ಚಾಮುಂಡಿ ಸನ್ನಿಧಿಯಲ್ಲಿ ಆಷಾಢ ಪೂಜೆಗೆ ಸಕಲವೂ ಸಜ್ಜು
ಮೈಸೂರು

ಚಾಮುಂಡಿ ಸನ್ನಿಧಿಯಲ್ಲಿ ಆಷಾಢ ಪೂಜೆಗೆ ಸಕಲವೂ ಸಜ್ಜು

July 5, 2019

ಮೈಸೂರು, ಜು.4(ಎಂಟಿವೈ)- ಆಷಾಢ ಮಾಸದ ಮೊದಲ ಶುಕ್ರವಾರ ಚಾಮುಂಡಿಬೆಟ್ಟದ ನಾಡದೇವಿ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ನಡೆಯಲಿರುವ ವಿಶೇಷ ಪೂಜಾ ಕಾರ್ಯ ದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಲಿರುವ ಹಿನ್ನೆಲೆ ಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತಾ ಕಾರ್ಯ ಪೂರ್ಣಗೊಳಿಸಿದೆ.

ಶಕ್ತಿ ದೇವತೆಗಳ ಆರಾಧನೆ ಮಾಸವಾದ ಆಷಾಢ ಶುಕ್ರವಾರ ದಂದು ವಿವಿಧ ಜಿಲ್ಲೆ ಹಾಗೂ ನೆರೆ ರಾಜ್ಯಗಳಿಂದಲೂ ಚಾಮುಂಡಿ ಬೆಟ್ಟಕ್ಕೆ ತಂಡೋಪ ತಂಡವಾಗಿ ಆಗಮಿಸುವ ವಾಡಿಕೆಯಿದ್ದು, ಲಕ್ಷದವರೆಗೂ ಭಕ್ತರು ಆಗಮಿಸಲಿರುವ ಹಿನ್ನೆಲೆಯಲ್ಲಿ ದೇವಾ ಲಯ ಸುತ್ತಲೂ ಭದ್ರತೆ ಕೈಗೊಳ್ಳಲಾಗಿದೆ. ಅಲ್ಲದೆ ನೂಕು-ನುಗ್ಗಲು ತಡೆಗೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಬೆಳಿಗ್ಗೆ 5.30 ರಿಂದ ದರ್ಶನ: ನಾಳೆ (ಜು.5) ಮೊದಲ ಆಷಾಢ ಶುಕ್ರ ವಾರ. ಮುಂಜಾನೆ 3.30 ಗಂಟೆಯಿಂದಲೇ

ದೇವಸ್ಥಾನದಲ್ಲಿ ರುದ್ರಾಭಿಷೇಕ, ಪಂಚಾಮೃತ ಅಭಿಷೇಕಗಳು ನೆರವೇರಲಿವೆ. ಬೆಳಿಗ್ಗೆ 5.30 ರಿಂದ ರಾತ್ರಿ 10ರವರೆಗೂ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಮಧ್ಯೆ ಬೆಳಿಗ್ಗೆ 9.30ಕ್ಕೆ ಮಹಾ ಮಂಗಳಾರತಿ, ಸಂಜೆ 6 ರಿಂದ 7.30ರವರೆಗೆ ಉತ್ಸವ ಮೂರ್ತಿಯ ದರ್ಶನ ಮಾತ್ರ ಇರಲಿದೆ. ಈ ವೇಳೆ ದೇವರಿಗೆ ನಾನಾ ಅಭಿಷೇಕ ನಡೆಯ ಲಿದೆ.  ಆಷಾಢದ ಪೂಜೆ ಪುನಸ್ಕಾರಗಳಿಗಾಗಿ ದೇವಸ್ಥಾನದ ಗರ್ಭ ಗುಡಿಯನ್ನು ನಾನಾ ಹೂ ಮತ್ತು ಹಣ್ಣುಗಳಿಂದÀ ಅಲಂಕರಿಸಲಾ ಗಿದೆ. ದೇವಾಲಯದ ಕಂಬಗಳನ್ನು ಸುಂದರಗೊಳಿಸಲಾಗಿದೆ. ಗರ್ಭ ಗುಡಿಯಂತೂ ಕಂಗೊಳಿಸುತ್ತಿದೆ. ವಿಶೇಷ ಪೂಜೆಗಾಗಿ ವಿವಿಧ ಹೂಗಳಿಂದ ಅಲಂಕರಿಸಲಾಗುತ್ತಿದೆ ಎಂದು ದೇವಸ್ಥಾನ ಪ್ರಧಾನ ಅರ್ಚಕ ಡಾ.ಶಶಿಶೇಖರ ದೀಕ್ಷಿತ್ ತಿಳಿಸಿದರು.ದರ್ಶನಕ್ಕೆ ಮೂರು ಸಾಲು: ಈ ಬಾರಿ ದರ್ಶನಕ್ಕೆ ಮೂರು ಸಾಲಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಉಚಿತ ದರ್ಶನ, 50 ರೂ. ಬೆಲೆಯ ವಿಶೇಷ ಟಿಕೆಟ್ ದರ್ಶನ ಹಾಗೂ 300, 500 ರೂ. ಬೆಲೆಯ ವಿಶೇಷ ಟಿಕೆಟ್ ದರ್ಶನ (ಅಭಿಷೇಕ) ವ್ಯವಸ್ಥೆ ಮಾಡಲಾಗಿದೆ. ಲಲಿತ ಮಹಲ್ ಹೆಲಿಪ್ಯಾಡ್ ಹಾಗೂ ಮಹಿಷಾಸುರ ಪ್ರತಿಮೆ ಬಳಿ ಈ ವಿಶೇಷ ಟಿಕೆಟ್ ಮಾರಾಟಕ್ಕಾಗಿ ಕೌಂಟರ್ ತೆರೆಯಲಾಗುತ್ತಿದೆ.

