ನೂರಾರು ದೂರು, ಕೆಲವಕ್ಕೆ ಸ್ಥಳದಲ್ಲೇ ಪರಿಹಾರ
ಮೈಸೂರು

ನೂರಾರು ದೂರು, ಕೆಲವಕ್ಕೆ ಸ್ಥಳದಲ್ಲೇ ಪರಿಹಾರ

July 5, 2019

ಮೈಸೂರು, ಜು.4(ಆರ್‍ಕೆಬಿ)- ಮೈಸೂರಿನ ಕೇರ್ಗಳ್ಳಿ ಮತ್ತು ಅಯ್ಯಜಯ್ಯನಹುಂಡಿಯಲ್ಲಿ ರಾಜೀವ್‍ಗಾಂಧಿ ವಸತಿ ಯೋಜನೆಯಡಿ ಆಯ್ಕೆ ಯಾದ ಫಲಾನುಭವಿಗಳ ನಿವೇಶನ ನೋಂದಣಿ ಯಾಗದೆ ಸಂಕಷ್ಟದಲ್ಲಿರುವ ಸಂಬಂಧ ಶನಿವಾರ ಜಿಲ್ಲಾಧಿಕಾರಿ, ಮೈಸೂರು ನಗರಪಾಲಿಕೆ ಅಧಿಕಾರಿ ಗಳ ಹಾಗೂ ಫಲಾನುಭವಿಗಳ ಸಭೆ ನಡೆಸಲಾಗು ವುದು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ನೊಂದ ಫಲಾನು ಭವಿಗಳಿಗೆ ಇಂದಿಲ್ಲಿ ಭರವಸೆ ನೀಡಿದರು.

ಮೈಸೂರು ಮಹಾನಗರಪಾಲಿಕೆ ಹಾಗೂ ನಗರಾ ಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ಪ್ರದೇಶಗಳ ನಾಗರಿ ಕರ ಅಹವಾಲು ಸ್ವೀಕರಿಸಿ, ಸಮಸ್ಯೆ ಪರಿಹರಿ ಸುವ ಸಂಬಂಧ ಮೈಸೂರಿನ ಜೆಕೆ ಮೈದಾನ ದಲ್ಲಿ ಗುರುವಾರ ಏರ್ಪಡಿಸಿದ್ದ `ಜನಸ್ಪಂದನಾ’ ಕಾರ್ಯಕ್ರಮದಲ್ಲಿ ಈ ಭರವಸೆ ನೀಡಿದರು. ರಾಜೀವ್‍ಗಾಂಧಿ ವಸತಿ ಯೋಜನೆಯಡಿ ನಿವೇ ಶನಕ್ಕಾಗಿ 19 ವರ್ಷಗಳ ಹಿಂದೆ ಅರ್ಜಿ ಹಾಕಿದ್ದ ವರಿಗೆ ಕೇರ್ಗಳ್ಳಿ ಸರ್ವೆ ನಂ.5 ಹಾಗೂ ಅಯ್ಯಜಯ್ಯನಹುಂಡಿ ಸರ್ವೆ ನಂ. 17ರಲ್ಲಿ 2006 ರಲ್ಲಿ 475 ಮಂದಿಗೆ 20ಘಿ30 ಅಳತೆಯ ನಿವೇಶನ ಮಂಜೂರಾಗಿತ್ತು. 475ರ ಪೈಕಿ ಕೇರ್ಗಳ್ಳಿ ಮತ್ತು ಅಯ್ಯಜಯ್ಯನಹುಂಡಿಯಲ್ಲಿ ತಲಾ ಒಬ್ಬರಿಗೆ (ಒಟ್ಟು ಇಬ್ಬರಿಗೆ) ನಿವೇಶನದ ನೋಂದಣಿ ಮಾಡಿಕೊಡಲಾಯಿತು. ಆದರೆ ಉಳಿದ 473 ಫಲಾನುಭವಿಗಳಿಗೆ ನೋಂದಣಿ ಮಾಡಿಕೊಳ್ಳುವ ಹೊತ್ತಿಗೆ ನಿವೇಶನ ಸಿಗದ ಕೆಲವು ಅತೃಪ್ತರು ದುರುದ್ದೇಶದಿಂದ ಮೈಸೂರಿನ 2ನೇ ಕಿರಿಯ ನ್ಯಾಯಾಲಯದಲ್ಲಿ ರಿಟ್ ಸಲ್ಲಿಸಿದ್ದರು. ಹೀಗಾಗಿ ಮೈಸೂರು ನಗರಪಾಲಿಕೆ ನೋಂದಣಿ ಮಾಡಿ ಕೊಡಲು ಸಬೂಬು ಹೇಳುತ್ತಾ ಕಾಲಹರಣ ಮಾಡಿ 11 ವರ್ಷ ವ್ಯರ್ಥ ಮಾಡಿದೆ. ಬಾಡಿಗೆ ಮನೆಯಲ್ಲಿ ಜೀವನ ಮಾಡುತ್ತಾ, ನಿವೇಶನದ ನಿರೀಕ್ಷೆಯಲ್ಲೇ ಹಲವು ಫಲಾನುಭವಿಗಳು ಈಗಾಗಲೇ ಮರಣ ಹೊಂದಿದ್ದು, ಇನ್ನೂ ಅನೇಕರು ಕಾಯಿಲೆಯಿಂದ ನರಳುತ್ತಿದ್ದಾರೆ. ಅವರ ಕುಟುಂಬಗಳು ಚಿಂತಾಜನಕ ಸ್ಥಿತಿಯಲ್ಲಿವೆ. ನ್ಯಾಯಾಲಯದ ತೀರ್ಪು ಕೂಡ ಫಲಾನುಭವಿಗಳ ಪರವಾಗಿಯೇ ಇದೆ. ಆದ್ದರಿಂದ ನಮಗೆ ಹಕ್ಕುಪತ್ರ ಕೊಡಿಸಿಕೊಡಿ ಎಂದು ನೊಂದ ಆಶ್ರಯ ಫಲಾನು ಭವಿಗಳು ಮನವಿಯಲ್ಲಿ ಒತ್ತಾಯಿಸಿದರು.

