ರಫೇಲ್ ಪ್ರಕರಣ: ರಾಹುಲ್ ಗಾಂಧಿಗೆ ‘ಸುಪ್ರೀಂ’ ತರಾಟೆ!
ಮೈಸೂರು

ರಫೇಲ್ ಪ್ರಕರಣ: ರಾಹುಲ್ ಗಾಂಧಿಗೆ ‘ಸುಪ್ರೀಂ’ ತರಾಟೆ!

November 15, 2019

`ಮತ್ತೆ ತಪ್ಪು ಮರುಕಳಿಸದಂತೆ ಜಾಗ್ರತೆ ವಹಿಸಿ’ ಎಂದು ಎಚ್ಚರಿಕೆ ನೀಡಿದ ನ್ಯಾಯಪೀಠ
ನವದೆಹಲಿ, ನ.14- ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣ ಉಲ್ಲೇಖಿಸುತ್ತಾ, ಪ್ರಧಾನಿ ನರೇಂದ್ರ ಮೋದಿ ಅವರನ್ನು `ಚೌಕಿದಾರ್ ಚೋರ್ ಹೈ’ ಎಂದು ಲೇವಡಿ ಮಾಡುತ್ತಿದ್ದ, ಅದಕ್ಕೆ ಸುಪ್ರೀಂ ಕೋರ್ಟ್ ಹೆಸರನ್ನೂ ಬಳಸಿಕೊಳ್ಳುತ್ತಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯನ್ನು ಮುಖ್ಯ ನ್ಯಾಯಮೂರ್ತಿಗಳನ್ನೊಳಗೊಂಡ ನ್ಯಾಯಪೀಠ ಗುರುವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ರಫೇಲ್ ಯುದ್ಧ ವಿಮಾನ ಖರೀದಿ ವಿಚಾರ ಕಾಂಗ್ರೆಸ್ ಮತ್ತು ಕೇಂದ್ರ ಸರ್ಕಾರದ ನಡುವೆ ವಾಕ್ಸಮರ, ಟೀಕಾ ಪ್ರಹಾರಕ್ಕೆ ಕಾರಣ ವಾಗಿತ್ತು. ರಫೇಲ್ ಡೀಲ್‍ನಲ್ಲಿ ಸಾವಿರಾರು ಕೋಟಿ ರೂ.ಗಳಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸುತ್ತಾ ಬಂದಿದ್ದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಚೌಕಿದಾರ್ ಚೋರ್ ಹೈ ಎಂದು ರ್ಯಾಲಿಗಳಲ್ಲಿ ಘೋಷಣೆ ಕೂಗುತ್ತಾ ಬಂದಿದ್ದರು.

ಏ.30ರಂದು ನಡೆದ ವಿಚಾರಣೆಯಲ್ಲಿ ‘ಚೌಕಿದಾರ್ ಚೋರ್’ ಹೇಳಿಕೆಗೆ ನ್ಯಾಯಪೀಠ ವನ್ನು ಉಲ್ಲೇಖಿಸಿದ್ದಕ್ಕೆ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ ನ್ಯಾಯಪೀಠಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ`ವಿಷಾದ’ ವ್ಯಕ್ತಪಡಿಸಿದ್ದರು. ತಮ್ಮ ಹೇಳಿಕೆ ಕುರಿತು ನೇರವಾಗಿ ತಪೆÇ್ಪಪ್ಪಿಕೊಳ್ಳದ ರಾಹುಲ್ ಗಾಂಧಿ ನಡೆ ಬಗ್ಗೆ ಆಗ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಈ ವೇಳೆ, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ, ‘ನೀವು ತಪ್ಪು ಮಾಡಿದ್ದರೆ, ಒಪ್ಪಿಕೊಳ್ಳಬೇಕು.. ಪ್ರಮಾಣಪತ್ರದಲ್ಲಿನ ನಿಮ್ಮ ಸಮರ್ಥನೆಗಳನ್ನು ಅರ್ಥ ಮಾಡಿಕೊಳ್ಳುವುದು ನಮಗೆ ಕಷ್ಟವಾಗುತ್ತಿದೆ. ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿರುವ ರಾಜಕೀಯ ನಿಲುವುಗಳು ನಮಗೆ ಸಂಬಂಧವಿಲ್ಲದ್ದು.. ನಮ್ಮ ತೀರ್ಪಿನಲ್ಲಿ ಚೌಕಿದಾರ್ ಚೋರ್ ಎಂದು ಎಲ್ಲಿ ಹೇಳಿದ್ದೇವೆ? ಎಲ್ಲ ಹೇಳಿಕೆ ಗಳನ್ನು ಪೀಠವೇ ಹೇಳಿದೆ ಎಂದು ನೀವು ಹೇಗೆ ಹೇಳುತ್ತೀರಿ?.. ಎಂದು ಪ್ರಶ್ನಿಸಿದ್ದರು.

ಅಲ್ಲದೆ ರಾಹುಲ್ ಗಾಂಧಿ ಅವರು ಸಲ್ಲಿಕೆ ಮಾಡಿರುವ ಪ್ರಮಾಣ ಪತ್ರ ಕುರಿತೂ ಅಸಮಾಧಾನ ವ್ಯಕ್ತಪಡಿಸಿದ್ದ ಕೋರ್ಟ್, ‘ಪ್ರಮಾಣಪತ್ರದಲ್ಲಿ ಬಳಸಿರುವ ‘ವಿಷಾದ’ ಪದದ ಅರ್ಥವೇನು? ಕಾಂಗ್ರೆಸ್ ಅಧ್ಯಕ್ಷರು ಒಂದು ಹಂತದಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತಿದ್ದಾರೆ. ಆದರೆ, ಇನ್ನೊಂದೆಡೆ ನಿಂದನೆಯ ಹೇಳಿಕೆ ನೀಡಿಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು.

ನ್ಯಾಯಾಂಗ ನಿಂಧನೆ ದಾವೆ: ಈ ಸಂಬಂಧ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದರು. ಇಂದು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡಿದೆ. ರಾಹುಲ್ ಗಾಂಧಿ ಹೇಳಿಕೆ ದುರಾದೃಷ್ಟಕರ. ಇನ್ನು ಮುಂದಾದರೂ ರಾಹುಲ್ ಗಾಂಧಿ ಜವಾಬ್ದಾರಿಯುತ ಹೇಳಿಕೆಗಳನ್ನು ನೀಡಬೇಕು ಎಂದು ಹೇಳಿದ ನ್ಯಾಯಪೀಠ, ಕೊನೆಗೆ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೈಬಿಟ್ಟಿತು.

Translate »