ಖಾಸಗಿ ವಾಹನಗಳಿಗೆ ನಿಷೇಧ: ಸಂಚಾರ ದಟ್ಟಣೆ ತಡೆಗಟ್ಟುವ ನಿಟ್ಟಿನಲ್ಲಿ ಈ ಬಾರಿಯೂ ಆಷಾಢ ಮಾಸದ ಶುಕ್ರವಾರ ಹಾಗೂ ವರ್ಧಂತಿ ಮಹೋತ್ಸವದಂದು ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದೆ. ಖಾಸಗಿ ವಾಹನಗಳಲ್ಲಿ ಬರುವ ಭಕ್ತರು ಲಲಿತಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ತಮ್ಮ ವಾಹನ ನಿಲ್ಲಿಸಿ, ಜಿಲ್ಲಾಡಳಿತ ವ್ಯವಸ್ಥೆ ಮಾಡಿರುವ ಬಸ್‍ಗಳಲ್ಲಿ ಉಚಿತವಾಗಿ ಬೆಟ್ಟಕ್ಕೆ ಪ್ರಯಾಣಿಸಬಹುದಾಗಿದೆ.

ವಿಶೇಷ ಬಸ್ ವ್ಯವಸ್ಥೆ:  ಲಲಿತ ಮಹಲ್ ಹೆಲಿಪ್ಯಾಡ್‍ನಿಂದ ಭಕ್ತರನ್ನು ಬೆಟ್ಟಕ್ಕೆ ಕರೆದೊಯ್ಯಲು ಜಿಲ್ಲಾಡಳಿತ 22 ಬಸ್ ವ್ಯವಸ್ಥೆ ಮಾಡಿದೆ. ಭಕ್ತರ ಸಂಖ್ಯೆ ಹೆಚ್ಚಾದರೆ ಮತ್ತಷ್ಟು ಬಸ್ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಮುಂಜಾನೆ 3 ರಿಂದ ರಾತ್ರಿ 10 ಗಂಟೆವರೆಗೂ ಉಚಿತ ಬಸ್ ಸೇವೆ ಇರಲಿದೆ. ಇದಲ್ಲದೆ ನಗರ ಬಸ್ ನಿಲ್ದಾಣದಿಂದ ಚಾಮುಂಡಿಬೆಟ್ಟಕ್ಕೆ 10 ವೋಲ್ವೋ ಬಸ್ ಸೇರಿದಂತೆ 40 ವಿಶೇಷ ಬಸ್ ಸಂಚಾರದ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 5.30 ರಿಂದ ರಾತ್ರಿ 10 ಗಂಟೆವರೆಗೆ ಬೆಟ್ಟಕ್ಕೆ ಬಸ್ ಕಲ್ಪಿಸಲಾಗಿದೆ. ವಿಕಲಚೇತನರು, ಹಿರಿಯ ನಾಗರಿಕರನ್ನು ದೇವಾಲಯದ ಬಳಿ ಕರೆದೊಯ್ಯಲು ಮಹಿಷಾಸುರ ಪ್ರತಿಮೆ ವೃತ್ತದಿಂದ ಬ್ಯಾಟರಿ ಚಾಲಿತ ವಾಹನ ವ್ಯವಸ್ಥೆ ಮಾಡಲಾಗಿದೆ.

ಶೌಚಾಲಯ ವ್ಯವಸ್ಥೆ: ಭಕ್ತರ ಅನುಕೂಲಕ್ಕಾಗಿ ಬೆಟ್ಟದಲ್ಲಿ 20ಕ್ಕೂ ಹೆಚ್ಚು  ತಾತ್ಕಾಲಿಕ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಹೆಲಿಪ್ಯಾಡ್, ಮಹಿಷಾಸುರ ಪ್ರತಿಮೆ ವೃತ್ತ ಮತ್ತು ದರ್ಶನಕ್ಕೆ ಭಕ್ತರು ನಿಲ್ಲುವ ಸಾಲುಗಳ ಬಳಿ ತಾತ್ಕಾಲಿಕ ಶೌಚಾಲಯಗಳಿರುತ್ತವೆ.