ಕೊನೆಗೂ ಸಿಕ್ತು ನಿವೇಶನ ಹಕ್ಕುಪತ್ರ: ಮಂಡಕಳ್ಳಿ ವಿಮಾನ ನಿಲ್ದಾಣಕ್ಕಾಗಿ ಭೂಮಿ ಕಳೆದುಕೊಂಡಿದ್ದ ರೈತ ಕುಟುಂಬಗಳ ಎರಡು ದಶಕಗಳ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದೆ. ಮಂಡಕಳ್ಳಿ ವಿಮಾನ ನಿಲ್ದಾಣ ಕ್ಕಾಗಿ 29 ಮಂದಿ ಮನೆ, ನಿವೇಶನಗಳನ್ನು ಬಿಟ್ಟು ಕೊಟ್ಟಿದ್ದರು. ಆದರೆ ಅಂದಿನಿಂದ ಅವರಿಗೆ ಬದಲಿ ನಿವೇಶನ ಸಿಕ್ಕಿರಲಿಲ್ಲ. ನಿವೇಶನಕ್ಕಾಗಿ ನೊಂದ ರೈತರು, ರೈತ ಸಂಘದ ನೇತೃತ್ವದಲ್ಲಿ ಬೀದಿಗಿಳಿದು ಹೋರಾಟ ನಡೆಸುತ್ತಲೇ ಬಂದಿದ್ದರು. ಅದರ ಫಲವಾಗಿ ಇಂದು 20 ಮಂದಿ ರೈತ ಕುಟುಂಬಗಳಿಗೆ ಗ್ರಾಮೀಣ ವಸತಿ ಯೋಜನೆಯಡಿ ನಿವೇಶನದ ಹಕ್ಕುಪತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ವಿತರಿಸಿದರು.

ಅಲ್ಲದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ, ನಿವೇಶನಕ್ಕಾಗಿ ಅಲೆಯುತ್ತಿದ್ದ ನಿವೃತ್ತರಿಗೂ ಇಂದು ನಿವೇಶನದ ಹಕ್ಕುಪತ್ರಗಳನ್ನು ಸಚಿವರು ವಿತರಿಸಿದರು.

