ಸೋಮವಾರಪೇಟೆ: ಒಕ್ಕಲಿಗ ಕೋಟಾದಲ್ಲಿ ದೇವೇಗೌಡರು ಪ್ರಧಾನಮಂತ್ರಿಯಾಗಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಇನ್ನೂ ಅವರು ಕೇಳುವುದರಲ್ಲಿ ಅರ್ಥವಿಲ್ಲ. ನಾನು ಕೂಡ ಒಕ್ಕಲಿಗನಾಗಿದ್ದು, ಮುಂದಿನ ದಿನಗಳಲ್ಲಿ ನನಗೂ ಕೂಡ ಅವಕಾಶ ಸಿಗಬೇಕು ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಈ ಬಾರಿ ಜೆಡಿಎಸ್ 20 ಸ್ಥಾನವನ್ನೂ ಪಡೆಯುವುದಿಲ್ಲ. ಈ ಹಿನ್ನೆಲೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಈಗಾಗಲೇ ಜೆಡಿಎಸ್‍ನವರಿಗೆ ಅರಿವಾಗಿರುವುದರಿಂದ ನಮ್ಮ ಪ್ರಣಾಳಿಕೆಗೆ ಬೆಂಬಲ ನೀಡುವ ಪಕ್ಷಗಳಿಗೆ ಬೆಂಬಲ ನೀಡಲಾಗುವುದು ಎಂದು ಹೇಳಿಕೆ ನೀಡಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಈ ಬಾರಿಯ ಚುನಾವಣೆಯಲ್ಲಿ 132 ಸ್ಥಾನ ಪಡೆಯಲಿದೆ ಎಂದರು.
ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ 40 ಸ್ಥಾನಗಳನ್ನು ಗಳಿಸಿತ್ತು. ಈ ಬಾರಿ ಕೇವಲ 10 ಸ್ಥಾನಗಳನ್ನು ಹೆಚ್ಚುವರಿಯಾಗಿ ಪಡೆಯಬಹುದು. ಅಶಾಂತಿಯಿಂದ ಮಾತ್ರ ಚುನಾವಣೆಯನ್ನು ಗೆಲ್ಲಲು ಸಾಧ್ಯ ಎಂಬುದನ್ನು ಮನಗಂಡಿರುವ ಅಮಿತ್ ಷಾ, ಸಂಸದ ಪ್ರತಾಪ್‍ಸಿಂಹ ಅವರಿಗೆ ಧರ್ಮದ ಹೆಸರಿನಲ್ಲಿ ಗಲಭೆಯನ್ನು ನಡೆಸುವಂತೆ ಸೂಚನೆ ನೀಡಿದ್ದಾರೆ. ಬಿಜೆಪಿ ಆಡಳಿತದ ಸಂದರ್ಭ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಲವು ಮಂತ್ರಿಗಳು ಜೈಲಿಗೆ ಹೋಗಿ ಬಂದರು. ಈಗ ಅದೇ ಪಕ್ಷದವರು ಅಚ್ಚೇದಿನ್ ಆಯೇಗಾ ಅಂತಾ ಹಗಲು ಕನಸು ಕಾಣುತ್ತಿದ್ದಾರೆ. ಆದರೆ ಈ ದೇಶಕ್ಕೆ ಅಚ್ಚೇದಿನ್ ಇನ್ನೂ ಬಂದಿಲ್ಲ. ಕಪ್ಪುಹಣವನ್ನು ತಂದು ಬಡವರ ಖಾತೆಗೆ ರೂ.15ಲಕ್ಷ ಹಣವನ್ನು ಹಾಕುತ್ತೇವೆ ಎಂದು ಹೇಳಿದರು. ಈ ಬಾರಿ ಪ್ರಚಾರಕ್ಕೆ ಬಂದಾಗ 15ಲಕ್ಷ ಪಡೆದು ಮತ್ತೆ ಮಾತನಾಡುವಂತೆ ಹೇಳಿದರು.
ಕಾಂಗ್ರೆಸ್ ಅಭ್ಯಥಿಗಳಿಗೆ ಮತ ಹಾಕಿದರೆ, ರಾಹುಲ್‍ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ ಹಾಕಿದಂತಾಗುತ್ತದೆ. ಟಿಪ್ಪು ದೇಶದ್ರೋಹಿ ಎಂದು ಬಿಜೆಪಿಯವರು ಬಿಂಬಿಸುತ್ತಿದ್ದಾರೆ. ಆದರೆ ರಾಷ್ಟ್ರಪತಿಯವರೂ ಕೂಡ ಟಿಪ್ಪು ದೇಶಪ್ರೇಮಿ ಎಂದು ಗುಣಗಾನ ಮಾಡಿದ್ದಾರೆ. ಆದರೂ ಬಿಜೆಪಿಯವರಿಗೆ ಬುದ್ಧಿಬಂದಿಲ್ಲ. ಆ ವಿಷಯವನ್ನು ಪ್ರಮುಖವಾಗಿ ಬಳಸಿಕೊಂಡು ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದರು.
ಪ್ರಧಾನಮಂತ್ರಿ ಮೋದಿಯವರು ಬೆಂಗಳೂರನ್ನು ಕರಪ್ಷನ್ ಸಿಟಿ, ಗಾರ್ಬೇಜ್ ಸಿಟಿ ಮತ್ತು ಕ್ರೈಂ ಸಿಟಿ ಎಂದು ಮೂದಲಿಸುವ ಮೂಲಕ ರಾಜ್ಯದ ಜನತೆಗೆ ಅವಮಾನ ಮಾಡಿದ್ದಾರೆ. ಅವರು ಕೂಡಲೇ ರಾಜ್ಯದ ಜನತೆಯನ್ನು ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು. ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ, ಪಕ್ಷದ ಪ್ರಮುಖರುಹಾಜರಿದ್ದರು.