ಇಲಾಖೆಗಳಲ್ಲಿ ಖಾಲಿ ಇರುವ ಶೇ.40ರಷ್ಟು ಹುದ್ದೆ ಭರ್ತಿಗೆ ಸರ್ಕಾರ ನಿರ್ಲಕ್ಷ್ಯ
ಮೈಸೂರು

ಇಲಾಖೆಗಳಲ್ಲಿ ಖಾಲಿ ಇರುವ ಶೇ.40ರಷ್ಟು ಹುದ್ದೆ ಭರ್ತಿಗೆ ಸರ್ಕಾರ ನಿರ್ಲಕ್ಷ್ಯ

January 7, 2019

ಮೈಸೂರು: ರಾಜ್ಯ ಸರ್ಕಾರದ ಅನೇಕ ಇಲಾಖೆಗಳಲ್ಲಿ ಶೇ.40 ರಷ್ಟು ಹುದ್ದೆಗಳು ಖಾಲಿ ಉಳಿದಿದ್ದು, ಹುದ್ದೆಗಳ ಭರ್ತಿ ವಿಚಾರದಲ್ಲಿ ಸರ್ಕಾರ ಆಮೆಗತಿಯಲ್ಲಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹೆಚ್.ಕೆ.ರಾಮು ಬೇಸರ ವ್ಯಕ್ತಪಡಿಸಿದರು.

ಮೈಸೂರಿನ ನಜರ್‍ಬಾದಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಾಸಿಸ್ಟ್‍ಗಳ ಸಂಘದ ಮೈಸೂರು ಮತ್ತು ಚಾಮರಾಜ ನಗರ ಜಿಲ್ಲಾ ಶಾಖೆ ವತಿಯಿಂದ ಭಾನು ವಾರ ಹಮ್ಮಿಕೊಂಡಿದ್ದ 57ನೇ ರಾಷ್ಟ್ರೀಯ ಫಾರ್ಮಸಿ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಿಂದ 7 ಲಕ್ಷದ 50 ಸಾವಿರ ದಷ್ಟು ಹುದ್ದೆಗಳಲ್ಲಿ ಸೇವೆ ಸಲ್ಲಿಸಬೇಕಿರುವ ಅಗತ್ಯತೆ ಇದೆ. ಆದರೆ ಸದ್ಯ 5 ಲಕ್ಷದ 20 ಸಾವಿರದಷ್ಟು ನೌಕರರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾದರೆ ರಾಜ್ಯದ 7 ಕೋಟಿ ಜನಸಂಖ್ಯೆಗೆ ಸಮರ್ಪಕ ಸೇವೆ ನೀಡಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.
ಖಾಲಿ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡುತ್ತಿಲ್ಲ. ಪರಿಣಾಮ ಸಾರ್ವಜನಿಕರ ಕೆಲಸ ಕಾರ್ಯಗಳು ನಿಗದಿತ ಸಮಯಕ್ಕೆ ಆಗುತ್ತಿಲ್ಲ. ಇಂತಹ ಪರಿಸ್ಥಿತಿ ನಡುವೆ ಜನಪ್ರತಿನಿಧಿಗಳ ಪೈಕಿ ಬಹುತೇಕರು ಅಧಿಕಾರಿಗಳು ಕೆಲಸ ಮಾಡುತ್ತಿಲ್ಲವೆಂದು ದೂರು ತ್ತಾರೆ. ಆದರೆ ಸರಿಯಾದ ಸಂಪನ್ಮೂಲದ ಬಗ್ಗೆ ಆಲೋಚಿಸುವವರು ತೀರಾ ವಿರಳ ಎಂದು ಬೇಸರ ವ್ಯಕ್ತಪಡಿಸಿದರು.