ಇನ್‍ಕ್ರಿಮೆಂಟ್ ಕೊಡಿಸಲು ಮನವಿ: ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದಲ್ಲಿ 34 ವರ್ಷದಿಂದ ಮನೆತನದ ಬರಾಬರ್ದ್ ಹುದ್ದೆ ಶ್ರೀಪಾದ ಕೆಲಸ ನಿರ್ವಹಿಸುತ್ತಾ ಬಂದಿರುವ ಟಿ.ವಿ.ನಾಗರಾಜು ಅವರು ದೇವಾಲಯದ ನೌಕರರಿಗೆ 65 ವರ್ಷಗಳವರೆಗೆ ಸಂಬಳ ಇನ್‍ಕ್ರಿಮೆಂಟ್ ಇತ್ಯಾದಿ ಕೊಡುವ ಆದೇಶ ವಿದ್ದರೂ 64 ವರ್ಷದ ತಮಗೆ ಸೇವಾ ಹಿರಿತನ ಹಾಗೂ ಆದೇಶ ಪರಿಗಣಿಸಿ ನ್ಯಾಯಸಮ್ಮತವಾಗಿ ಬರಬೇಕಾಗಿರುವ ಮೂರೂವರೆ ವರ್ಷದ ಇನ್‍ಕ್ರಿಮೆಂಟ್ ಕೊಡಿಸುವಂತೆ ಮನವಿ ಸಲ್ಲಿಸಿದರು.

ಬಾರದ ಮನಸ್ವಿನಿ ಹಣ: ಮೈಸೂರಿನ ಜೆ.ಪಿ.ನಗರ 2ನೇ ಹಂತದ ನಿವಾಸಿ ಅವಿವಾಹಿತ ಮಹಿಳೆ ಟಿ.ಎಸ್.ಲತಾ ಮನಸ್ವಿನಿ ಯೋಜನೆಯಡಿ ಬರುತ್ತಿದ್ದ ಹಣ ಕಳೆದ ಎರಡು ವರ್ಷದಿಂದ ನಿಂತುಹೋಗಿದೆ. ಅಂಚೆ ಕಚೇರಿ, ತಾಲೂಕು ಕಚೇರಿ, ನಗರಪಾಲಿಕೆ ಕಚೇರಿಗೆ ಅಲೆದು ಸಾಕಾಗಿದೆ. ಹಣ ಕೊಡಿಸಿಕೊಡಿ ಎಂದು ಮನವಿ ಮಾಡಿದರು. ಮೈಸೂರಿನ ಹೆಬ್ಬಾಳು ಕೆ.ಎನ್.ಕುಮಾರ್ ಹುಯಿಲಾಳು ಗ್ರಾಮ ಸರ್ವೆ ನಂ89 ಸೈನಿಕರ ಕೋಟಾದಡಿ 5 ಎಕರೆ ಜಮೀನು ಮಂಜೂರು ಮಾಡುವಂತೆ ನಕ್ಷೆ ತಯಾರಿದ್ದು, ಜಮೀನು ಮಂಜೂರು ಮಾಡಿಕೊಡಲು ಮನವಿ ಸಲ್ಲಿಸಿದರು.

ಉದ್ಯೋಗಕ್ಕಾಗಿ ಮನವಿ: ಸರಗೂರು ತಾಲೂಕು ಕಂದಲಿಕೆ ಗ್ರಾಮದ ನಿಂಗರಾಜು ಅವರು ತಮ್ಮ ತಂದೆ ನಿಂಗನಾಯ್ಕ 2016ರ ಮಾ.31ರಂದು ಜಮೀನಿ ನಲ್ಲಿ ಕಾವಲು ಕಾಯುತ್ತಿದ್ದ ವೇಳೆ ಆನೆ ತುಳಿದು ಮೃತಪಟ್ಟಿದ್ದು, ಈಗ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಎಂ.ಎ. ಪದವಿ ಹಾಗೂ ಕಂಪ್ಯೂಟರ್ ಕಲಿತಿರುವ ನನಗೆ ಉದ್ಯೋಗ ನೀಡುವಂತೆ ಮನವಿ ಮಾಡಿದರು.

ನೀರಿನ ಬಿಲ್ ಕಟ್ಟಿದ್ದರೂ ಅದು ಜಮಾ ಆಗದೆ ಪ್ರತಿ ತಿಂಗಳು ಹೆಚ್ಚು ಹೆಚ್ಚು ಬಿಲ್ ಬರುತ್ತಿರುವ ಬಗ್ಗೆ ಮೈಸೂರಿನ ಬನ್ನಿಮಂಟಪ ಎ ಲೇಔಟ್ ನಿವಾಸಿ ಮಜೀರ್ ಉನ್ನಿಸಾ ದೂರು ಸಲ್ಲಿಸಿದರು.