ಪ್ಲಾಸ್ಟಿಕ್ ನಿಷೇಧ: ಭಕ್ತರು ಪ್ಲಾಸ್ಟಿಕ್ ಕವರ್ ತರುವುದನ್ನು ನಿಷೇಧಿಸಲಾಗಿದೆ. ಹೆಲಿಪ್ಯಾಡ್ ಬಳಿಯೇ ಅವುಗಳನ್ನು ಸಂಗ್ರಹಿಸಲಾಗುತ್ತದೆ. ಈ ಸಂಬಂಧ ಜಾಗೃತಿ ಫಲಕ ಕೂಡ ಅಳವಡಿಸಲಾಗಿದೆ.

ವೈದ್ಯಕೀಯ ಸೇವೆ: ಚಾಮುಂಡಿಬೆಟ್ಟದಲ್ಲಿ ಭಕ್ತರ ಅನುಕೂಲಕ್ಕಾಗಿ ತುರ್ತು ವೈದ್ಯಕೀಯ ಸೇವೆಗೆ ವೈದ್ಯರನ್ನು ನಿಯೋಜಿಸಲಾಗಿದೆ. ಅಗತ್ಯ ಔಷಧಗಳ ದಾಸ್ತಾನು ಮಾಡಲಾಗಿದ್ದು, ಆಂಬುಲೆನ್ಸ್  ಮತ್ತು  ಅಗ್ನಿಶಾಮಕ ವಾಹನಗಳÀ ವ್ಯವಸ್ಥೆ ಕೂಡ ಮಾಡಲಾಗಿದೆ.

ಚಾಮುಂಡಿಬೆಟ್ಟದಲ್ಲಿ ಸಿದ್ಧತೆ ಪರಿಶೀಲಿಸಿದ ಸಚಿವ ಜಿಟಿಡಿ

ಮೈಸೂರು,ಜು.4(ವೈಡಿಎಸ್)-ನಾಳೆ ಆಷಾಢ ಶುಕ್ರ ವಾರದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡರು ಲಲಿತ್‍ಮಹಲ್ ಹೆಲಿಪ್ಯಾಡ್ ಮತ್ತು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಸಿದ್ಧತೆಯನ್ನು ಪರಿಶೀಲಿ ಸಿದರು. ಗುರುವಾರ ಸಂಜೆ ಸಚಿವರು, ಅಧಿಕಾರಿ ಗಳೊಂದಿಗೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ಮೊದಲ ಆಷಾಢ ಶುಕ್ರವಾರದಂದು ಬೆಟ್ಟಕ್ಕೆ ಬರುವ ಭಕ್ತರಿಗೆ ಯಾವುದೇ ಅನಾನುಕೂಲವಾಗದಂತೆ ಕೈಗೊಂಡಿ ರುವ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಸಚಿವರು, ಈ ವರ್ಷದ ಮೊದಲ ಆಷಾಢ ಶುಕ್ರವಾರಕ್ಕೆ ಚಾಮುಂಡಿಬೆಟ್ಟದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಂಗಾರು ಕೈಕೊಟ್ಟಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ. ಮಳೆ ಬಂದರೆ ಮಾತ್ರ ಸಕಲ ಜೀವರಾಶಿಯೂ ಸಂತೋಷದಿಂದ ಇರಲು ಸಾಧ್ಯ. ಹಾಗಾಗಿ ತಾಯಿ ಚಾಮುಂಡೇಶ್ವರಿಯಲ್ಲಿ ಮಳೆಗಾಗಿ ಪ್ರಾರ್ಥಿಸುತ್ತೇನೆ ಎಂದರು.

ಪ್ರತಿ ವರ್ಷದಂತೆ ಆಷಾಢ ಶುಕ್ರವಾರ ಬಾರೀ ಪ್ರಮಾಣದಲ್ಲಿ ಭಕ್ತರು ತಾಯಿಯ ದರ್ಶನ ಪಡೆಯಲು ಆಗಮಿಸುವ ನಿರೀಕ್ಷೆಯಿದೆ. ಹಾಗಾಗಿ ಬರುವ ಭಕ್ತರು ಯಾವುದೇ ತೊಂದರೆ ಇಲ್ಲದೆ ದೇವಿ ದರ್ಶನ ಪಡೆದು ಸಂತೋಷದಿಂದ ತೆರಳಬೇಕು. ಅದಕ್ಕಾಗಿ ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಲಲಿತ ಮಹಲ್ ಹೆಲಿಪ್ಯಾಡ್‍ನಲ್ಲಿ ವಾಹನ ನಿಲ್ದಾಣಕ್ಕೆ ಸಿದ್ಧತೆ ಮಾಡಲಾಗಿದೆ. ವಿಐಪಿಗಳಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.

Translate »