ಶ್ರದ್ಧಾ ಭಕ್ತಿಯ ಬಸವ ಜಯಂತಿ ಆಚರಣೆ
ಹಾಸನ

ಶ್ರದ್ಧಾ ಭಕ್ತಿಯ ಬಸವ ಜಯಂತಿ ಆಚರಣೆ

May 7, 2019

ಅರಸೀಕೆರೆ: ತಾಲೂಕು ಆಡಳಿತ ಸೇರಿದಂತೆ ಬಸವೇಶ್ವರ ಯುವಕ ಸಂಘ ಹಾಗೂ ಬಸವ ತತ್ವ ಅನುಯಾಯಿಗಳಿಂದ ತಾಲೂಕಿನ ವಿವಿಧೆಡೆ ಜಗಜ್ಯೋತಿ ಬಸವೇಶ್ವರರ ಜಯಂತಿ ಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ನಗರದ ಶ್ಯಾನುಭೋಗರ ಬೀದಿಯಲ್ಲಿರುವ ಬಸವಣ್ಣ ದೇವಾ ಲಯದಲ್ಲಿ ವಿಶೇಷ ಪೂಜೆಗಳು ನಡೆದವು. ಬ್ರಾಹ್ಮೀ ಮಹೂರ್ತ ದಲ್ಲಿ ಬಸವಣ್ಣನ ಮೂಲ ವಿಗ್ರಹಕ್ಕೆ ಜಲ ಕ್ಷೀರ ಸೇರಿದಂತೆ ವಿವಿಧ ಅಭಿಷೇಕಗಳು ಹಾಗೂ ಅರ್ಚನೆಗಳು ಧಾರ್ಮಿಕ ವಿಧಿವಿಧಾನ ಗಳೊಂದಿಗೆ ನೆರವೇರಿತು. ದೇವಾಲಯಕ್ಕೆ ಆಗಮಿಸಿದ ಭಕ್ತರು ಸರದಿ ಸಾಲಿನಲ್ಲಿ ನಿಂತು ನಂದಿ ರೂಪದಲ್ಲಿರುವ ಬಸವಣ್ಣನಿಗೆ ಪೂಜೆ ಸಲ್ಲಿಸಿ ದರ್ಶನ ಮಾಡಿ ತೀರ್ಥ ಪ್ರಸಾದ ಪಡೆಯುವ ಪೂಲಕ ಪುನೀತರಾದರು. ಬಸವ ಜಯಂತಿ ನಿಮಿತ್ತ ನಂದಿ ವಿಗ್ರಹಕ್ಕೆ ಮಾಡಲಾಗಿದ್ದ ವಿಶೇಷ ಪುಷ್ಪಾಲಂಕಾರ ಹಾಗೂ ಬಸವಣ್ಣನ ಮೇಲೆ ಶಿವಲಿಂಗವನ್ನು ಪ್ರತಿಷ್ಠಾಪಿಸಿದ್ದು ಭಕ್ತರ ಕಣ್ಮನ ಸೆಳೆಯಿತು. ದೇವಾಲಯಕ್ಕೆ ಆಗಮಿಸಿದ ಭಕ್ತಾದಿಗಳಿಗೆ ದೇವಸ್ಥಾನದ ಅಭಿವೃದ್ಧಿ ಸಮಿತಿ ವತಿಯಿಂದ ಪಾನಕ ಮತ್ತು ಫಲಹಾರ ವಿತರಿಸಲಾಯಿತು.

ವಿಜೃಂಭಣೆಯ ಮೆರವಣಿಗೆ: ಸಂಜೆ ಶೃಂಗರಿಸಿದ್ದ ರಥದ ಮಂಟಪದಲ್ಲಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರ ಪ್ರತಿಷ್ಠಾಪಿಸಿ ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನದೊಂದಿಗೆ ನಗರದ ಮೂಲಕ ಪ್ರಮುಖ ರಸ್ತೆಗಳಲ್ಲಿ ಉತ್ಸವವನ್ನು ನಡೆಸಲಾಯಿತು. ಉತ್ಸವದ ಉದ್ದಕ್ಕೂ ಜಾನಪದ ಕಲಾ ತಂಡಗಳ ಕಲಾವಿದರು ನೀಡಿದ ಕಲಾ ಪ್ರದರ್ಶನ ಉತ್ಸವದ ಕಳೆ ಹೆಚ್ಚಿಸಿತು. ರಸ್ತೆಯ ಉದ್ದಗಲಕ್ಕೂ ಕಟ್ಟಲಾಗಿದ್ದ ತಳಿರು ತೋರಣಗಳು ಹಾಗೂ ವಿದ್ಯುತ್ ದೀಪದ ಅಲಂಕಾರ ನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಸುವಂತೆ ಮಾಡಿತು.

ಉತ್ಸವದಲ್ಲಿ ಮಾಜಿ ಶಾಸಕರಾದ ಕೆ.ಪಿ.ಪ್ರಭುಕುಮಾರ್, ಜಿ.ಎಸ್. ಪರಮೇಶ್ವರಪ್ಪ, ಎ.ಎಸ್.ಬಸವರಾಜು ಸೇರಿದಂತೆ ತಾಲೂಕು ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ಜಿವಿಟಿ ಬಸವರಾಜು, ಬ್ಲಾಕ್ ಕಾಂಗ್ರೆಸ್ ನಿಕಟ ಪೂರ್ವ ಅಧ್ಯಕ್ಷ ಗಂಜಿಗೆರೆ ಚಂದ್ರಶೇಖರ್, ವೀರಶೈವ ಲಿಂಗಾಯಿತ ಸಮಾಜದ ಮುಖಂಡರಾದ ಭಾಮ ನಾಗರಾಜ್, ಅಣ್ಣನಾಯ್ಕನಹಳ್ಳಿ ವಿಜಯ್ ಕುಮಾರ್, ದಿವಾಕರ್ ಬಾಬು, ಲೋಕೇಶ್, ಬಸವ ಸಮಿತಿಯ ಲೋಕೇಶ್, ಪ್ರವೀಣ್, ದಿವಾಕರ್, ಮಂಜುನಾಥ್, ಮೋಹನ್, ಶಶಿಕುಮಾರ್, ಮಧು, ಅನಿಲ್‍ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

Translate »