ಇದಿಷ್ಟೇ ಅಲ್ಲದೆ, ಕುಡಿಯುವ ನೀರು, ಒಳಚರಂಡಿ, ಬೀದಿ ದೀಪ, ಬೀದಿ ನಾಯಿಗಳು, ಬಿಡಾಡಿ ದನಗಳ ಹಾವಳಿ, ನಿವೇಶನ ನೊಂದಣಿ, ಹಣಕಾಸಿನ ನೆರವು ಇನ್ನಿತರ ಅನೇಕ ದೂರು ಅರ್ಜಿಗಳು ಜನಸ್ಪಂದನಾ ದಲ್ಲಿ ಸಲ್ಲಿಕೆಯಾದವು.

ಸರ್ಕಾರಿ ಜಾಗದಲ್ಲಿ ಅಕ್ರಮ ಕಟ್ಟಡ ದೂರು: ಮೈಸೂರಿನ ಲಲಿತ ಮಹಲ್ ರಸ್ತೆಯಲ್ಲಿ ಕಾನೂನು ಬಾಹಿರವಾಗಿ ಮೈಸೂರು ಕೆಎಸ್‍ಆರ್‍ಪಿ ಮೌಂಟೆಡ್ ಕಂಪನಿಗೆ ಸೇರಿದ 62,218 ಚ.ಆಡಿ ವಿಸ್ತೀಣದ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಕ್ಷೆ ಅನುಮೋದನೆ, ಸಿಅರ್ ಉದ್ದಿಮೆ ಪರವಾನಿಗೆ ಮತ್ತು ಅಗ್ನಿ ಸಲಹಾಪತ್ರ ಪಡೆಯದೇ ಖಾಸಗಿ ಟ್ರಸ್ಟ್‍ವೊಂದು ಪೊಲೀಸ್ ಭವನ ಕಟ್ಟಡ ನಿರ್ಮಿಸಿ, ಸರ್ಕಾರಕ್ಕೆ ವಂಚಿಸಲಾ ಗುತ್ತಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಕುವೆಂಪು ನಗರದ ಎನ್.ಗಂಗರಾಜು ಮನವಿ ಸಲ್ಲಿಸಿದರು. ಈ ಕುರಿತಂತೆ ಪರಿಶೀಲಿಸಿ, ವರದಿ ನೀಡುವಂತೆ ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಹೋಟೆಲ್ ಮಾಲೀಕರ ಸಂಘದ ವತಿಯಿಂದ ಅಧ್ಯಕ್ಷ ಸಿ.ನಾರಾಯಣಗೌಡ ನೀಡಿದ ದೂರಿನಲ್ಲಿ, ಮೈಸೂರು ಮಹಾನಗರಪಾಲಿಕೆಯ ಕಂದಾಯ ಶುಲ್ಕವನ್ನು ದೊಡ್ಡ ವಾಣಿಜ್ಯ, ಚಿಕ್ಕ ವಾಣಿಜ್ಯ ಎಂಬ ಭೇದಭಾವ ರದ್ದುಪಡಿಸಲು ಕೋರಿದರು.

ಮಾನಸಿನಗರದಲ್ಲಿ 15 ದಿನಕ್ಕೊಮ್ಮೆ ಬೋರ್‍ವೆಲ್ ನೀರು: ಮೈಸೂರಿನ ಹೆಚ್.ಡಿ.ದೇವೇಗೌಡ ವೃತ್ತದ ಬಳಿಯ ಮಾನಸಿನಗರದಲ್ಲಿ 180 ಮನೆಗಳಿದ್ದು, ನೀರಿನ ಸೌಕರ್ಯ ಇಲ್ಲ. ಇರುವ ಒಂದೇ ಒಂದು ಕೊಳವೆಬಾವಿ ನೀರನ್ನು 15 ದಿನಗಳಿಗೊಮ್ಮೆ ನೀಡಲಾ ಗುತ್ತಿದೆ. ಕಾವೇರಿ, ಕಪಿಲಾ ನದಿ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ಮಾನಸಿನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ನಂಜಪ್ಪ, ಕೃಷ್ಣಪ್ಪ ಇನ್ನಿತರರು ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಸಚಿವರು ನೀರಿನ ಸೌಲಭ್ಯ ಕಲ್ಪಿಸಲು ನಗರಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

