ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಸಿಎಂ ಸಿದ್ದರಾಮಯ್ಯ ಮಿಂಚಿನ ಸಂಚಾರ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ, ಬಿಎಸ್‍ವೈ ವಿರುದ್ಧ ವಾಗ್ದಾಳಿ
ಚಾಮರಾಜನಗರ

ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಸಿಎಂ ಸಿದ್ದರಾಮಯ್ಯ ಮಿಂಚಿನ ಸಂಚಾರ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ, ಬಿಎಸ್‍ವೈ ವಿರುದ್ಧ ವಾಗ್ದಾಳಿ

May 8, 2018

ಚಾಮರಾಜನಗರ:  ಜಿಲ್ಲೆಯ ಎಲ್ಲಾ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಭೇಟಿ ನೀಡಿ ಚುನಾವಣಾ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚಿಸಿದರು. ಈ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಮೊದಲಿಗೆ ಹನೂರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅಲ್ಲಿನ ಮಲೈಮಹದೇಶ್ವರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಪಾಲ್ಗೊಂಡರು. ನಂತರ ಹೆಲಿಕಾಪ್ಟರ್‍ನಲ್ಲಿ ಕೊಳ್ಳೇಗಾಲಕ್ಕೆ ಆಗಮಿಸಿದರು. ಅಲ್ಲಿನ ನ್ಯಾಷನಲ್ ಮಿಡಲ್ ಸ್ಕೂಲ್ ಆವರಣದಲ್ಲಿ ಆಯೋಜಿಸಿದ್ದ ಚುನಾವಣಾ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ತದನಂತರ ಹೆಲಿಕಾಪ್ಟರ್ ಮೂಲಕ ಚಾಮರಾಜನಗರಕ್ಕೆ ಆಗಮಿಸಿ, ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಭಾಗವಹಿಸಿದರು. ಬಳಿಕ ಹೆಲಿಕಾಪ್ಟರ್‍ನಲ್ಲಿ ಗುಂಡ್ಲುಪೇಟೆಗೆ ತೆರಳಿದರು. ಅಲ್ಲಿನ ನೆಹರು ಪಾರ್ಕ್‍ನಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಸಿಎಂ ಪಾಲ್ಗೊಂಡು ಮತ ಯಾಚಿಸಿದ ನಂತರ ಮೈಸೂರಿಗೆ ತೆರಳಿದರು.

ಚಾಮರಾಜನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 40 ನಿಮಿಷಗಳ ಕಾಲ ತಮ್ಮದೇ ಆದ ಶೈಲಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ತಮ್ಮ ಭಾಷಣದ ಉದ್ದಕ್ಕೂ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರನ್ನು ಟೀಕಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಕುರ್ಚಿ ಹೋಗುತ್ತದೆ ಎಂದು ಹೆದರಿ ಜಿಲ್ಲಾ ಕೇಂದ್ರವಾದ ಚಾಮರಾಜನಗರಕ್ಕೆ ಬಾರದೆ ಸಂತೇಮರಹಳ್ಳಿಗೆ ಬಂದು ಹೋಗಿದ್ದಾರೆ. ಅವರು(ನರೇಂದ್ರ ಮೋದಿ) ಚಾಮರಾಜನಗರಕ್ಕೆ ಬಾರದಿದ್ದರೂ 2019ಕ್ಕೆ ಅವರ ಕುರ್ಚಿ ಹೋಗೋದು ಗ್ಯಾರಂಟಿ. ಕುರ್ಚಿ ಉಳಿಸಿಕೊಳ್ಳಲು ಅವರಿಂದ ಆಗೊಲ್ಲ ಎಂದು ವ್ಯಂಗ್ಯವಾಡಿದರು.

ಬಿಜೆಪಿಯ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಯಾರೂ ಸಹ ಧೈರ್ಯವಾಗಿ ಬದುಕುವ ವಾತಾವರಣ ಇಲ್ಲ. ಆತಂಕದ ವಾತಾವರಣದ ನಿರ್ಮಾಣ ಆಗಿದೆ ಎಂದು ಆಪಾದಿಸಿದರು. ಭಾರತದ ಇತಿಹಾಸದಲ್ಲಿ ಮಹಾನ್ ಸುಳ್ಳುಗಾರ ಪ್ರಧಾನಮಂತ್ರಿ ಇದ್ದರೆ ಅದು ಮಿಸ್ಟರ್ ನರೇಂದ್ರ ಮೋದಿ ಎಂದು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಟೀಕಿಸಿದ ಸಿದ್ದರಾಮಯ್ಯ, ನನಗೆ 56 ಇಂಚಿನ ಎದೆ ಇದೆ ಎಂದು ಮೋದಿ ಹೇಳಿಕೊಂಡಿದ್ದಾರೆ. ಆದರೆ ಏನು ಪ್ರಯೋಜನ? ಬಡವರಿಗೆ ಸ್ಪಂದಿಸುವ ಹೃದಯ ಇಲ್ಲದಿದ್ದರೆ ಏನು ಪ್ರಯೋಜನ? ಎಂದು ಟೀಕಿಸಿದರು.

