ಕೊಡಗಿನಲ್ಲಿ ಕೊಡವರಿಗೆ ಕೋವಿ ಪರವಾನಗಿ ವಿಶೇಷ ವಿನಾಯಿತಿಗೆ ಕ್ಯಾತೆ ಸಾಂಪ್ರದಾಯಿಕ ಸವಲತ್ತು ಉಳಿಸಿಕೊಳ್ಳಲು ಕಾನೂನು ಮೊರೆ
ಕೊಡಗು

ಕೊಡಗಿನಲ್ಲಿ ಕೊಡವರಿಗೆ ಕೋವಿ ಪರವಾನಗಿ ವಿಶೇಷ ವಿನಾಯಿತಿಗೆ ಕ್ಯಾತೆ ಸಾಂಪ್ರದಾಯಿಕ ಸವಲತ್ತು ಉಳಿಸಿಕೊಳ್ಳಲು ಕಾನೂನು ಮೊರೆ

May 8, 2018

ಮಡಿಕೇರಿ:  ಕೊಡಗಿನಲ್ಲಿ ಕೊಡವರಿಗೆ ಕೋವಿ ಪರವಾನಗಿ ವಿಶೇಷ ವಿನಾಯಿತಿ ವಿಚಾರ ಚುನಾವಣೆ ಹೊಸ್ತಿಲಲ್ಲಿ ಮತ್ತೆ ಸದ್ದು ಮಾಡುತ್ತಿದ್ದು, ವಿಶೇಷ ವಿನಾಯಿತಿ ಉಳಿಸಿಕೊಳ್ಳಲು ಕಾನೂನು ಸಮರಕ್ಕೆ ವೇದಿಕೆ ಸಿದ್ಧವಾಗುತ್ತಿದೆ.

ಕೊಡವರು ಮತ್ತು ಜಮ್ಮಾ ಹಿಡುವಳಿದಾರರಿಗೆ ನೀಡುತ್ತಿರುವ ಕೋವಿ ಪರವಾನಗಿಯ ವಿಶೇಷ ವಿನಾಯಿತಿ ರದ್ದುಪಡಿಸಬೇಕೆಂದು ನಿವೃತ್ತ ಕ್ಯಾಪ್ಟನ್ ಯಾಲದಾಳು ಕೆ.ಚೇತನ್ ಮತ್ತೆ ನ್ಯಾಯಾಲಯದ ಮೆಟ್ಟಿಲೇರಿರುವುದು ಕೊಡಗಿನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಈ ಸಂಬಂಧ ‘ಮೈಸೂರು ಮಿತ್ರ’ ನಿಗೆ ಪ್ರತಿಕ್ರಿಯಿಸಿದ ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ, ಕೊಡವರಿಗೆ ಬ್ರಿಟಿಷರಿಂದ ಗೌರವಪೂರ್ವಕವಾಗಿ ನೀಡಲಾಗಿದ್ದ ಕೋವಿ ಪರವಾನಗಿ ವಿಶೇಷ ವಿನಾಯಿತಿ ಉಳಿಸಿಕೊಳ್ಳಲು ಕಾನೂನು ಸಮರಕ್ಕೆ ಸಿದ್ಧತೆ ನಡೆಸಲಾಗಿದೆ. ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲು ಕೊಡವ ಸಮಾಜಗಳ ಒಕ್ಕೂಟವು ಬೆಂಗಳೂರು ಕೊಡವ ಸಮಾಜಕ್ಕೆ ಅಧಿಕಾರ ನೀಡಿದೆ. ಬೆಂಗಳೂರು ಕೊಡವ ಸಮಾಜದಿಂದ ಹಿರಿಯ ವಕೀಲ ಎಂ.ಸಿ.ನಾಣಯ್ಯ ನೇತೃತ್ವದ ವಕೀಲರ ತಂಡಕ್ಕೆ ಜವಾಬ್ದಾರಿ ವಹಿಸಲಾಗಿದೆ ಎಂದರು.