ಜೆಕೆ ಮೈದಾನದಲ್ಲಿ ಸಾರ್ವಜನಿಕರು ದೂರು ಅರ್ಜಿ ಸಲ್ಲಿಸಲು ಒಟ್ಟು 10 ಕೌಂಟರ್‍ಗಳನ್ನು ತೆರೆ ಯಲಾಗಿತ್ತು. ಮೈಸೂರು ಮಹಾನಗರಪಾಲಿಕೆಯ 3, ಮುಡಾ-2, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‍ರಾಜ್ ಇಲಾಖೆ, ಕಂದಾಯ ಇಲಾಖೆ, ಪ್ರಥಮ ಚಿಕಿತ್ಸೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ದೂರು ನಿರ್ವಹಣಾ ಕೇಂದ್ರದ ತಲಾ ಒಂದೊಂದು ಕೌಂಟರ್‍ಗಳಿದ್ದವು.

ಬೆಳಿಗ್ಗೆಯಿಂದಲೇ ದೂರು ಅರ್ಜಿ ಸಲ್ಲಿಸಲು ನಗರದ ದೂರ ದೂರದ ಬಡಾವಣೆಗಳಿಂದ ಜನ ಬಂದಿದ್ದರು. ಅಚ್ಚುಕಟ್ಟಾದ ಪಾರ್ಕಿಂಗ್ ವ್ಯವಸ್ಥೆ ಯನ್ನು ನಗರ ಪೊಲೀಸರು ಮಾಡಿದ್ದರು.

ಜೇಡಿ ಮಣ್ಣಿನ ಗಣೇಶ ವಿಗ್ರಹಕ್ಕೆ ಮಾತ್ರ ಅನುಮತಿ: ಈ ಬಾರಿಯ ಗಣೇಶ ಹಬ್ಬದ ಸಂದರ್ಭದಲ್ಲಿ ಜೇಡಿ ಮಣ್ಣಿನ ವಿಗ್ರಹಗಳನ್ನೇ ಮಾರಾಟ ಮಾಡಲು ಉಸ್ತುವಾರಿ ಸಚಿವರು ಸೂಚಿಸಿದರು. ಪ್ಲಾಸ್ಟರ್ ಆಫ್ ಪ್ಯಾರಿಸ್ ಅಥವಾ ಇನ್ನಾವುದೇ ರಾಸಾಯನಿಕ ವಸ್ತುಗಳನ್ನು ಬಳಸಿ ತಯಾರಿಸಿದ ವಿಗ್ರಹಗಳಿಗೆ ಅನುಮತಿ ನೀಡದಂತೆ ಪೊಲೀಸರಿಗೆ ಸೂಚನೆ ನೀಡಿದರು. ಜೇಡಿ ಮಣ್ಣಿನ ವಿಗ್ರಹಗಳಿಗೆ ಮಾತ್ರ ಅವಕಾಶ ನೀಡಿ, ಬೀದಿ ಬೀದಿಗಳಲ್ಲಿ ಗಣೇಶ ಮಾರುವ ಬದಲು ಎಲ್ಲಾದರೂ ಒಂದು ಅಥವಾ ಎರಡು ಕಡೆಗಳಲ್ಲಿ ಮಾತ್ರ ಗಣೇಶ ಮಾರಾಟಕ್ಕೆ ಅನುಮತಿಸಬೇಕು ಎಂದು ಸೂಚಿಸಿದರು.’

8 ದಿನದಲ್ಲಿ ಸಮಸ್ಯೆಗೆ ಪರಿಹಾರ ಕಲ್ಪಿಸಿ…
ಮೈಸೂರು, ಜು.4(ಎಂಕೆ, ವೈಡಿಎಸ್)- ಇಂದು ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಎಂಟು ದಿನದಲ್ಲಿ ಸಂಪೂರ್ಣ ಪರಿಹಾರ ನೀಡಬೇಕು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಮೈಸೂರಿನ ಜೆಕೆ ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ `ಜನಸ್ಪಂದನಾ’ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಸ್ಥಳದಲ್ಲಿಯೇ ಸಾಕಷ್ಟು ಮನವಿಗಳಿಗೆ ಪರಿಹಾರ ನೀಡಲಾಗಿದೆ. ಆದರೆ, ಇನ್ನುಳಿದ ಅರ್ಜಿಗಳಿಗೆ ಎಂಟು ದಿನದಲ್ಲಿ ಪರಿಹಾರ ನೀಡಬೇಕು. ಅಲ್ಲದೆ ಪ್ರತಿಯೊಂದು ಅರ್ಜಿಯನ್ನು ಪ್ರತ್ಯೇಕವಾಗಿ ದಾಖಲಿಸಬೇಕು. ಜನಸ್ಪಂದನಾ ಕಾರ್ಯಕ್ರಮಕ್ಕೆ ಆಗಮಿಸಿದವರ ನಂಬಿಕೆಯನ್ನು ಹುಸಿ ಮಾಡದೆ ಪರಿಹಾರ ವನ್ನು ತ್ವರಿತವಾಗಿ ಒದಗಿಸಬೇಕು. ಜನರಿಗೆ ಸರ್ಕಾರದ ಎಲ್ಲಾ ಸವಲತ್ತುಗಳು ತಲುಪು ವಂತಾಗಬೇಕು ಎಂದರು.

