ಬಸವೇಶ್ವರ ರಸ್ತೆ ನಿವಾಸಿಗಳ ನೀರಿನ ಸಮಸ್ಯೆ ನೀಗಿಸಿದ ಮಾಜಿ ಶಾಸಕ  ಎಂ.ಕೆ.ಸೋಮಶೇಖರ್
ಮೈಸೂರು

ಬಸವೇಶ್ವರ ರಸ್ತೆ ನಿವಾಸಿಗಳ ನೀರಿನ ಸಮಸ್ಯೆ ನೀಗಿಸಿದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್

January 7, 2019

ಮೈಸೂರು: ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಸವೇಶ್ವರ ರಸ್ತೆಯ 5, 6 ಮತ್ತು 7ನೇ ಕ್ರಾಸ್‍ನಲ್ಲಿ ನೀರಿನ ಸಮಸ್ಯೆ ಇರುವ ಬಗ್ಗೆ ಸ್ಥಳೀಯರ ಒತ್ತಾಯದ ಮೇರೆಗೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸಮಸ್ಯೆ ಬಗೆಹರಿಸಿದರು.

ಈ ಸಂದರ್ಭದಲ್ಲಿ ದೂರಿದ ಅಲ್ಲಿನ ನಿವಾಸಿಗಳು, ನಗರಪಾಲಿಕೆ ಸದಸ್ಯರಿಗೆ ದೂರವಾಣಿಯಲ್ಲಿ ಸಮಸ್ಯೆಗಳ ಬಗ್ಗೆ ತಿಳಿಸಿದರೆ, ಉಡಾಫೆಯ ಉತ್ತರ ನೀಡುತ್ತಿದ್ದಾರೆ. ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸದೆ ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕರ ಮುಂದೆ ತಮ್ಮ ಅಳಲು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ರಾಜಕೀಯ ದ್ವೇಷ, ಸೋಲು ಗೆಲುವು ಫಲಿತಾಂಶ ಹೊರ ಬರುವ ತನಕ ಮಾತ್ರ ಸೀಮಿತವಾಗಬೇಕು. ತದನಂತರ ಎಲ್ಲಾ ಮತದಾರರನ್ನೂ ಸಮ ದೃಷ್ಟಿಯಲ್ಲಿ ನೋಡಿ ಸೇವೆ ಸಲ್ಲಿಸಬೇಕಾದದ್ದು ಜನಪ್ರತಿನಿಧಿಗಳ ಜವಾಬ್ದಾರಿ. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಸೋಲು, ಗೆಲುವು ಸಹಜ. ಆದರೆ ನನಗೆ ಅಧಿಕಾರ ಇಲ್ಲದಿದ್ದರೂ, ನಿಮ್ಮ ಸೇವೆ ಮಾಡುವ ಶಕ್ತಿ ಇದೆ ಎಂದು ಹೇಳಿದರು.

ವಾಣಿ ವಿಲಾಸ ನೀರು ಸರಬರಾಜು ಮಂಡಳಿ ಅಧಿಕಾರಿಗಳನ್ನು ಕರೆಸಿ, ತಕ್ಷಣವೇ ನೀರು ಸರಬರಾಜು ಮಾಡಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಹರೀಶ್, ವಿಜಯಕುಮಾರ್, ಸಾದಿಕ್ ಉಲ್ಲಾ ರೆಹಮಾನ್ ಇನ್ನಿತರರು ಉಪಸ್ಥಿತರಿದ್ದರು.

Translate »