ಪ್ರಧಾನಮಂತ್ರಿ ಮೋದಿ ಕಳೆದ 4 ವರ್ಷಳಿಂದ ಬರೀ ಸುಳ್ಳು ಹೇಳುತ್ತಾ ಕಾಲ ಕಳೆಯುತ್ತಿದ್ದಾರೆ. ಅವರ ಬಾಯಿ ಬಡಾಯಿ, ಆದರೆ ಸಾಧನೆ ಮಾತ್ರ ಶೂನ್ಯ. ಕರ್ನಾಟಕಕ್ಕೆ ಬಂದು ಬರೀ ಭಾಷಣ ಮಾಡಿ ಹೋಗುವುದರಿಂದ ಏನು ಪ್ರಯೋಜನ ಇಲ್ಲ. ಕರ್ನಾಟಕಕ್ಕೆ ನಿಮ್ಮ ಕೊಡುಗೆ ಏನು? ಎಂದು ಖಾರವಾಗಿ ಪ್ರಶ್ನಿಸಿದ ಸಿದ್ದರಾಮಯ್ಯ, ಅಧಿಕಾರಕ್ಕೆ ಬಂದರೆ 1 ಲಕ್ಷ ರೂ. ಸಾಲ ಮನ್ನಾ ಮಾಡುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ತಿಳಿಸಿದೆ. ಆದರೆ ಅವರು ಅಧಿಕಾರಕ್ಕೆ ಬರೊಲ್ಲ. ಸಾಲ ಮನ್ನಾ ಆಗೊಲ್ಲ. ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲು ಸಾಧ್ಯನಾ? ಇದು ವಾಟಾಳ್‍ನಾಗರಾಜ್ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಕನಸು ಕಂಡಂತೆ. ಯಡಿಯೂರಪ್ಪನೂ ಸಿಎಂ ಆಗೊಲ್ಲ. ಆತ ಎಷ್ಟೇ ತಿಪ್ಪರಲಾಗ ಹಾಕಿದರೂ ಸಹ ಅದು ಸಾಧ್ಯವಿಲ್ಲ. ಅವರಪ್ಪರಾಣೆ ಆತ ಮುಖ್ಯಮಂತ್ರಿ ಆಗೊಲ್ಲ. ನಾನೇ ಮತ್ತೆ ಸಿಎಂ ಆಗೋದು ಎಂದು ಪುನರುಚ್ಚರಿಸಿದರು.

5 ವರ್ಷಗಳ ಕಾಲ ಸುಭದ್ರ ಸರ್ಕಾರ ನೀಡಿದ್ದೇನೆ: ನನ್ನ ಮೇಲೆ ಒಂದು ಕಪ್ಪು ಚುಕ್ಕೆ, ಒಂದೇ ಒಂದು ಹಗರಣ ಇಲ್ಲ. ಆದರೆ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ಲಂಚ ಪಡೆದು ಜೈಲಿಗೆ ಹೋಗಿದ್ದರು. ಜೈಲಿಗೆ ಹೋಗಿದ್ದವರು, ಕಳಂಕ ಇರುವವರು, ಲೂಟಿ ಹೊಡೆಯುವವರು ಸಿಎಂ ಆಗಬೇಕಾ? ಕಳಂಕ ಇಲ್ಲದ ನಾನು ಸಿಎಂ ಆಗಬೇಕಾ? ನಾನು ಸಿಎಂ ಆಗಬೇಕಿದ್ದರೆ ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಪುಟ್ಟರಂಗಶೆಟ್ಟಿ ಅವರನ್ನು ಗೆಲ್ಲಿಸಿ ಅವರಿಗೆ ಆಶೀರ್ವದಿಸಿ ಎಂದು ಕೈ ಮುಗಿದು ಸಿಎಂ ಮನವಿ ಮಾಡಿದರು.

ಸಂಸದ ಆರ್.ಧ್ರುವನಾರಾಯಣ್, ಶಾಸಕ ಸಿ.ಪುಟ್ಟರಂಗಶೆಟ್ಟಿ,, ಪುಷ್ಪಾ ಅಮರನಾಥ್, ಐವಾನ್ ಡಿಸೋಜ, ಜಿಪಂ ಸದಸ್ಯರಾದ ಶಶಿಕಲಾ ಸೋಮಲಿಂಗಪ್ಪ, ಎ.ಆರ್.ಬಾಲರಾಜು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಪ್ರಧಾನ ಕಾರ್ಯದರ್ಶಿ, ಚಿಕ್ಕಮಹದೇವು, ಮುಖಂಡರಾದ ಬಿ.ಕೆ.ರವಿಕುಮಾರ್, ಎಸ್.ನಂಜುಂಡಸ್ವಾಮಿ, ಶೋಭಾ ಪ್ರಭುಸ್ವಾಮಿ, ಸೈಯದ್‍ರಫಿ, ಕೊತ್ತಲವಾಡಿ ಸೋಮಲಿಂಗಪ್ಪ, ಪಾಪಣ್ಣ, ಅರುಣ್‍ಕುಮರ್ ಎ.ಎಸ್.ಗುರುಸ್ವಾಮಿ, ಮುನ್ನ, ಉಮೇಶ್, ಸೋಮನಾಯಕ್, ಸುಹೇಲ್ ಅಲಿಖಾನ್, ವೆಂಕೋಬ, ಜಿ.ಎಂ.ಗಾಡ್ಕರ್, ಶ್ರೀನಿವಾಸನಾಯ್ಕ, ರಾಜಪ್ಪ, ಕಾಗಲವಾಡಿ ಚಂದ್ರು, ಲತಾ ಜಯಣ್ಣ, ರವಿಗೌಡ, ಕಾವೇರಿ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Translate »