ಅಂಬಾರಿ ಆನೆ ಅರ್ಜುನ ಬಲು ಭಾರ
ಮೈಸೂರು

ಅಂಬಾರಿ ಆನೆ ಅರ್ಜುನ ಬಲು ಭಾರ

August 28, 2019

ಮೈಸೂರು,ಆ.27(ಎಂಟಿವೈ)- ಮೈಸೂರು ಅರಮನೆಯ ಅಂಗಳ ದಲ್ಲಿ ಬೀಡುಬಿಟ್ಟಿರುವ ದಸರಾ ಮಹೋತ್ಸವದ ಮೊದಲ ಹಂತದ ಆರು ಆನೆಗಳಿಗೆ ಮಂಗಳವಾರ ತೂಕ ಮಾಡಿಸಲಾಯಿತು. ಗಜಪಡೆ ನಾಯಕ ಅರ್ಜುನ 5800 ಕೆಜಿ ತೂಗುವ ಮೂಲಕ ತನ್ನ ಭುಜಬಲವನ್ನು ಸಾಬೀತುಪಡಿಸಿದರೆ, ಹೆಣ್ಣಾನೆ ವಿಜಯ 2825 ಕೆಜಿ ತೂಕ ಹೊಂದಿ ಕಡಿಮೆ ತೂಕದ ಆನೆ ಎನಿಸಿತು.

ವಿವಿಧ ಆನೆ ಶಿಬಿರಗಳಿಂದ ಅರಮನೆ ಆವರಣಕ್ಕೆ ಬಂದ ನಂತರ ಮೊದಲ ತಂಡದ ಆನೆಗಳನ್ನು ತೂಕ ಮಾಡಿಸುವ ಕ್ರಮವಿದೆ. ಅದರಂತೆ ಇಂದು ತಾಲೀಮಿಗೆ ಕರೆದೊಯ್ಯುವ ಮುನ್ನ ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಶ್ರೀ ಸಾಯಿ ರಾಮ್ ಅಂಡ್ ಕೊ ಲಾರಿ ವೇಯಿಂಗ್ ಸರ್ವಿಸ್ ಸ್ಟೇಷನ್‍ನಲ್ಲಿ ಡಿಸಿಎಫ್ ಅಲೆಕ್ಸಾಂಡರ್, ಪಶು ವೈದ್ಯ ಡಾ.ಡಿ.ಎಸ್.ನಾಗರಾಜು ಸಮ್ಮುಖದಲ್ಲಿ ಆನೆಗಳ ತೂಕ ಮಾಡಿಸಲಾಯಿತು. ಇಂದು ಬೆಳಿಗ್ಗೆ 7.30ಕ್ಕೆ ಅರಮನೆ ಆವರಣದಲ್ಲಿರುವ ಶ್ರೀ ಕೋಡಿ ಸೋಮೇಶ್ವರ ದೇವಾ ಲಯದ ಮುಂಭಾಗದಲ್ಲಿ ಸೋಮೇಶ್ವರನಿಗೆ ನಮಿಸಿದ 6 ಆನೆಗಳನ್ನು ಬಲರಾಮ ದ್ವಾರದಿಂದ ಹೊರಗೆ ಕರೆತರಲಾಯಿತು. ನಂತರ ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ, ಧÀನ್ವಂತರಿ ರಸ್ತೆ ಮೂಲಕ ವೇಯಿಂಗ್ ಸ್ಟೇಷನ್‍ಗೆ ಕರೆದೊಯ್ದು ಅಧಿಕಾರಿಗಳ ಸಮ್ಮುಖದಲ್ಲಿ ಒಂದಾದ ನಂತರ ಒಂದು ಆನೆಯನ್ನು ತೂಕ ಮಾಡಿಸಲಾಯಿತು.

ತೂಕದಲ್ಲಿ ಅರ್ಜುನನೇ ಮುಂದು: ಗಜಪಡೆಯ ಕ್ಯಾಪ್ಟನ್ ಅರ್ಜುನ 5800 ಕೆಜಿ ತೂಕವಿದ್ದರೆ, ಅಭಿಮನ್ಯು-5145 ಕೆಜಿ, ವರಲಕ್ಷ್ಮಿ-3510 ಕೆಜಿ, ವಿಜಯ-2825 ಕೆ.ಜಿ, ಧನಂಜಯ-4460 ಕೆಜಿ ಹೊಂದಿದ್ದರೆ, ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಈಶ್ವರ 3995 ಕೆಜಿ ತೂಕವಿದೆ. ಅರ್ಜುನ ಸೇರಿದಂತೆ ಆರು ಆನೆಗಳು ಕಳೆದ ಬಾರಿಗಿಂತ 300 ಕೆಜಿಗೂ ಹೆಚ್ಚು ತೂಕ ಹೆಚ್ಚಿಸಿಕೊಂಡಿವೆ.

ಅರ್ಜುನ ಕ್ಯಾಂಪ್‍ನಲ್ಲಿ ನಿರ್ಲಕ್ಷ್ಯಕ್ಕೊಳಗಾಗಿದ್ದಾನೆ. ಅರಣ್ಯ ಇಲಾಖೆ ಸರಿಯಾಗಿ ಪೋಷಣೆ ಮಾಡದೆ ಅಂಬಾರಿ ಆನೆಯನ್ನು ಕಡೆಗಣಿಸಿದೆ ಎಂದು ಹಬ್ಬಿಸಿದ್ದ  ಸುದ್ದಿ ಸುಳ್ಳೆಂದು ಅರ್ಜುನ 5800 ಕೆಜಿ ತೂಗುವ ಮೂಲಕ ಸಾಬೀತುಪಡಿಸಿದೆ.
ನಾಗರಹೊಳೆ ಅಭಯಾರಣ್ಯದ ಬಳ್ಳೆ ವಲಯದಲ್ಲಿರುವ ಅರ್ಜುನ ಕಾಡಿನಲ್ಲಿ ಹುಲುಸಾಗಿ ಬೆಳೆದ ಹುಲ್ಲು, ಸೊಪ್ಪು ತಿಂದು ತನ್ನ ತೂಕ ಮತ್ತು ಶಕ್ತಿ ವೃದ್ಧಿಸಿಕೊಂಡಿದೆ.

ಮೊದಲ ತಾಲೀಮು, ಕೈಮುಗಿದ ಜನತೆ: ತೂಕ ಮಾಡಿದ ನಂತರ ಎಲ್ಲಾ ಆನೆಗಳನ್ನು ಧನ್ವಂತರಿ ರಸ್ತೆಯಿಂದ ಸಯ್ಯಾಜಿರಾವ್ ರಸ್ತೆಗೆ ಕರೆತಂದು ಜಂಬೂಸವಾರಿ ಸಾಗುವ ಮಾರ್ಗದಲ್ಲಿ ತಾಲೀಮು ನಡೆಸಲಾಯಿತು. ಮೊದಲ ದಿನವಾದ ಹಿನ್ನೆಲೆಯಲ್ಲಿ ತಾಲೀಮನ್ನು ಹಳೆ ಆರ್‍ಎಂಸಿ ವೃತ್ತದವರೆಗೆ ಸೀಮಿತಗೊಳಿಸಲಾಯಿತು. ಅಲ್ಲಿ ಕೆಲಕಾಲ ಬಳಿ ಆನೆಗಳಿಗೆ ವಿಶ್ರಾಂತಿ ನೀಡಿದ ಬಳಿಕ ಮತ್ತೆ ಅದೇ ಮಾರ್ಗದಲ್ಲಿ ಅರಮನೆಗೆ ಆನೆಗಳನ್ನು ಕರೆದೊಯ್ಯಲಾಯಿತು. ದಸರಾ ಆನೆಗಳು ರಸ್ತೆಯಲ್ಲಿ ಸಾಲಾಗಿ ಬರುತ್ತಿದ್ದುದ್ದನ್ನು ಗಮನಿಸಿ ರಸ್ತೆ ಬದಿ ವ್ಯಾಪಾರಿಗಳು ಆನೆಗಳಿಗೆ ಹೂವು-ಹಣ್ಣು ನೀಡಿ ಕೈ ಮುಗಿದರು. ಪಾದಚಾರಿಗಳು, ವಾಹನ ಸವಾರರೂ ಭಕ್ತಿಯಿಂದ ನಮಿಸಿದರು. ಕೆಲವರು ತಮ್ಮ ಮಕ್ಕಳನ್ನು ಆನೆ ತೋರಿಸಲು ಕರೆತಂದಿದ್ದರಲ್ಲದೆ, ಮೊಬೈಲ್‍ನಲ್ಲಿ ಆನೆಗಳನ್ನು ಸೆರೆ ಹಿಡಿದು ಸಂಭ್ರಮಿಸಿದರು.

ಸೆಪೆÀ್ಟಂಬರ್ ಮೊದಲ ವಾರ ಎರಡನೇ ತಂಡ: ದಸರಾ ಮಹೋತ್ಸವಕ್ಕೆ ಈ ಬಾರಿ ಒಟ್ಟು 14 ಆನೆಗಳನ್ನು ಕರೆತರಲಾಗುತ್ತಿದೆ. ಈಗಾಗಲೇ ಮೊದಲ ತಂಡದಲ್ಲಿ ಆರು ಆನೆಗಳು ಬಂದಿದ್ದು, ಎರಡನೇ ತಂಡದಲ್ಲಿ ಬಲರಾಮ, ಗೋಪಿ, ವಿಕ್ರಮ, ಜಯಪ್ರಕಾಶ, ರೋಹಿತ, ಕಾವೇರಿ, ದುರ್ಗ ಪರಮೇಶ್ವರಿ ಸೇರಿದಂತೆ ಎಂಟು ಆನೆಗಳನ್ನು ಸೆಪೆÀ್ಟಂಬರ್ ಮೊದಲ ವಾರ ಕರೆತರಲಾಗುತ್ತದೆ.

Translate »