ಅಧಿಕಾರಿಗಳಲ್ಲಿ ಹೊಸ ಹುಮ್ಮಸ್ಸು: ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷದ ನಂತರ ಮೊದಲ ಬಾರಿ ಜಿಲ್ಲೆಯಲ್ಲಿ ಜನಸ್ಪಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಲ್ಲದೆ ಸತತವಾಗಿ ಮೂರು ದಿನಗಳಿಂದ ಮೈಸೂರು ನಗರದ ಸ್ವಚ್ಛತೆ ಹಾಗೂ ಕುಂದು ಕೊರತೆ ಯನ್ನು ನನ್ನೊಂದಿಗೆ ಅಧಿಕಾರಿಗಳು ಕಂಡಿದ್ದಾರೆ. ಜನಸ್ಪಂದನಾ ಕಾರ್ಯಕ್ರಮದಿಂದ ಅಧಿಕಾರಿಗಳಲ್ಲಿ ಹೊಸ ಹುಮ್ಮಸ್ಸು ಬಂದಿದೆ.

ಒಂದೇ ದಿನದಲ್ಲಿ ಸಾಕಷ್ಟು ಸಮಸ್ಯೆ ಗಳಿಗೆ ಪರಿಹಾರ ಒದಗಿಸಿದ್ದಾರೆ. ಇದೇ ರೀತಿ ಸರ್ಕಾರಿ ಕೆಲಸವನ್ನು ದೇವರ ವೆಂದು ಹಾಗೂ ಬಡವರ ಕೆಲಸವನ್ನು ಪ್ರೀತಿಯ ಕೆಲಸ ವೆಂದು ಭಾವಿಸಿ, ಜನರಿಗೆ ಸ್ಪಂದಿಸಿ ಎಂದು ಹೇಳಿದರು.

ಪೂರ್ವ ಯೋಜನೆ ತಯಾರಿಸಿ: ನಗರದ ಅಭಿವೃದ್ದಿ ಗಾಗಿ ಆಗಬೇಕಾಗಿರುವ ರಸ್ತೆಗಳ ಅಭಿವೃದ್ಧಿ, ಪಾರ್ಕ್ ಗಳ ಅಭಿವೃದ್ಧಿ, ಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇನ್ನಿತರೆ ಸಮಸ್ಯೆ ಸೇರಿದಂತೆ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ತಗಲುವ ಖರ್ಚು-ವೆಚ್ಚಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸ್ವಇಚ್ಛೆ ಯಿಂದ ಪೂರ್ವ ಯೋಜನಾ ವರದಿಯನ್ನು ತಯಾರಿ ಸಬೇಕು. ನಂತರ ಯಾವುದಾದರೂ ಒಂದು ಮೂಲ ದಿಂದ ಬಗೆಹರಿಸುವ ಮಾರ್ಗವನ್ನು ಕಂಡುಕೊಳ್ಳ ಬಹುದಾಗಿದೆ. ಅಲ್ಲದೆ ಮುಖ್ಯಮಂತ್ರಿ ಕುಮಾರಸ್ವಾಮಿ ಯವರು ಮೈಸೂರಿನ ಅಭಿವೃದ್ಧಿಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದು ತಿಳಿಸಿದರು.

