನ್ನ ಮೇಲೆ ಬಂದಿದೆ. ನಾನು ನೇರ, ನಡೆ, ನುಡಿಗೆ ಬದ್ಧನಾಗಿರುವವನು. ಜಿಲ್ಲೆಯ ಆರಾಧ್ಯ ದೈವ ಶ್ರೀಮಲೆ ಮಹದೇಶ್ವರನ ಮೇಲೆ ಆಣೆ ಮಾಡಿ ಹೇಳುತ್ತೇನೆ ನಾನು ಆ ಕೆಲಸ ಮಾಡಿಲ್ಲ. ಇಂತಹ ಕೆಟ್ಟ ಚಾಳಿಗೆ ನಾನು ಇಳಿಯುವುದಿಲ್ಲ ಎಂದು ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ನಮ್ಮ ಬಂಡಿಯನ್ನು ನಾವು ಎಳೆಯುವುದೇ ಕಷ್ಟವಾಗಿ ರುತ್ತದೆ. ಹಾಗಾಗಿ, ನಾನು ಬೇರೆ ಕ್ಷೇತ್ರಕ್ಕೆ ಹೋಗಿ ಮತಯಾಚನೆ ಮಾಡಲು ಸಾಧ್ಯವಾಗಲಿಲ್ಲ. ಇದಲ್ಲದೇ ನನ್ನನ್ನು ಎ.ಆರ್.ಕೃಷ್ಣಮೂರ್ತಿಯೊಬ್ಬರನ್ನು ಬಿಟ್ಟರೇ ಬೇರೆ ಯಾರೂ ಕರೆಯಲಿಲ್ಲ. ಆ ಕ್ಷೇತ್ರದ ಜನರ ಭಾವನೆ ತಿಳಿದಿದ್ದರಿಂದ ಅಲ್ಲಿಗೆ ಹೋಗಲಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ನನ್ನ ಈ ಬೆಳೆವಣಿಗೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ಆರ್.ಧ್ರುವ ನಾರಾಯಣ ಕಾರಣ. ಅವರನ್ನು ನಾನು ಎಂದೂ ಮರೆಯುವುದಿಲ್ಲ. ಕ್ಷೇತ್ರದ ಮತ ದಾರರನ್ನು ಹೃದಯದಲ್ಲಿಟ್ಟು ಪೂಜೆ ಮಾಡುತ್ತೇನೆ ಎಂದು ಕೃತಜ್ಞತೆ ಸಲ್ಲಿಸಿದರು.

‘ಮುಖ್ಯಮಂತ್ರಿ’ ಅಲ್ಲ ‘ಸಚಿವ’

ನಾನು ‘ಮುಖ್ಯಮಂತ್ರಿ’ಯಾಗಲು ನೀವೇ ಕಾರಣ ಎಂದು ಸಚಿವ ಪುಟ್ಟರಂಗಶೆಟ್ಟಿ ಹೇಳುತ್ತಿದ್ದಂತೆ ಇಡೀ ಸಭಾಂಗಣವೇ ನಗೆಗಡಲಿನಲ್ಲಿ ತೇಲಿತು.ಬಳಿಕ, ತಮ್ಮ ತಪ್ಪನ್ನು ತಿಳಿದುಕೊಂಡು ಅವರು, ‘ಮುಖ್ಯಮಂತ್ರಿ’ ಅಲ್ಲ ‘ಸಚಿವ’ ನಾಗಲು ಕ್ಷೇತ್ರ ಮತದಾರರೇ ಕಾರಣ. ಮುಖ್ಯಮಂತ್ರಿ ಎಂದು ಬಾಯಿ ತಪ್ಪಿ ನುಡಿದೆ. ನಾನು ‘ಮುಖ್ಯಮಂತ್ರಿ’ ಆಗುತ್ತೇನೆ ಎನ್ನುವುದು ಕೇವಲ ಕನಸಿನ ಮಾತು ಅಷ್ಟೇ ಎಂದು ತಾವು ಕೂಡ ವೇದಿಕೆಯಲ್ಲಿ ಮುಗುಳುನಗೆ ಬೀರಿದರು.

ಬೆಳಿಗ್ಗೆ 7 ಗಂಟೆಗೆ ಪ್ರವಾಸಿ ಮಂದಿರಕ್ಕೆ ಹಾಜರು

‘ನಾನು ಸಚಿವನಾಗಿರಬಹುದು. ಆಗಂತ ಶಾಸಕನಾಗಿದ್ದಾಗ ಅನುಸರಿಸುತ್ತಿದ್ದ ದಿನಚರಿಯನ್ನು ಬದಲಾಯಿಸುವುದಿಲ್ಲ. ಮುಂದೆಯೂ ಬೆಳಿಗ್ಗೆ 7 ಗಂಟೆಗೆ ನಗರದ ಪ್ರವಾಸಿ ಮಂದಿರಕ್ಕೆ ಹಾಜರಾಗುತ್ತೇನೆ’ ಎಂದು ಸಚಿವ ಪುಟ್ಟರಂಗಶೆಟ್ಟಿ ಹೇಳಿದರು. ಸಚಿವನಾಗಿರುವುದರಿಂದ ಜವಾಬ್ದಾರಿ ಹೆಚ್ಚಾಗಿದೆ. ಹಾಗಾಗಿ, ಅವಶ್ಯಕತೆ ಇದ್ದಾಗ ಮಾತ್ರ ಬೆಂಗಳೂರಿಗೆ ಹೋಗುತ್ತೇನೆ. ಉಳಿದಂತೆ ನಗರದಲ್ಲಿ ಇದ್ದುಕೊಂಡು ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು.

Translate »