ಇತರರೊಂದಿಗೆ ಸೇರಿಕೊಂಡು ಚಿಕ್ಕಪ್ಪನ ಮನೆಯನ್ನೆ ದೋಚಿದಳು!
ಮೈಸೂರು

ಇತರರೊಂದಿಗೆ ಸೇರಿಕೊಂಡು ಚಿಕ್ಕಪ್ಪನ ಮನೆಯನ್ನೆ ದೋಚಿದಳು!

August 29, 2019

ಮೈಸೂರು, ಆ.28(ಎಂಕೆ)- ಸ್ನೇಹಿತರೊಂದಿಗೆ ಸೇರಿಕೊಂಡು ಚಿಕ್ಕಪ್ಪನ ಮನೆ ಯಲ್ಲಿಯೇ ಕಳವು ಮಾಡಿದ್ದ ಯುವತಿ ಸೇರಿದಂತೆ ಮೂವರು ಖದೀಮರನ್ನು ವಿಜಯನಗರ ಪೊಲೀಸರು ಬಂಧಿಸಿ, 60 ಸಾವಿರ ರೂ. ಮೌಲ್ಯದ 20 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಬೂದನೂರು ನಿವಾಸಿ ಸುಷ್ಮಾ(21), ಮೈಸೂರು ಗಾಯತ್ರಿಪುರಂನ  ಮಂಜುನಾಥ್(22), ಚರಣ್(21) ಬಂಧಿತರು. ಸುಷ್ಮಾ ಎಂಬ ಯುವತಿ, ಹಿನಕಲ್‍ನ ತನ್ನ ಚಿಕ್ಕಪ್ಪÀ ಯೋಗಣ್ಣ ಅವರ ಮನೆಯಲ್ಲಿ ಕೆಲವು ತಿಂಗಳು ವಾಸವಿದ್ದಳು. ಈ ವೇಳೆ ಯೋಗಣ್ಣ ಅವರು ಮನೆಯಿಂದ ಹೋರಹೋಗುವಾಗ ಮನೆಯ ಕೀಲಿ ಕೈಯನ್ನು ಕಿಟಕಿಯ ಮೇಲಿಟ್ಟು ಹೋಗುತ್ತಿದ್ದನ್ನು ಗಮನಿಸಿದ್ದಳು.

ಈಕೆ ಕೆಲವು ತಿಂಗಳ ಹಿಂದೆ ಚಿಕ್ಕಪ್ಪನ ಮನೆಯಿಂದ ಹೋಗಿ ತನ್ನ ಸ್ನೇಹಿತೆ ಯೊಂದಿಗೆ ಸರಸ್ವತಿಪುರಂನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದು, ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಖರ್ಚಿಗೆ ಹಣವಿಲ್ಲದ ಕಾರಣ ಆ.3 ರಂದು ಚಿಕ್ಕಪ್ಪ ಮನೆಗೆ ಬೀಗಹಾಕಿಕೊಂಡು ಕೆಲಸಕ್ಕೆ ತೆರಳಿದ್ದನ್ನು ಗಮನಿಸಿದ ಸುಷ್ಮಾ, ಸ್ನೇಹಿತರೊಂದಿಗೆ ಸೇರಿ ಕಿಟಕಿ ಮೇಲಿದ್ದ ಕೀಲಿಯಿಂದ ಬಾಗಿಲು ತೆರೆದು ಬೀರುವಿನಲ್ಲಿದ್ದ 20ಗ್ರಾಂ ತೂಕದ ಎರಡು ಚಿನ್ನದ ಬಳೆಗಳನ್ನು ಕಳವು ಮಾಡಿ, ಅನುಮಾನ ಬಾರದಂತೆ ಮನೆಯ ಬಾಗಿಲು ಹಾಕಿ ಕೀಲಿಯನ್ನು ಅದೇ ಸ್ಥಳದಲ್ಲಿ ಇಟ್ಟು ಪರಾರಿಯಾಗಿದ್ದಳು.

ಕೆಲಸ ಮುಗಿಸಿ ಮನೆಗೆ ಬಂದ ಯೋಗಣ್ಣ, ಬೀರುವಿನ ಬಾಗಿಲು ತೆಗೆದಾಗ ಚಿನ್ನದ ಬಳೆಗಳು ಇರಲಿಲ್ಲ. ಇದರಿಂದ ಗಾಬರಿಗೊಂಡ ಅವರು ಸುತ್ತಮುತ್ತಲಿನ ನಿವಾಸಿ ಗಳನ್ನು ವಿಚಾರಿಸಿದ್ದಾರೆ. ಈ ವೇಳೆ ನಿವಾಸಿಯೊಬ್ಬರು ಕೆಲವು ತಿಂಗಳ ಹಿಂದೆ ನಿಮ್ಮ ಮನೆಯಲ್ಲಿದ್ದ ಯುವತಿ ಸೇರಿದಂತೆ ಮೂವರು ಬಂದಿದ್ದರು ಎಂದು ತಿಳಿಸಿದ್ದಾರೆ.

ಇದರನ್ವಯ ಯೋಗಣ್ಣ, ಅನುಮಾನಗೊಂಡು ವಿಜಯನಗರ ಪೊಲೀಸ್ ಠಾಣೆಯಲ್ಲಿ ಸುಷ್ಮಾ ವಿರುದ್ಧ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ಸುಷ್ಮಾ ಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತನ್ನ ಸ್ನೇಹಿತರೊಂದಿಗೆ ಸೇರಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Translate »