ಸಿದ್ದರಾಮಯ್ಯ ದುರಹಂಕಾರಿ, ಸಂಸ್ಕೃತಿ  ಇಲ್ಲದ ಅನಾಗರಿಕ ಬಿಜೆಪಿ ಮುಖಂಡ ವಿ.ಶ್ರೀನಿವಾಸಪ್ರಸಾದ್ ಕಿಡಿ
ಚಾಮರಾಜನಗರ

ಸಿದ್ದರಾಮಯ್ಯ ದುರಹಂಕಾರಿ, ಸಂಸ್ಕೃತಿ ಇಲ್ಲದ ಅನಾಗರಿಕ ಬಿಜೆಪಿ ಮುಖಂಡ ವಿ.ಶ್ರೀನಿವಾಸಪ್ರಸಾದ್ ಕಿಡಿ

May 7, 2018

ಚಾಮರಾಜನಗರ: ಸಿದ್ದರಾಮಯ್ಯ ಓರ್ವ ದುರಹಂಕಾರಿ, ಸಂಸ್ಕೃತಿ  ಇಲ್ಲದ ಅನಾಗರಿಕ.

ಹೀಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜರಿದವರು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ವಿ.ಶ್ರೀನಿವಾಸಪ್ರಸಾದ್. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಗೆ ಬರುವ 15 ವಿಧಾನಸಭಾ ಕ್ಷೇತ್ರಗಳ ಪೈಕಿ 10ರಿಂದ 11ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ವಿಧಾನಸಭಾ ಚುನಾವಣೆಗೆ(2013)ಯಲ್ಲಿ ಬಿಜೆಪಿ ಪಕ್ಷ 3 ಬಣಗಳಾಗಿ ಮಾರ್ಪಟ್ಟಿತ್ತು. ಹೀಗಾಗಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ 12 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು. ಆದರೆ ಈ ಬಾರಿ ಅಷ್ಟು ಸ್ಥಾನ ಗೆಲ್ಲಲು ಕಾಂಗ್ರೆಸ್‍ನಿಂದ ಸಾಧ್ಯವಿಲ್ಲ. ಚಾ.ನಗರ ಜಿಲ್ಲೆಯ 4 ಕ್ಷೇತ್ರ ಸೇರಿದಂತೆ ಮೈಸೂರು ಜಿಲ್ಲೆಯನ್ನೊಳಗೊಂಡಂತೆ 10ರಿಂದ 11 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ರಾಜ್ಯದಲ್ಲಿ ಬಿಜೆಪಿ ಬಹುಮತ ಗಳಿಸಿ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರೋಧಿ ಅಲೆ ಇದೆ. ರಾಜ್ಯದಲ್ಲಿ ಕಳೆದ 5 ವರ್ಷಗಳಿಂದ ಅಧಿಕಾರ ನಡೆಸಿದ ಸಿದ್ದರಾಮಯ್ಯ ಅವರಿಗೆ ದುರಹಂಕಾರ ಬಂದಿದೆ. ಆತ ಸಂಸ್ಕೃತಿ ಇಲ್ಲದ ಅನಾಗರಿಕ. ಆತನ ಉಡಾಫೆಗೆ ಮತದಾರರು ತಕ್ಕ ಪಾಠ ಕಲಿಸಲು ಕಾಯುತ್ತಿದ್ದಾರೆ ಎಂದು ಏಕವಚನದಲ್ಲಿ ಟೀಕಿಸಿದರು.

