ಬಿಜೆಪಿ ಅಭ್ಯರ್ಥಿ ಪ್ರತಾಪ್‍ಸಿಂಹ ನಾಳೆ ನಾಮಪತ್ರ ಸಲ್ಲಿಕೆ
ಮೈಸೂರು

ಬಿಜೆಪಿ ಅಭ್ಯರ್ಥಿ ಪ್ರತಾಪ್‍ಸಿಂಹ ನಾಳೆ ನಾಮಪತ್ರ ಸಲ್ಲಿಕೆ

March 24, 2019

ಮೈಸೂರು: ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಆದೇಶ ದಂತೆ ಮಾ.25ರಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕ್ಷೇತ್ರದ ಹಾಲಿ ಸಂಸದ ಪ್ರತಾಪ್ ಸಿಂಹ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.

ಮೈಸೂರಿನ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಅಂದು ಬೆಳಿಗ್ಗೆ 10ಕ್ಕೆ ಮೈಸೂರು ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾ ಗುವುದು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಶೋಭಾಯಾತ್ರೆಯಲ್ಲಿ ತೆರಳಿ ಮಧ್ಯಾಹ್ನ 12.30ಕ್ಕೆ ನಾಮಪತ್ರ ಸಲ್ಲಿಸಲಾಗುವುದು. ಮಾಜಿ ಡಿಸಿಎಂ ಆರ್.ಅಶೋಕ್, ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ಶ್ರೀರಾಮುಲು, ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್ ಸೇರಿದಂತೆ ಇನ್ನಿತರ ಮುಖಂಡರು ಸೇರಿದಂತೆ ಅಪಾರ ಸಂಖ್ಯೆ ಯಲ್ಲಿ ಪಕ್ಷದ ಕಾರ್ಯಕರ್ತರು ಪಾಲ್ಗೊ ಳ್ಳಲಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿಗೆ ಶೇ.51ರಷ್ಟು ಮತ: 1996ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರ ದಲ್ಲಿ ಬಿಜೆಪಿ ಮೊಟ್ಟ ಮೊದಲ ಗೆಲುವು ಸಾಧಿಸಿತು. ಆಗ ಶೇ.32ರಷ್ಟು ಮತ ಪಕ್ಷಕ್ಕೆ ದಕ್ಕಿತ್ತು. ಆ ಬಳಿಕ 2004ರಲ್ಲಿ ಶೇ.33ರಷ್ಟು ಮತ ಗಳಿಕೆಯೊಂದಿಗೆ ಮತ್ತೆ ಕ್ಷೇತ್ರ ಬಿಜೆಪಿ ಪಾಲಾಯಿತು. ಅದೇ ರೀತಿ 2009ರಲ್ಲಿ ಶೇ. 35 ಹಾಗೂ 2014ರಲ್ಲಿ ಶೇ.43ರಷ್ಟು ಮತ ಗಳಿಕೆಯೊಂದಿಗೆ ಕ್ಷೇತ್ರದಲ್ಲಿ ಪಕ್ಷ ಗೆಲುವು ಕಂಡಿತು. ಪ್ರತಿ ಬಾರಿಯೂ ಕ್ಷೇತ್ರದಲ್ಲಿ ಬಿಜೆಪಿ ಬಲ ವೃದ್ಧಿಸುತ್ತಿದೆ.

ಇಲ್ಲಿಯವರೆಗೆ ತ್ರೀಕೋನ ಸ್ಪರ್ಧೆ ಎದುರಾಗುತ್ತಿತ್ತು. ಆದರೆ ಈ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ನೇರ ಸ್ಪರ್ಧೆ ಏರ್ಪಡಲಿದೆ. ಇಡೀ ರಾಜ್ಯದಲ್ಲಿ ಇದೇ ವಾತಾವರಣ ಇರಲಿದ್ದು, ಶೇ.51ರಷ್ಟು ಪ್ರಮಾಣದ ಮತಗಳು ರಾಜ್ಯದಲ್ಲಿ ಬಿಜೆಪಿಗೆ ಬರಲಿದೆ ಎಂದು ರಾಮದಾಸ್ ವಿವರಿಸಿದರು.

