ಬಾಲಚಂದ್ರ ಕಳಗಿ ಸಾವು ಅಪಘಾತವಲ್ಲ, ಕೊಲೆ ಮೂವರ ಬಂಧನ
ಕೊಡಗು

ಬಾಲಚಂದ್ರ ಕಳಗಿ ಸಾವು ಅಪಘಾತವಲ್ಲ, ಕೊಲೆ ಮೂವರ ಬಂಧನ

March 30, 2019

10 ದಿನಗಳಲ್ಲಿ ಪ್ರಕರಣ ಬಯಲಿಗೆಳೆದ ಪೊಲೀಸರು
ಮಡಿಕೇರಿ: ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಸಂಪಾಜೆಯ ನಿವಾಸಿ ಬಾಲಚಂದ್ರ ಕಳಗಿ(42) ಅವರ ಸಾವಿಗೆ ತಿರುವು ಸಿಕ್ಕಿದ್ದು, ಅದೊಂದು ಪೂರ್ವ ನಿಯೋಜಿತ ಕೊಲೆ ಎಂಬುದು ಸಾಬೀತಾಗಿದೆ.
ಬಾಲಚಂದ್ರ ಕಳಗಿ ಅವರನ್ನು ಲಾರಿ ಯಿಂದ ಡಿಕ್ಕಿ ಹೊಡೆಸಿ, ಕೊಲೆ ಮಾಡಿ, ಅದನ್ನು ಅಪಘಾತ ಎಂದು ಬಿಂಬಿಸಲು ಭಾರೀ ಸಂಚು ನಡೆಸಿರುವುದನ್ನು ಕೊಡಗು ಜಿಲ್ಲಾ ಪೊಲೀಸರು ಬಯಲಿಗೆಳೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಪೊಲೀಸರು ಕೊಲೆಗೆ ಸುಪಾರಿ ನೀಡಿದ್ದ ಸಂಪಾಜೆಯ ನಿವಾಸಿ ಸಂಪತ್ ಕುಮಾರ್ (34), ಲಾರಿ ಚಾಲಕ ಮಡಿಕೇರಿ ನಿವಾಸಿ ಜಯನ್(34), ಸಂಪಾಜೆ ನಿವಾಸಿ ಹರಿ ಪ್ರಸಾದ್(36) ಎಂಬುವರನ್ನು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ.

ಘಟನೆ ಹಿನ್ನಲೆ: ಮಾ.19ರಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲ ಚಂದ್ರ ಕಳಗಿ ತಮ್ಮ ಮಾರುತಿ ಓಮ್ನಿ ವ್ಯಾನ್ (ಕೆಎ.12-ಎನ್-4085)ನಲ್ಲಿ ಮೂರ್ನಾಡಿ ನಿಂದ ಮೇಕೇರಿ ಬೈಪಾಸ್ ರಸ್ತೆಯ ಮೂಲಕ ಸಂಪಾಜೆಗೆ ತೆರಳುತ್ತಿದ್ದರು. ಈ ಸಂದರ್ಭ ಲಾರಿ, ಮಾರುತಿ ವ್ಯಾನ್‍ಗೆ ಡಿಕ್ಕಿ ಹೊಡೆದು ಕಳಗಿ ಮೃತಪಟ್ಟಿದ್ದರು. ಪ್ರಾರಂಭದಲ್ಲಿ ಇದೊಂದು ಅಪ ಘಾತ ಪ್ರಕರಣ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿ ದ್ದರು. ಆದರೆ ಘಟನೆ ನಡೆದ ಮರುದಿನ ಮೃತರ ಚಿಕ್ಕಪ್ಪ ಜಯರಾಮ್ ಕಳಗಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದ್ದರು. ಮಾತ್ರವಲ್ಲದೇ, ಕಳಗಿ ಅವ ರೊಂದಿಗೆ ಕೆಲವು ವ್ಯಕ್ತಿಗಳು ವ್ಯವಹಾರಿಕ ವಾಗಿ ದ್ವೇಷ ಸಾಧಿಸುತ್ತಿರುವ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿ ಸಿದ್ದ ಪೊಲೀಸರು ಮೊದಲು ಲಾರಿ ಚಾಲಕ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