ಅಲ್ಲದೆ, ಕೊಡವ ಸಮಾಜದ ಮತ್ತೋರ್ವ ಹಿರಿಯ ವಕೀಲ ಸಜನ್ ಪೂವಯ್ಯ ಅವರೊಂದಿಗೂ ಮಾತುಕತೆ ನಡೆಸಿದ್ದು, ಅವರೂ ಸಹ ಸಹಕರಿಸುವ ಭರವಸೆ ನೀಡಿದ್ದಾರೆ. ಕೋವಿ ಪರವಾನಗಿ ವಿನಾಯಿತಿಗೆ ಸಂಬಂಧಿಸಿದಂತೆ ಹಿರಿಯ ವಕೀಲ ಎ.ಕೆ.ಸುಬ್ಬಯ್ಯ ಹಲವಾರು ದಾಖಲಾತಿಗಳನ್ನು ಸಂಗ್ರಹಿಸಿಕೊಟ್ಟಿದ್ದಾರೆ. ಮಾಜಿ ಸಚಿವ ಎಂ.ಸಿ.ನಾಣಯ್ಯ ಅವರೂ ಕೂಡ ಸಹಕಾರ ನೀಡುತ್ತಿದ್ದಾರೆ. ಈ ವಿಚಾರ ನ್ಯಾಯಾಂಗದ ಪರಿಮಿತಿ ಒಳಗಿರುವುದರಿಂದ ಯಾರೂ ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸ್ತಾಪಿಸಬಾರದು ಎಂದು ಮೊಣ್ಣಪ್ಪ ಮನವಿ ಮಾಡಿದರು.

ಈ ಸಂಬಂಧ ಪ್ರತಿಕ್ರಿಯಿಸಿದ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಆರ್.ಸೋಮಣ್ಣ, ಕ್ಯಾಪ್ಟನ್ ವೈ.ಕೆ.ಚೇತನ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಗೂ, ಕೊಡಗು ಗೌಡ ಸಮಾಜ ಹಾಗೂ ಗೌಡ ಸಮಾಜಗಳ ಒಕ್ಕೂಟಕ್ಕೂ ಯಾವುದೇ ಸಂಬಂಧವಿಲ್ಲ. ಈ ವಿಚಾರವನ್ನು ಸುಲಲಿತವಾಗಿ ಬಗೆಹರಿಸಿಕೊಳ್ಳುವ ಸದುದ್ದೇಶದಿಂದ ಜನಾಂಗದ ಪರವಾಗಿ ಚೇತನ್ ಅವರೊಂದಿಗೆ ಚರ್ಚಿಸಲಾಯಿತಾದರೂ ಅವರಿಂದ ಸ್ಪಂದನೆ ದೊರೆಯುತ್ತಿಲ್ಲ. ಆರ್ಟಿಕಲ್ 3 ಹಾಗೂ 4ರಿಂದ ಕೂರ್ಗ್ ಬೈರೇಸ್‍ನಡಿ ಕೋವಿ ಪರವಾನಗಿ ವಿನಾಯಿತಿ ಕೊಡಗಿನ ಎಲ್ಲಾ ಮೂಲ ನಿವಾಸಿಗಳಿಗೂ ದೊರೆಯಬೇಕೆಂಬುದೇ ಅಖಿಲ ಕೊಡವ ಸಮಾಜದ ಉದ್ದೇಶವೂ ಆಗಿದ್ದು, ಕೋವಿ ಪರವಾನಗಿ ವಿಶೇಷ ವಿನಾಯಿತಿ ರದ್ದುಪಡಿಸಬೇಕೆಂಬುದಕ್ಕೆ ನಮ್ಮ ಸಹಮತ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕೊಡಗಿನಲ್ಲಿ ಕೂರ್ಗ್ ಬೈರೇಸ್‍ನಲ್ಲಿ ಕೊಡವರು ಹಾಗೂ ಜಮ್ಮಾ ಹಿಡುವಳಿದಾರರಿಗೆ ಕೋವಿ ಪರವಾನಗಿ ವಿಶೇಷ ವಿನಾಯಿತಿ ನೀಡಿರುವುದು ಸಂವಿಧಾನ ಬಾಹಿರವಾಗಿದ್ದು, ಅದನ್ನು ರದ್ದುಪಡಿಸಬೇಕೆಂದು ನಾನು ಹೈ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೇನೆ. ಜನಾಂಗದ ಹೆಸರಿನಲ್ಲಿ ಕೊಡವರಿಗಾಗಲೀ, ಜಮ್ಮಾ ಹಿಡುವಳಿದಾರರು ಎಂಬ ಹೆಸರಿನಲ್ಲಿ ಇತರರಿಗಾಗಲೀ ಕೋವಿ ಪರವಾನಗಿ ವಿನಾಯಿತಿ ನೀಡುವುದು ಸಮಂಜಸವಲ್ಲ, ಅದನ್ನು ರದ್ದುಪಡಿಸಬೇಕು ಎಂಬುದು ತಮ್ಮ ವಾದ ಎಂದು ಕ್ಯಾಪ್ಟನ್ ವೈ.ಕೆ.ಚೇತನ್ ‘ಮೈಸೂರು ಮಿತ್ರ’ ನಿಗೆ ತಿಳಿಸಿದರು.

Translate »