ಜಿಲ್ಲಾ ಕೇಂದ್ರ ಚಾಮರಾಜನಗರ ಒಳಗೊಂಡ ಚಾಮರಾಜನಗರ ಕ್ಷೇತ್ರಕ್ಕೆ ಸಮರ್ಥ ಪ್ರತಿನಿಧಿ(ಶಾಸಕರು) ಬೇಕಾಗಿದ್ದಾರೆ. ಕಳೆದ 10 ವರ್ಷಳಿಂದ ಈ ಕ್ಷೇತ್ರ ಸಮರ್ಥವಾಗಿ ಆಡಳಿತ ನಡೆಸುವ ಶಾಸಕರನ್ನು ಕಂಡಿಲ್ಲ ಎಂದು ಪರೋಕ್ಷವಾಗಿ ಶಾಸಕ ಹಾಗೂ ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಪುಟ್ಟರಂಗಶೆಟ್ಟಿ ಅವರನ್ನು ವಿ.ಶ್ರೀನಿವಾಸ್‍ಪ್ರಸಾದ್ ಟೀಕಿಸಿದರು.

ಸಿದ್ದರಾಮಯ್ಯ ಅವರ ಬೆಳವಣ ಗೆಯಲ್ಲಿ ಜಿ.ಟಿ.ದೇವೇಗೌಡರ ಪಾತ್ರವೂ ಅತೀ ಹೆಚ್ಚಿದೆ. ಹೀಗಿರುವಾಗ ಅವರ ವಿರುದ್ಧವೇ ಸಿದ್ದರಾಮಯ್ಯ ಸ್ಪರ್ಧಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡರು ತಮ್ಮದೇ ಆದ ವರ್ಚಸ್ಸು, ಸಂಘಟನೆ ಹೊಂದಿದ್ದಾರೆ. ಇದರಿಂದ ಜಿ.ಟಿ.ದೇವೇಗೌಡರ ಗೆಲುವು ಖಚಿತ.
– ವಿ.ಶ್ರೀನಿವಾಸಪ್ರಸಾದ್

ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯದ ವಿವಿಧೆಡೆ 15 ಬಹಿರಂಗ ಸಭೆಗಳಲ್ಲಿ ಪಾಲ್ಗೊಂಡಿದ್ದಾರೆ. ಚಾಮರಾಜನಗರ ಜಿಲ್ಲೆಯಿಂದಲೇ ಮೋದಿ ಪ್ರವಾಸ ಆರಂಭವಾಗಿರುವುದರಿಂದ ಜಿಲ್ಲೆಯಲ್ಲಿ ಬಿಜೆಪಿ ಅಲೆ ಮತ್ತಷ್ಟು ಎದ್ದಿದೆ. ಪ್ರಧಾನಮಂತ್ರಿಗಳೇ ಸಂವಿಧಾನ ಶ್ರೇಷ್ಠವಾದದ್ದು ಎಂದು ಹೇಳಿದ್ದಾರೆ. ಹೀಗಾಗಿ ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆ ಅವರ ಮಾತಿಗೆ ಮನ್ನಣೆ ನೀಡುವ ಅಗತ್ಯ ಇಲ್ಲ. ಸಿದ್ದರಾಮಯ್ಯ ಅವರ ಏಜೆಂಟರಂತೆ ವರ್ತಿಸುವ ಕೆಲವು ಪ್ರಗತಿಪರರು, ವಿಚಾರವಂತರು, ದಲಿತರ ಭಾವನೆಗಳನ್ನು ಕೆರಳಿಸುವ ಸಲುವಾಗಿ ಇಲ್ಲಸಲ್ಲದ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ ಎಂದು ವಿ.ಶ್ರೀನಿವಾಸಪ್ರಸಾದ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಾಜಿ ಸಂಸದ ಕಾಗಲವಾಡಿ ಎಂ.ಶಿವಣ್ಣ, ಎಂಸಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಬಸವೇಗೌಡ, ಮಾಜಿ ಶಾಸಕ ಸಿ.ಗುರುಸ್ವಾಮಿ, ಮುಖಂಡರಾದ ಅಮ್ಮನಪುರ ಮಲ್ಲೇಶ್, ಪಾಪು, ಕೆರಹಳ್ಳಿ ಮಹದೇಸ್ವಾಮಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Translate »