ಕೊಲೆಗೆ ಸುಪಾರಿ: ಸಂಪಾಜೆ ಭಾಗದಲ್ಲಿ ಪ್ರಭಾವಿ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದ ಬಾಲಚಂದ್ರ ಕಳಗಿ ಸಂಪಾಜೆ ವ್ಯಾಪ್ತಿಯಲ್ಲಿ ಯಾವುದೇ ಅಕ್ರಮ ದಂಧೆಗಳಿಗೆ ಅವಕಾಶ ನೀಡಿರಲಿಲ್ಲ. ಸಂಪತ್ ಕುಮಾರ್ ಮತ್ತು ಹರಿಪ್ರಸಾದ್ 2 ವರ್ಷಗಳ ಹಿಂದೆ ರಿಕ್ರಿಯೇ ಶನ್ ಕ್ಲಬ್ ನಡೆಸಲು ಮುಂದಾದಾಗ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಬಾಲಚಂದ್ರ ಕಳಗಿ ಅವಕಾಶ ನೀಡಿರಲಿಲ್ಲ. ಮಾತ್ರವ ಲ್ಲದೇ 2018ರ ಮಾರ್ಚ್‍ನಲ್ಲಿ ಸಂಪಾಜೆ ಯಲ್ಲಿ ಬಾರ್ ತೆರೆಯಲು ಪ್ರಯತ್ನಿಸಿದಾಗ ಕಳಗಿ ಜನರನ್ನು ಸೇರಿಸಿ ಪ್ರತಿಭಟನೆ ನಡೆಸಿ, ಬಾರ್ ಲೈಸನ್ಸ್ ಕೈ ತಪ್ಪುವಂತೆ ಮಾಡಿ ದ್ದರು. 2018ರ ಏಪ್ರಿಲ್‍ನಲ್ಲಿ ಸಂಪತ್ ಕುಮಾರ್‍ಗೆ ಸೇರಿದ ಜೆಸಿಬಿ ಯಂತ್ರ ಕಳು ವಾಗಿದ್ದು, ಈ ಕುರಿತು ಪ್ರಕರಣ ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಇದರ ಪತ್ತೆಗೂ ಕಳಗಿ ಅಡ್ಡಿಪಡಿಸಿದ್ದಾ ರೆಂದು ಆರೋಪಿಗಳು ಶಂಕಿಸಿದ್ದರು. ಮಾತ್ರ ವಲ್ಲದೇ, ಕಳಗಿ ಅವರು ರಾಜಕೀಯವಾಗಿ ನಮ್ಮನ್ನು ಮುಂದುವರಿಯದಂತೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ತೇಜೋ ವಧೆ ಮಾಡಿ ನಮ್ಮ ಬೆಳವಣಿಗೆಗೆ ಅಡ್ಡಿ ಮಾಡಿದ್ದಾರೆ ಎಂದು ಕಳಗಿ ವಿರುದ್ದ ಆರೋಪಿ ಗಳು ದ್ವೇಷ ಹೊಂದಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ.

ಈ ಹಿನ್ನಲೆಯಲ್ಲಿ ಆರೋಪಿಗಳು ಬಾಲ ಚಂದ್ರ ಕಳಗಿಯನ್ನು ಕೊಲೆ ಮಾಡಲು 1 ತಿಂಗಳ ಹಿಂದೆ ಸಂಚು ರೂಪಿಸಿದ್ದರು. ಅದರಂತೆ ಸಂಪತ್ ಕುಮಾರ್ ಮಡಿಕೇರಿ ನಿವಾಸಿ ಲಾರಿ ಚಾಲಕ ಜಯನ್‍ಗೆ ಲಾರಿಯ ಲೋನ್ ತೀರಿಸಲು 1.50 ಲಕ್ಷ ನೀಡುವುದಾಗಿ ಹೇಳಿ, ಕಳಗಿಯನ್ನು ಲಾರಿ ಡಿಕ್ಕಿ ಹೊಡೆಸಿ ಕೊಲೆ ಮಾಡಲು ಸೂಚಿಸಿದ್ದ. ಅದರಂತೆ ಪ್ರತಿ ದಿನ ಕಳಗಿ ಅವರ ಚಲನ ವಲನಗಳನ್ನು ಗಮನಿಸುತ್ತಿದ್ದ ಸಂಪತ್ ಕುಮಾರ್ ಮಾ.19 ರಂದು ಸಂಪಾಜೆಯಿಂದ ಹರಿ ಪ್ರಸಾದ್‍ಗೆ ಸೇರಿದ ಸ್ವಿಫ್ಟ್ ಕಾರಿನಲ್ಲಿ(ಕೆಎ.19. ಎಂ.ಇ. 2687) ಬಾಲಚಂದ್ರ ಕಳಗಿ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ. ಕಳಗಿ ಅವರು ಮೂರ್ನಾಡಿನಿಂದ ಮೇಕೇರಿ ಮೂಲಕ ಸಂಪಾಜೆಗೆ ತೆರಳುತ್ತಿದ್ದುದ್ದನ್ನು ಗಮನಿಸಿದ ಸಂಪತ್ ಕುಮಾರ್, ಮೊಬೈಲ್ ಮೂಲಕ ಲಾರಿ ಚಾಲಕ ಜಯನ್‍ಗೆ ಕರೆ ಮಾಡಿ ಬಾಲಚಂದ್ರ ಕಳಗಿ ವ್ಯಾನ್‍ನಲ್ಲಿ ಬರುತ್ತಿರುವ ಬಗ್ಗೆ ಮಾಹಿತಿ ನೀಡಿದ್ದ.

