ಹಾಸನ ಶಾಸಕ ಪ್ರೀತಂ ಗೌಡ ಮನೆ ಮೇಲಿನ ದಾಳಿ ಖಂಡಿಸಿ ಬಿಜೆಪಿ ಪ್ರತಿಭಟನೆ
ಚಾಮರಾಜನಗರ

ಹಾಸನ ಶಾಸಕ ಪ್ರೀತಂ ಗೌಡ ಮನೆ ಮೇಲಿನ ದಾಳಿ ಖಂಡಿಸಿ ಬಿಜೆಪಿ ಪ್ರತಿಭಟನೆ

February 14, 2019

ಚಾಮರಾಜನಗರ: ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡರ ಮನೆ ಹಾಗೂ ಕಾರ್ಯಕರ್ತರ ಮೇಲೆ ಜೆಡಿಎಸ್ ಕಾರ್ಯ ಕರ್ತರು ನಡೆಸಿದ ದಾಳಿ ಖಂಡಿಸಿ ಬಿಜೆಪಿ ಚಾಮರಾಜನಗರ ಕ್ಷೇತ್ರದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಶ್ರೀಚಾಮರಾಜೇಶ್ವರ ಉದ್ಯಾನವನ ಮುಂಭಾಗದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎಂ.ಎಸ್. ಫೃಥ್ವಿರಾಜ್ ಅವರ ನೇತೃತ್ವ ದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ರಸ್ತೆತಡೆ ನಡೆಸಿ, ಜೆಡಿಎಸ್ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜೋಡಿರಸ್ತೆ ಮೂಲಕ ಜಿಲ್ಲಾ ಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಂ.ಎಸ್. ಫೃಥ್ವಿರಾಜ್ ಮಾತನಾಡಿ, ಶಾಸಕ ಪ್ರೀತಂ ಗೌಡರ ಮನೆಯ ಮೇಲೆ ಜೆಡಿಎಸ್ ಗೂಂಡಾಗಳು ಗುಂಪು ಕಟ್ಟಿ ಕೊಂಡು ಹೋಗಿ ಅಲ್ಲಿನ ನಮ್ಮ ಯುವ ಮೋರ್ಚಾದ ರಾಜ್ಯ ಕಾರ್ಯ ಕಾರಣಿ ಸದಸ್ಯ ಹಾಗೂ ಪಕ್ಷದ ಕಾರ್ಯಕರ್ತರ ಮೇಲೆ ಮಾರ ಣಾಂತಿಕ ಹಲ್ಲೆ ಮಾಡಿರುವುದು ಖಂಡನೀಯವಾದದ್ದು ಎಂದರು.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಈ ರೀತಿಯ ಗೂಂಡಾ ಪ್ರವೃತ್ತಿಗೆ ಪ್ರೇರಣೆ ನೀಡು ತ್ತಿರುವುದು ಹೇಯಕೃತ್ಯ. ಹಿಂದೆ ಕಾಂಗ್ರೆಸ್ ಕಾರ್ಯಕರ್ತರು ನಮ್ಮ ವಿರೋಧ ಪಕ್ಷದ ನಾಯಕರ ಮನೆಗೆ ನುಗ್ಗಿ ಹಲ್ಲೆ ನಡೆಸಿದಾಗ ಅವರ ವಿರುದ್ದ ಪ್ರಕರಣ ದಾಖಲಿಸಲಾಗಿತ್ತು. ಆದರೆ ಅವರ ವಿರುದ್ಧ ಯಾವುದೇ ರೀತಿಯ ಸರಿಯಾದ ಕ್ರಮ ತೆಗೆದುಕೊಳ್ಳದೇ ಇರುವುದು ಸರ್ಕಾರ ಈ ರೀತಿಯ ಘಟನೆಗಳು ಮರುಕಳಿಸಲು ಪ್ರೇರಣೆಯಾಗಿದೆ ಎಂಬುದನ್ನು ತೋರಿಸುತ್ತಿದೆ. ಶಾಸಕರ ಮನೆಗೆ ರಕ್ಷಣೆ ಕೊಡದ ಪೊಲೀಸರ ಕರ್ತವ್ಯವನ್ನು ಪ್ರಶ್ನೆ ಮಾಡು ವಂತಾಗಿದೆ. ತಕ್ಷಣ ಮುಖ್ಯಮಂತ್ರಿಗಳು, ಗೃಹ ಸಚಿವರು ಆರೋಪಿ ಗಳನ್ನು ಬಂಧಿಸಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಮುಖ್ಯಮಂತ್ರಿ ಗಳು, ಗೃಹ ಸಚಿವರ ಜವಾಬ್ದಾರಿಯಾಗಿದೆ. ಮುಖ್ಯಮಂತ್ರಿಗಳು ಈ ಹಿಂದೆ ಬಿಜೆಪಿ ವಿರುದ್ದ ದಂಗೆ ಏಳುವಂತೆ ಜನರಿಗೆ ಕರೆ ನೀಡ ಬೇಕಾದೀತು ಎಂದು ಹೇಳಿದರು. ಹಾಸನದಲ್ಲಿ ಜೆಡಿಎಸ್ ಕಾರ್ಯ ಕರ್ತರು ಪ್ರೇರಣೆಗೊಳ್ಳಲು ಇದೇ ಕಾರಣವಾಗಿದೆ. ಹಲ್ಲೆ ಮಾಡಿದ ಗುಂಪುಗಳ ವಿರುದ್ದ ತಕ್ಷಣ ಕ್ರಮಕೈಗೊಳ್ಳದಿದ್ದರೆ ಮುಖ್ಯಮಂತ್ರಿ ಗಳು ಹಾಗೂ ಎಲ್ಲಾ ