ರಾಜ್ಯದಲ್ಲಿ ಮಧ್ಯಂತರ ಚುನಾವಣೆಗೆ ಬಿಜೆಪಿ ಸಿದ್ಧತೆ
ಮೈಸೂರು

ರಾಜ್ಯದಲ್ಲಿ ಮಧ್ಯಂತರ ಚುನಾವಣೆಗೆ ಬಿಜೆಪಿ ಸಿದ್ಧತೆ

August 28, 2019

ಬೆಂಗಳೂರು, ಆ. 27(ಕೆಎಂಶಿ)-ದೆಹಲಿ ವಿಧಾನಸಭಾ ಚುನಾವಣೆ ಜೊತೆಗೆ ಕರ್ನಾ ಟಕದಲ್ಲಿ ಮಧ್ಯಂತರ ಚುನಾವಣೆ ನಡೆಸಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದು, ಮತ್ತೆ ಅಧಿಕಾರಕ್ಕೆ ಬರಲು ಮೂರು ಉಪಮುಖ್ಯ ಮಂತ್ರಿಗಳ ಸ್ಥಾನ ಸೃಷ್ಟಿಸುವ ರಾಜಕೀಯ ತಂತ್ರಗಾರಿಕೆ ಹೆಣೆದಿದ್ದಾರೆ.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನ ಸಂದರ್ಭದಲ್ಲೇ ಕರ್ನಾಟಕದಲ್ಲಿ ಚುನಾವಣೆ ನಡೆಸಿ ಪೂರ್ಣ ಪ್ರಮಾಣದ ಸರ್ಕಾರ ತಂದು ಬಿ.ಎಸ್. ಯಡಿಯೂ ರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶ ವರಿಷ್ಠರಿಗಿತ್ತು. ಆದರೆ ಯಡಿಯೂ ರಪ್ಪ ಅವರ ಒತ್ತಾಯಕ್ಕೆ ಮಣಿದು ಸರ್ಕಾರ ರಚನೆ ಮಾಡಿದ ನಂತರ ನಡೆಯುತ್ತಿರುವ ಬೆಳವಣಿಗೆಗಳು ವರಿಷ್ಠರಿಗೆ ಇರಿಸು-ಮುರಿಸು ತಂದಿದೆ. ಯಡಿಯೂರಪ್ಪ ಅವರಿಗೆ ಅಧಿ ಕಾರ ನೀಡಿದಂತಾಯಿತು, ಇನ್ನು ಅವರಿಗೆ ಪರ್ಯಾಯವಾಗಿ ನಾಯಕತ್ವ ಬೆಳೆಸುವ ಉದ್ದೇಶದಿಂದ ಲಕ್ಷ್ಮಣ ಸವದಿ ಹಾಗೂ ಡಾ. ಅಶ್ವತ್ಥನಾರಾಯಣ ಅವರನ್ನು ಪ್ರಯೋ ಗಾರ್ಥವಾಗಿ ಕಣಕ್ಕಿಳಿಸಲಾಗಿದೆ. ಸಚಿವ ಸ್ಥಾನವನ್ನೇ ಅಲಂಕರಿಸದ ಅಶ್ವತ್ಥ ನಾರಾಯಣ ಅವರಿಗೆ ಹಿರಿಯರನ್ನೂ ಕಡೆಗಣಿಸಿ ಉಪ ಮುಖ್ಯಮಂತ್ರಿ ಮಾಡಲಾಗಿದೆ. ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದ ಮತ ಗಳನ್ನು ಪಕ್ಷಕ್ಕೆ ತರುವ ಉದ್ದೇಶ ಇದಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡರೂ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನದ ಜೊತೆಗೆ ಉಪಮುಖ್ಯಮಂತ್ರಿ ಯಾಗಿ ಬಡ್ತಿಯನ್ನೂ ನೀಡಲಾಗಿದೆ. ಲಿಂಗಾಯತ ಸಮುದಾಯಕ್ಕೆ ಸೇರಿದ ಯಡಿಯೂರಪ್ಪ ಗಾಣಿಗ ಉಪಪಂಗಡದವರಾಗಿದ್ದು, ಇದೇ ಪಂಗಡಕ್ಕೆ ಸೇರಿದ ಲಕ್ಷ್ಮಣ ಸವದಿಯನ್ನು ಉಪಮುಖ್ಯಮಂತ್ರಿ ಮಾಡಲಾಗಿದೆ. ಯಡಿಯೂರಪ್ಪ ಇಲ್ಲದಿದ್ದರೂ ವೀರಶೈವ-ಲಿಂಗಾಯತ ಸಮು ದಾಯದೊಂದಿಗೆ ನಾವಿದ್ದೇವೆ ಎಂಬುದನ್ನು ತೋರಿಸುವುದು ಬಿಜೆಪಿ ವರಿಷ್ಠರ ಉದ್ದೇಶ.

ಇದರೊಂದಿಗೆ ದಲಿತ ಎಡಗೈ ಸಮುದಾಯದ ಮತಗಳನ್ನು ಪಕ್ಷದಲ್ಲೇ ಉಳಿಸಿ ಕೊಳ್ಳಲು ಗೋವಿಂದ ಕಾರಜೋಳ ಅವರನ್ನೂ ಉಪಮುಖ್ಯಮಂತ್ರಿ ಮಾಡಲಾಗಿದೆ.

