ಬಿಜೆಪಿ ಆಲಿಬಾಬಾ 40 ಮಂದಿ ಕಳ್ಳರ ಗುಂಪು
ಚಾಮರಾಜನಗರ

ಬಿಜೆಪಿ ಆಲಿಬಾಬಾ 40 ಮಂದಿ ಕಳ್ಳರ ಗುಂಪು

May 8, 2018

ಗುಂಡ್ಲುಪೇಟೆ:  ನಾವು ಆಡಿಕೊಳ್ಳುತ್ತಿರುವುದನ್ನು ಅರಿತ ಪ್ರಧಾನಿ ನರೇಂದ್ರಮೋದಿ ಮಾಜಿ ಸಿಎಂ ಯಡಿಯೂರಪ್ಪ ಉರುಫ್ ಜೈಲೂರಪ್ಪ ಅವರನ್ನು ಪ್ರಚಾರಕ್ಕೆ ಕರೆದುಕೊಂಡು ಹೋಗುವುದನ್ನೇ ಬಿಟ್ಟಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಪಟ್ಟಣದ ನೆಹರು ಪಾರ್ಕ್‍ನಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ಅಲಿಬಾಬಾ ಮತ್ತು ನಲವತ್ತು ಮಂದಿ ಕಳ್ಳರ ಗುಂಪು ಚುನಾವಣೆಯಲ್ಲಿ ಬಿರುಸಿನ ಪ್ರಚಾರ ಮಾಡುತ್ತಿದೆ. ಇಂತಹ ಕಳ್ಳರ ಕೈಗೆ ರಾಜ್ಯವನ್ನು ಕೊಡಬೇಡಿ. ಉತ್ತಮವಾದ ಆಡಳಿತವನ್ನು ನೀಡಿರುವ ಕಾಂಗ್ರೆಸ್ ಪಕ್ಷಕ್ಕೆ ನಿಮ್ಮ ಮತವನ್ನು ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ಕೇವಲ ಬೂಟಾಟಿಕೆ ಮಾತಿನ ಯಡಿಯೂರಪ್ಪನನ್ನು ನಂಬಿ ಬಿ.ಜೆ.ಪಿ.ಗೆ ಮತ ನೀಡಬೇಡಿ. ಇದೊಂದು ಕಳ್ಳರ ಗುಂಪು. ಐದು ವರ್ಷದಲ್ಲಿ ಮೂರು ಮುಖ್ಯಮಂತ್ರಿಗಳನ್ನು ಹಾಗೂ ಅಧಿಕಾರ ಮುಗಿದ ಮೇಲೆ ಮೂರು ಪಕ್ಷಗಳಾಗಿ ಮಾಡಿಕೊಂಡ ಇವರನ್ನು ನಂಬಬೇಡಿ. ಶಿಕಾರಿಪುರದಲ್ಲೇ ಯಡಿಯೂರಪ್ಪನ ಮೇಲೆ ವಿಶ್ವಾಸವನ್ನು ಜನತೆ ಕಳೆದುಕೊಂಡಿದ್ದಾರೆ. ಶಿಕಾರಿಪುರದಲ್ಲಿ ಅವರ ಸೋಲು ಗ್ಯಾರಂಟಿ ಎಂದರು.

ನಾನೇ ಗೆಲ್ಲೋದು. ಮುಂದಿನ ಮುಖ್ಯಮಂತ್ರಿ ನಾನೇ..: ವರುಣಾದಲ್ಲಿ ನನ್ನ ಮಗ ಯತೀಂದ್ರ, ಚಾಮುಂಡೇಶ್ವರಿ ಮತ್ತು ಬಾದಾಮಿ ಕ್ಷೇತ್ರದಲ್ಲಿ ನಾನು ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಡಾ.ಎಂ.ಸಿ.ಮೋಹನಕುಮಾರಿ ಗೆಲ್ಲುವುದು ನೂರಕ್ಕೆ ನೂರರಷ್ಟು ಸತ್ಯ. ಮುಂದಿನ ಮುಖ್ಯಮಂತ್ರಿಯೂ ನಾನೇ ಆಗೋದು ಎಂದು ಹೇಳಿ ಚಪ್ಪಾಳೆ ಗಿಟ್ಟಿಸಿದರು.

ಪ್ರಧಾನಿ ನರೇಂದ್ರಮೋದಿ ಮತ್ತು ಬಿ.ಜೆ.ಪಿ.ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾತು ಸುಳ್ಳಿನ ಸರಮಾಲೆ. ಇದನ್ನು ನಂಬಿ ಬಿ.ಜೆ.ಪಿ.ಗೆ ಮತ ನೀಡಬೇಡಿ. ರಾಜ್ಯದಲ್ಲಿ ಬಿ.ಜೆ.ಪಿ. 50 ಮತ್ತು ಜೆ.ಡಿ.ಎಸ್.ಕೇವಲ 25 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಲಿದೆ. ಪೂರ್ಣವಾದ ಬಹುಮತ ಕಾಂಗ್ರೆಸ್‍ಗೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಕಾಂಗ್ರೆಸ್ ಅಭ್ಯರ್ಥಿ ಸಚಿವೆ ಗೀತಾಮಹದೇವಪ್ರಸಾದ್ ಮಾತನಾಡಿದರು. ಸಭೆಯಲ್ಲಿ ಸಂಸದ ಆರ್.ಧ್ರುವನಾರಾಯಣ್, ಮಾಜಿ ಸಂಸದ ಎ.ಸಿದ್ದರಾಜು, ಮುಖಂಡರಾದ ಎಚ್.ಎಸ್.ನಂಜುಂಡಪ್ರಸಾದ್, ನಾಜಿಮುದ್ದೀನ್, ಎಚ್.ಎಂ.ಗಣೇಶಪ್ರಸಾದ್, ರಾಜಶೇಖರ್, ಕುಮಾರಸ್ವಾಮಿ, ಚಂದ್ರಪ್ಪ, ಅಪ್ಸರಪಾಷ, ಪುರಸಭೆ ಸದಸ್ಯರಾದ ಸುರೇಶ್, ಬಿ.ವೆಂಕಟಾಚಲ ಸೇರಿದಂತೆ ವಿವಿಧ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.

Translate »