ಮಂಡ್ಯ, ಜು.4(ನಾಗಯ್ಯ)- ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾದ ಕಾರಣ ಗುರುವಾರ ಬೆಂಗಳೂರಿನಿಂದ ಮೈಸೂರು ಕಡೆಗೆ ಹೊರಟಿದ್ದ ಬಸವ ಎಕ್ಸ್‍ಪ್ರೆಸ್ ಹಾಗೂ ಮಾಲ್ಗುಡಿ ಎಕ್ಸ್‍ಪ್ರೆಸ್ ರೈಲು ಸಂಚಾರ ವಿಳಂಬವಾಗಿ, ಪ್ರಯಾಣಿಕರು ಪರದಾ ಡಿದ ಘಟನೆ ನಡೆಯಿತು. ಮದ್ದೂರು ಸಮೀ ಪದ ಸೋಮನಹಳ್ಳಿ ಬಳಿ ಬಸವ ಎಕ್ಸ್‍ಪ್ರೆಸ್ ಮತ್ತು ಮಾಲ್ಗುಡಿ ಎಕ್ಸ್‍ಪ್ರೆಸ್ ರೈಲುಗಳು ತಲಾ ಒಂದೂವರೆ ಗಂಟೆ ನಿಂತಲ್ಲೇ ನಿಂತು ಮೈಸೂರು ಕಡೆ ಸಂಚರಿಸಿದವು.
ಎಂದಿನಂತೆ ನಿಗದಿತ ಸಮಯಕ್ಕೆ ಬೆಂಗ ಳೂರಿನಿಂದ ಹೊರಟ ಬಸವ ಎಕ್ಸ್‍ಪ್ರೆಸ್ ಮಧ್ಯಾಹ್ನ 12 ಗಂಟೆಯಲ್ಲಿ ಸೋಮನ ಹಳ್ಳಿಯ ಬಳಿ ಇದ್ದಕ್ಕಿದ್ದಂತೆಯೇ ಸಂಚಾರ ಸ್ಥಗಿತಗೊಳಿಸಿತು. ಸುದ್ದಿ ತಿಳಿದು ಬೆಂಗಳೂ ರಿನ ರೈಲ್ವೆ ವಿದ್ಯುತ್ ತಾಂತ್ರಿಕ ತಂಡ ಸ್ಥಳಕ್ಕಾಗಮಿಸಿ,
ಪರಿಶೀಲಿಸಿದಾಗ ವಿದ್ಯುತ್ ತಂತಿ ಮಾರ್ಗಮಧ್ಯೆ ಕಟ್ಟಾಗಿರುವುದು ಕಂಡು ಬಂದಿತು. ಮಧ್ಯಾಹ್ನ 2ಗಂಟೆ ಸುಮಾರಿಗೆ ವಿದ್ಯುತ್ ಲೈನ್ ಸರಿಪಡಿಸಿದ ಬಳಿಕ ರೈಲು ಹೊರಟಿತು.
ಇದಾದ ಬಳಿಕ ಸಂಜೆ 4 ಗಂಟೆ ಸುಮಾರಿನಲ್ಲಿ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಮಾಲ್ಗುಡಿ ಎಕ್ಸ್‍ಪ್ರೆಸ್ ಕೂಡ ಸೋಮನಹಳ್ಳಿ ಬಳಿಯೇ ವಿದ್ಯುತ್ ಲೈನ್‍ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಆದರೂ ಸ್ಟೇಷನ್ ಅಧಿಕಾರಿಗಳ ಮುಂಜಾಗೃತ ಕ್ರಮದಿಂದಾಗಿ ಮದ್ದೂರು ರೈಲ್ವೆ ನಿಲ್ದಾಣದಲ್ಲಿ ರೈಲು ನಿಲ್ಲುವ ವ್ಯವಸ್ಥೆ ಮಾಡಲಾಯಿತು.
ಸ್ಥಳದಲ್ಲೇ ಇದ್ದ ರೈಲ್ವೆ ವಿದ್ಯುತ್ ದುರಸ್ಥಿಯ ತಾಂತ್ರಿಕ ತಂಡ ವಿದ್ಯುತ್ ಲೈನ್ ದೋಷ ಸರಿಪಡಿಸಿದ ಬಳಿಕ ಸಂಜೆ 5 ಗಂಟೆಯ ಬಳಿಕ ಮಾಲ್ಗುಡಿ ಏಕ್ಸ್‍ಪ್ರೆಸ್ ಸಂಚರಿಸಿತು. ಬಸ್ ಸಂಪರ್ಕವೂ ಸರಿಯಾಗಿಲ್ಲದ ಮಾರ್ಗದಲ್ಲಿ ರೈಲು ಕೆಟ್ಟು ನಿಂತಿದ್ದರಿಂದ ಮಾಲ್ಗುಡಿ ರೈಲಿನ ಕೆಲವು ಪ್ರಯಾಣಿಕರನ್ನು ಟಿಪ್ಪು ರೈಲಿನಲ್ಲಿ ಮೈಸೂರು ಕಡೆಗೆ ತೆರಳುವ ವ್ಯವಸ್ಥೆ ಮಾಡಲಾಯಿತು ಎಂದು ತಿಳಿದು ಬಂದಿದೆ.