ಪಕ್ಷದಲ್ಲಿ ಸ್ಥಾನಮಾನ ಅನುಭವಿಸಿದರು ಈಗ ಎದುರಾಳಿ: ಬಿಜೆಪಿಯಲ್ಲಿ ಶಾಸಕ, ಸಂಸದ ಹಾಗೂ ಮಂತ್ರಿ ಸೇರಿದಂತೆ ಹಲವು ಸ್ಥಾನಮಾನ ಅಲಂಕರಿಸಿದ್ದವರು ಈಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮೈಸೂರಿನಿಂದ ಕಣಕ್ಕಿಳಿಯುತ್ತಿರುವ ಮಾಹಿತಿ ಇದ್ದು, ಈ ಬಗ್ಗೆಯೂ ನಮಗೆ ಯಾವುದೇ ಭಯವಿಲ್ಲ. ಜನತೆ ಅಭಿವೃದ್ಧಿ ಹಾಗೂ ದೇಶದ ರಕ್ಷಣೆ ವಿಚಾರ ಮುಂದಿಟ್ಟುಕೊಂಡು ಮತ ಕೊಡಲಿದ್ದಾರೆ. ಮೈಸೂರು-ಕೊಡಗು ಕ್ಷೇತ್ರದಲ್ಲಿ ಲಕ್ಷಕ್ಕೂ ಅಧಿಕ ಮತದ ಅಂತರದಲ್ಲಿ ಗೆದ್ದು ಭಾರತಾಂಬೆ ಮಡಲಿಗೆ ಕೊಡಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಎಲ್.ನಾಗೇಂದ್ರ ಮಾತನಾಡಿ, ಮೈಸೂರು ವಿಧಾನಸಭಾ ಕ್ಷೇತ್ರಗಳಾದ ಚಾಮರಾಜ ಹಾಗೂ ಕೆಆರ್ ಕ್ಷೇತ್ರಗಳಲ್ಲಿ ಬಿಜೆಪಿಗೆ ಅತ್ಯಧಿಕ ಮತಗಳು ಬರಲಿವೆ. ಕೊಡಗು ಮೊದಲಿನಿಂದಲೂ ಬಿಜೆಪಿಗೆ ಬೆಂಬಲ ನೀಡುವ ಜಿಲ್ಲೆ. ದೇಶದ ರಕ್ಷಣೆ ವಿಚಾರದ ಆಧಾರದಲ್ಲಿ ಜನತೆ ಮತದಾನ ಮಾಡುವ ವಿಶ್ವಾಸವಿದೆ. ಮೈಸೂರು-ಕೊಡಗು ಹಾಲಿ ಸಂಸದ ಪ್ರತಾಪ್ ಸಿಂಹ ಕೇಂದ್ರದಿಂದ 11 ಸಾವಿರ ಕೋಟಿ ರೂ. ಅಧಿಕ ಮೊತ್ತದ ಅನುದಾನವನ್ನು ಕ್ಷೇತ್ರಕ್ಕೆ ತಂದು ಅಭಿವೃದ್ಧಿಗೆ ನಾಂದಿ ಹಾಡಿದ್ದಾರೆ. ಅವರ ನಾಮಪತ್ರ ಸಲ್ಲಿಕೆಯ ಶೋಭಾ ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿತೈಷಿಗಳು, ಕಾರ್ಯಕರ್ತರು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

ಬಿಜೆಪಿ ರಾಜ್ಯ ವಕ್ತಾರರೂ ಆದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಪ್ರಭಾರಿ ಡಾ.ವಾಮನಾಚಾರ್ಯ ಮಾತನಾಡಿ, ನಾನು ಪ್ರಭಾರಿಯಾಗಿ ಕೆಲಸ ಮಾಡಿದ ಕ್ಷೇತ್ರಗಳಲ್ಲಿ ಕಠಿಣವಾದರೂ ಗೆಲುವು ಒಲಿದು ಬಂದಿರುವುದೇ ಹೆಚ್ಚು. ಯುವಕರಾದ ಪ್ರತಾಪ್ ಸಿಂಹ ಬುದ್ಧಿವಂತರು. ಸಾಮಾಜಿಕ ನೋವು ಬಲ್ಲವರಾಗಿದ್ದು, ಭ್ರಷ್ಟಾಚಾರ ಮುಕ್ತ ರಾಜಕಾರಣಿ ಹಾಗೂ ಕಟು ರಾಷ್ಟ್ರೀಯವಾದಿ ಆಗಿದ್ದಾರೆ. ಹೀಗಾಗಿ ಅವರ ಗೆಲುವು ನಿಶ್ಚಿತ. ಅಷ್ಟೇನೂ ಶಿಕ್ಷಿತರಲ್ಲದವರೂ ನರೇಂದ್ರ ಮೋದಿ ಪರವಾಗಿದ್ದಾರೆ. ಜಾತಿ-ಧರ್ಮ ಎಲ್ಲವನ್ನೂ ಮೀರಿ ಜನ ಬಿಜೆಪಿ ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಚಾಲಕ ಹೆಚ್.ವಿ.ಫಣೀಶ್, ಕೊಡಗು ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್, ಬಿಜೆಪಿ ಮುಖಂಡರಾದ ಮಹೇಶ್ ರಾಜೇ ಅರಸ್, ಪ್ರಭಾಕರ ಸಿಂಧ್ಯಾ ಗೋಷ್ಠಿಯಲ್ಲಿದ್ದರು.

Translate »