ನೀರಿನ ಸಮಸ್ಯೆಯೇ ಹೆಚ್ಚು: ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಈಗಿರುವ ನೀರನ್ನು ಸರಿಯಾದ ಪ್ರಮಾಣದಲ್ಲಿ ಹಂಚಿಕೆ ಮಾಡಿದರೆ ಶೇ.90 ರಷ್ಟು ನೀರಿನ ಸಮಸ್ಯೆ ಕಡಿಮೆಯಾಗುತ್ತದೆ. ಆದರೆ, ಹಂಚಿಕೆ ಮಾಡುವುದರಲ್ಲಿ ಅಧಿಕಾರಿಗಳು ಹಿಂದೆ ಬಿದ್ದಿದ್ದಾರೆ. ನೀರಿನ ಪೂರೈಕೆಯಲ್ಲಿ ಎಚ್ಚರ ವಹಿಸಬೇಕಾಗಿದೆ. ಇಲ್ಲದಿದ್ದರೆ ಜನರ ಕಚೇರಿಗಳಿಗೆ ಹಾಗೂ ನಮ್ಮ ಮನೆಗಳಿಗೂ ಮುತ್ತಿಗೆ ಹಾಕುತ್ತಾರೆ. ಇದಕ್ಕೆ ಅವಕಾಶ ಕೊಡದೆ ಮುಂಜಾಗ್ರತೆ ವಹಿಸಿ ಎಂದು ಎಚ್ಚರಿಸಿದರು.

ಭಕ್ತರನ್ನು ತಳ್ಳಬೇಡಿ: ಮೊದಲ ಆಷಾಢ ಶುಕ್ರವಾರ ದಂದು ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಈ ಸಂದರ್ಭ ದಲ್ಲಿ ಪೊಲೀಸರು ಭಕ್ತರನ್ನು ತಳ್ಳದೆ ಸೌಜನ್ಯತೆಯಿಂದ ವರ್ತಿಸಿ. ಭಕ್ತರಿಗೆ ಯಾವುದೆ ತೊಂದರೆಯಾಗದಂತೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿ ಎಂದರು.

ಮನೆ ಕೆಲಸ ಮಾಡಿದ್ದೇವೆ: ಮೈಸೂರು ನಗರ ನಮ್ಮೆಲ್ಲರ ಮನೆಯಂತೆ. ಆದ್ದರಿಂದ ಕಳೆದ 3 ದಿನದಿಂದ ನಾನು ಮತ್ತು ಅಧಿಕಾರಿಗಳು ಮನೆಯ ಕೆಲಸ ಮಾಡಿದ್ದೇವೆ. ಮನೆ ಕೆಲಸ ಮಾಡುವಾಗ ಯಾವುದೇ ರಾಜಿ ಇಲ್ಲ ಎಂದು ಸಚಿವ ಜಿ.ಟಿ. ದೇವೇಗೌಡ ಹೇಳಿದರು.

ಹಕ್ಕು ಪತ್ರ ಕೊಡಿ, ಇಲ್ಲ ವಿಷ ನೀಡಿ…
ಮನೆ ಹಕ್ಕು ಪತ್ರ ವಿತರಿಸಿ, ಇಲ್ಲದಿದ್ದರೆ ನೀವೇ ಒಂದು ಬಾಟಲ್ ವಿಷ ಕೊಡಿ ಎಂದು ಸಂತ್ರಸ್ತ ರೊಬ್ಬರು ಕೇಳಿದ ಘಟನೆ ಜನಸ್ಪಂದನಾ ಕಾರ್ಯ ಕ್ರಮದಲ್ಲಿ ನಡೆಯಿತು. ಮೈಸೂರಿನ ರಾಮಕೃಷ್ಣ ನಗರದ ಇಡಬ್ಲೂಎಸ್ ಮನೆಗಳ ನಿವಾಸಿಗಳು, ಕಳೆದ 20 ವರ್ಷದಿಂದ ಈ ಮನೆಗಳಲ್ಲೇ ವಾಸ ವಾಗಿದ್ದು, ಪಡಿತರ ಕಾರ್ಡ್, ಆಧಾರ ಕಾರ್ಡ್ ಎಲ್ಲವನ್ನು ಇದೇ ವಿಳಾಸಕ್ಕೆ ಪಡೆದುಕೊಂಡಿ ದ್ದೇವೆ. ಆದರೆ, ಮನೆಗಳ ಹಕ್ಕು ಪತ್ರಗಳನ್ನು ನೀಡಿಲ್ಲ. ಆದ್ದರಿಂದ ಕೂಡಲೇ ನಮಗೆ ಮನೆಗಳ ಹಕ್ಕು ಪತ್ರಗಳನ್ನು ನೀಡಬೇಕು. ಇಲ್ಲವಾದರೆ ನೀವೇ ವಿಷ ಕೊಟ್ಟುಬಿಡಿ ಎಂದರು. ಇದಕ್ಕೆ ಸ್ಪಂದಿಸಿದ ಸಚಿವರು, ಮುಡಾ ಅಧಿಕಾರಿಗಳನ್ನು ಕರೆದು ಕೂಡಲೇ ಖಾತೆ, ಹಕ್ಕು ಪತ್ರಗಳನ್ನು ಮಾಡಿಕೊಡುವಂತೆ ಸೂಚಿಸಿದರು.