ಅನೇಕ ಇಲಾಖೆಗಳಲ್ಲಿ 30 ವರ್ಷ ಸೇವೆ ಸಲ್ಲಿಸಿ ಬಡ್ತಿ ಇಲ್ಲದೇ ನಿವೃತ್ತಿ ಹೊಂದು ವಂತಾಗಿದೆ. 30 ವರ್ಷದ ಸೇವಾವಧಿ ಯಲ್ಲಿ ಒಬ್ಬ ನೌಕರನಿಗೆ 3 ಬಾರಿ ಬಡ್ತಿ ದೊರೆ ಯಬೇಕು. ನೆರೆ ರಾಜ್ಯಗಳಲ್ಲಿ ಇದನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಮತ್ತೊಂ ದೆಡೆ ನಿವೃತ್ತಿಯಿಂದ ಖಾಲಿಯಾಗುವ ಹುದ್ದೆಗಳ ಭರ್ತಿಗೂ ಸರ್ಕಾರ ಆಸಕ್ತಿ ತೋರುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು. ರಾಜ್ಯ ಸರ್ಕಾರಿ ನೌಕರರ ಬೇಡಿಕೆ ಗಳ ಪೈಕಿ ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು 6ನೇ ವೇತನ ಆಯೋಗ ಪರಿಗಣಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಇದರಲ್ಲಿ ವಾರದ 4ನೇ ಶನಿವಾರ ರಜೆ ನೀಡಬೇಕು ಎಂಬುದೂ ಸೇರಿದೆ ಎಂದು ತಿಳಿಸಿದರು.

ಸಂಘದ ಜಿಲ್ಲಾ ಶಾಖೆ ಗೌರವಾಧ್ಯಕ್ಷ ವಿ.ಮಂಜುನಾಥ್, ಸರ್ಕಾರಿ ವಲಯದ ಫಾರ್ಮಾಸಿಸ್ಟ್ ವೃಂದದಲ್ಲಿ ವಯೋ ನಿವೃತ್ತಿ ಹೊಂದುತ್ತಿರುವ ಹಿನ್ನೆಲೆಯಲ್ಲಿ ವಾರ್ಷಿಕ ಶೇ.50ರಷ್ಟು ಫಾರ್ಮಾಸಿಸ್ಟ್ ಹುದ್ದೆಗಳು ಖಾಲಿಯಾಗುತ್ತಿವೆ. ಹೀಗಾಗಿ ಸಿಬ್ಬಂದಿ ಕೊರತೆಯಿಂದ ಹಾಲಿ ಇರುವ ಫಾರ್ಮಾಸಿಸ್ಟ್‍ಗಳಿಗೆ ಕಾರ್ಯದೊತ್ತಡ ಅಧಿಕವಾಗುತ್ತಿದೆ. ಫಾರ್ಮಾಸಿಸ್ಟ್ ಹುದ್ದೆ ಗಳ ನೇಮಕಾತಿ ಸಂಬಂಧ ನಮ್ಮ ಇಲಾಖೆಯಿಂದ ಸರ್ಕಾರಕ್ಕೆ ಶಿಫಾರಸು ಸಲ್ಲಿಕೆಯಾಗಿದ್ದು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹೆಚ್.ಕೆ.ರಾಮು ಅವರು ಹುದ್ದೆಗಳ ಶೀಘ್ರ ಭರ್ತಿಗೆ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಕೋರಿದರು.

ಇದೇ ವೇಳೆ 2017-18ನೇ ಸಾಲಿನ 7ನೇ ತರಗತಿ, ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕಳೆದ ವರ್ಷ ನಿವೃತ್ತರಾದ ಫಾರ್ಮಾಸಿಸ್ಟ್‍ಗಳನ್ನು ಸನ್ಮಾನಿಸಲಾಯಿತು.

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಡೀನ್ ಮತ್ತು ನಿರ್ದೇಶಕ ಡಾ.ಸಿ.ಪಿ.ನಂಜರಾಜ್, ಸಂಘದ ಅಧ್ಯಕ್ಷ ಸಿ.ಎಲ್.ಸೋಮ ಶೇಖರ್, ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷ ಎ.ಪುಟ್ಟಸ್ವಾಮಿ, ಹೆಚ್‍ಡಿ ಕೋಟೆ ತಾಲೂಕು ಅಧ್ಯಕ್ಷ ಶ್ರೀಕಂಠಯ್ಯ, ಹಿರಿಯ ಫಾರ್ಮಾಸಿಸ್ಟ್‍ಗಳಾದ ಚಾಮ ರಾಜನಗರದ ಗಣೇಶ್‍ರಾವ್, ಹಾಸನದ ಜವರೇಗೌಡ, ಮಡಿಕೇರಿಯ ಬಿ.ಅಮೀನಾ ಮತ್ತಿತರರು ಹಾಜರಿದ್ದರು.

Translate »