ಕಾಂಗ್ರೆಸ್-ಜೆಡಿಎಸ್‍ನಿಂದ ಅನರ್ಹಗೊಂಡ ಶಾಸಕರ ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥಗೊಂಡ ನಂತರ ನಾಯಕ ಸಮುದಾಯಕ್ಕೆ ಸೇರಿದ ರಮೇಶ್ ಜಾರಕಿಹೊಳಿ ಅವರನ್ನೂ ಸಂಪುಟಕ್ಕೆ ಸೇರಿಸಿಕೊಂಡು ಉಪಮುಖ್ಯಮಂತ್ರಿ ಮಾಡಲಾಗುತ್ತದೆ.
ಇದರಿಂದ ದಲಿತ ಎಡಗೈ, ನಾಯಕ ಹಾಗೂ ಬೋವಿ ಸಮುದಾಯದ ಮತಗಳನ್ನು ಗಟ್ಟಿ ಮಾಡಿಕೊಂಡು ಈ ವರ್ಗಗಳ ಬೆಂಬಲದಿಂದಲೇ 80 ಕ್ಷೇತ್ರಗಳನ್ನು ಗೆಲ್ಲುವ ಲೆಕ್ಕಾಚಾರ ಬಿಜೆಪಿಯದ್ದಾಗಿದೆ. ಮಧ್ಯಂತರ ಚುನಾವಣೆ ಗಮನದಲ್ಲಿಟ್ಟು ಕೊಂಡೇ ಹೊಸ ಪ್ರಯೋಗಗಳನ್ನು ಮಾಡುತ್ತಿರುವ ವರಿಷ್ಠರು, ಸರ್ಕಾರವನ್ನು ಸಂಪೂರ್ಣವಾಗಿ ಹಿಡಿತದಲ್ಲಿ ಇಟ್ಟುಕೊಂಡು ತೆರೆಮರೆಯಲ್ಲಿ ಅಧಿಕಾರ ಚಲಾಯಿಸುತ್ತಿದ್ದಾರೆ.

ವರಿಷ್ಠರ ನಿರ್ಧಾರಗಳಿಗೆ ಲವಲೇಷದಷ್ಟೂ ಇಷ್ಟವಿಲ್ಲದಿದ್ದರೂ ಅನಿವಾರ್ಯವಾಗಿ ಆದೇಶಗಳ ಪಾಲನೆ ಮಾಡಿಕೊಂಡು ಯಡಿಯೂರಪ್ಪ ಆಡಳಿತ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನೂ ಕಠಿಣವಾಗುವ ಲಕ್ಷಣಗಳು ಕಂಡುಬರುತ್ತಿವೆ.
ಯಡಿಯೂರಪ್ಪ ಹೊರತು ಪಡಿಸಿ ಉಳಿದ ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್, ಆರ್. ಅಶೋಕ್, ಕೆ.ಎಸ್. ಈಶ್ವರಪ್ಪ, ಉಮೇಶ್ ಕತ್ತಿ, ಸಿ.ಎಂ. ಉದಾಸಿ, ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಹಲವು ನಾಯಕರು ತಮ್ಮ ಪಕ್ಕದ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯನ್ನೂ ಗೆಲ್ಲಿಸುವಷ್ಟೂ ಶಕ್ತರಲ್ಲ. ಇದುವರೆಗೆ ಅವರಿಗೆ ಪಕ್ಷ ನೀಡಿದ ಅವಕಾಶಗಳನ್ನು ಬಳಸಿಕೊಳ್ಳಲಿಲ್ಲ, ರಾಜ್ಯ ಮಟ್ಟದಲ್ಲಿ ಪಕ್ಷ ಸಂಘಟನೆಯನ್ನೂ ಮಾಡಲಿಲ್ಲ, ಸಮುದಾಯಕ್ಕೂ ನಾಯಕರಾಗಲಿಲ್ಲ, ಕೇವಲ ಕ್ಷೇತ್ರಗಳಿಗಷ್ಟೇ ಸೀಮಿತಗೊಂಡರು. ಇದೇ ಕಾರಣಕ್ಕೆ ಹಿರಿಯರಿಗೆ ಹಿಂಬಡ್ತಿ ನೀಡಿ, ಕಿರಿಯರಿಗೆ ಸರ್ಕಾರದಲ್ಲಿ ಮೊದಲ ಸ್ಥಾನ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಮತ್ತು ರಾಜಕೀಯ ಚಾಣಾಕ್ಷತೆ ಬಳಸಿ ಕರ್ನಾಟಕದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಬೇಕು, ಇನ್ನು ಮುಂದೆ ಇಲ್ಲಿ ಏಕವ್ಯಕ್ತಿ ನಾಯಕತ್ವಕ್ಕೆ ಅವಕಾಶ ನೀಡಬಾರದೆಂದು ಮೂವರು ಉಪಮುಖ್ಯಮಂತ್ರಿಗಳ ಪ್ರಯೋಗ ಮಾಡಿದ್ದಾರೆ.

Translate »