ಈ ಸಂದರ್ಭ ಮಡಿಕೇರಿಯಿಂದ ಮದೆ ನಾಡು ಕಡೆಗೆ ಲಾರಿ(ಕೆಎ-12ಎ-6253) ತೆಗೆದುಕೊಂಡು ತೆರಳಿದ್ದ ಜಯನ್ ಮೊದಲೇ ನಿರ್ಧರಿಸಿದಂತೆ ಮದೆನಾಡಿ ನಿಂದ ವಾಪಸ್ಸಾಗಿ ತಾಳತ್‍ಮನೆ ರಸ್ತೆಯ ಮೂಲಕ ಲಾರಿಯಲ್ಲಿ ಬಂದು ಮಾರುತಿ ವ್ಯಾನ್‍ಗೆ ಡಿಕ್ಕಿ ಹೊಡೆಸಿದ್ದ. ಈ ಘಟನೆಯಲ್ಲಿ ಬಾಲಚಂದ್ರ ಕಳಗಿ ಅವರ ತಲೆಯ ಭಾಗಕ್ಕೆ ಗಂಭೀರ ಗಾಯವಾಗಿ ಅವರು ಸ್ಥಳದಲ್ಲೇ ಮೃತಪಟ್ಟಿ ದ್ದರು. ಬಳಿಕ ಲಾರಿ ಚಾಲಕ ಜಯನ್ ಸ್ಥಳದಿಂದ ಪರಾರಿಯಾಗಿದ್ದಲ್ಲದೇ, ಘಟನೆ ಯನ್ನು ಅಪಘಾತ ಎಂದು ಬಿಂಬಿಸಲು ಪ್ರಯತ್ನಿಸಿದ್ದರು. ಪ್ರಕರಣದ ಕುರಿತು ತನಿಖೆ ನಡೆಸಲು ಮಡಿಕೇರಿ ಉಪ ಅಧೀಕ್ಷಕ ಸುಂದರ್ ರಾಜ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿತ್ತು. ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಸಿದ್ದಯ್ಯ ಮತ್ತು ಉಪನಿರೀಕ್ಷಕ ಚೇತನ್ ಅವರುಗಳು ಎಲ್ಲಾ ಘಟನೆಗಳನ್ನು ತನಿ ಖೆಗೆ ಒಳಪಡಿಸಿದ್ದರು. ಈ ಸಂದರ್ಭ ಸ್ಥಳ ದಲ್ಲಿ ದೊರೆತ ಸಾಂದರ್ಭಿಕ ಸಾಕ್ಷಿಗಳಿಂ ದಾಗಿ ಇದೊಂದು ಉದ್ದೇಶ ಪೂರಿತ ಒಳ ಸಂಚಿನ ಕೊಲೆ ಎಂದು ಪೊಲೀಸರಿಗೆ ಮನದಟ್ಟಾಗಿತ್ತು. ಈ ಹಿನ್ನಲೆಯಲ್ಲಿ ರಸ್ತೆ ಅಪಘಾತ ಪ್ರಕರಣ ಸೆಕ್ಷನ್‍ಗಳನ್ನು ಕೈಬಿಟ್ಟು ಮೊ.ಸಂ. 45\19 ಸೆಕ್ಷನ್ 302,201 ಮತ್ತು 120(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

3 ಮಂದಿ ಆರೋಪಿಗಳನ್ನು ಇಂದು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಲಾರಿ ಅಪಘಾತದ ಮೂಲಕ ಬಾಲಚಂದ್ರ ಕಳಗಿಯನ್ನು ಕೊಲೆ ಮಾಡಿ ರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿ ದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಡಾ.ಪಿ. ಸುಮನ ಸುದ್ದಿಗೋಷ್ಟಿ ಯಲ್ಲಿ ಮಾಹಿತಿ ನೀಡಿದರು. ಪ್ರಕರಣದಲ್ಲಿ ಬೇರೆ ಯಾವುದೇ ವ್ಯಕ್ತಿಗಳ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಪೊಲೀ ಸರು ಎಲ್ಲಾ ಕೋನಗಳಿಂದ ತನಿಖೆ ನಡೆಸಿದ್ದಾರೆ. ಹೆಚ್ಚಿನ ತನಿಖೆಯನ್ನು ಗ್ರಾಮಾಂತರ ಠಾಣಾ ವೃತ್ತನಿರೀಕ್ಷಕ ಸಿದ್ದಯ್ಯ ನಡೆಸುತ್ತಾರೆ ಎಂದು ಎಸ್‍ಪಿ ಮಾಹಿತಿ ನೀಡಿದರು. ಕಾರ್ಯಾಚರಣೆ ಯಲ್ಲಿ ಪ್ರೊಬೆಷನರಿ ಪಿಎಸ್‍ಐ ಶ್ರವಣ್, ಸಿಬ್ಬಂದಿಗಳಾದ ದಿನೇಶ್, ಶಿವರಾಜು, ರವಿ, ಅನಿಲ್, ಮಂಜುನಾಥ್, ಸಿ.ಡಿ.ಆರ್. ವಿಭಾಗದ ರಾಜೇಶ್, ಗಿರೀಶ್ ಹಾಗೂ ಚಾಲಕರಾದ ಸುನೀಲ್ ಮತ್ತು ಅರುಣ್ ಪಾಲ್ಗೊಂಡಿದ್ದರು.

 

Translate »