ಒಂದೇ ಗಂಟೆಯಲ್ಲಿ ಖಾತೆ…
2016ರಿಂದ ಹಕ್ಕು ಪತ್ರಕ್ಕಾಗಿ ಒಡಾಡುತ್ತಿದ್ದ ಮೈಸೂರಿನ ಕುವೆಂಪುನಗರದ ನಿವಾಸಿ ಆರ್. ಆನಂದಮೂರ್ತಿ ಅವರು ಮಧ್ಯಾಹ್ನ ಮೂರು ಗಂಟೆಗೆ ಜನಸ್ಪಂದನಾ ಕಾರ್ಯಕ್ರಮಕ್ಕೆ ಆಗಮಿಸಿ ಮನವಿ ಸಲ್ಲಿಸಿದ ಒಂದೇ ಗಂಟೆಯಲ್ಲಿ ಹಕ್ಕು ಪತ್ರವನ್ನು ವಿತರಿಸಲಾಯಿತು. ಬಳಿಕ ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಅವರು, ನಮ್ಮ ತಂದೆ ನನಗೆ ಖಾಲಿ ನಿವೇಶನವನ್ನು ನೀಡಿದ್ದರು. ಇದನ್ನು ನನ್ನ ಹೆಸರಿಗೆ ಮಾಡಿಸಿಕೊಳ್ಳಲು ಕಳೆದ ಎರಡು ವರ್ಷಗಳಿಂದ ತಿರುಗಾಡಿದರೂ ಹಕ್ಕು ಪತ್ರ ಸಿಕ್ಕಿರಲಿಲ್ಲ. ಆದರೆ, ಇಂದು ಮನವಿ ಸಲ್ಲಿಸಿದ ತಕ್ಷಣ ಅಧಿಕಾರಿಗಳು ಈ ಹಿಂದೆ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲನೆ ಮಾಡಿ ಹಕ್ಕು ಪತ್ರ ನೀಡಿದ್ದಾರೆ ಎಂದರು.

ಬುದ್ದಿಮಾಂಧ್ಯರಿಗೂ ಶೇ.4ರಷ್ಟು ಮೀಸಲಾತಿ ನೀಡುವಂತೆ ಮನವಿ
ಜನಸ್ಪಂದನಾ ಕಾರ್ಯಕ್ರಮಕ್ಕೆ ಆಗಮಿಸಿದ ಗುಲ್ಬರ್ಗಾ ಮೂಲದ ಐದಾರು ಮಂದಿ ಮಹಿಳೆಯರು, ನಮ್ಮ ಬುದ್ದಿಮಾಂಧ್ಯ ಮಕ್ಕಳಿಗೆ ತರಬೇತಿ ಕೊಡಿಸುವ ಉದ್ದೇಶದಿಂದ ದೂರದ ಗುಲ್ಬರ್ಗಾದಿಂದ ಬಂದು ಮೈಸೂರಿನಲ್ಲಿ ನೆಲೆಸಿದ್ದು, ವಾಕ್ ಶ್ರವಣ ಸಂಸ್ಥೆ ಯಲ್ಲಿ ತರಬೇತಿ ಕೊಡಿಸುತ್ತಿದ್ದೇವೆ. ಸರ್ಕಾರಿ ಕೆಲಸ ದಲ್ಲಿ ವಿಕಲಚೇತನರಿಗೆ ಮೀಸಲಾತಿ ನೀಡುವಂತೆ ಬುದ್ದಿಮಾಂಧ್ಯರಿಗೂ ಶೇ.4ರಷ್ಟು ಮೀಸಲಾತಿ ನೀಡ ಬೇಕು. ಉತ್ತರ ಕರ್ನಾಟಕದಲ್ಲೂ ವಾಕ್ ಶ್ರವಣ ಸಂಸ್ಥೆಯನ್ನು ತೆರೆದರೆ ಉಪಯೋಗವಾಗಲಿದೆ ಎಂದು ಸಚಿವರಲ್ಲಿ ಮನವಿ ಮಾಡಿದರು.

Translate »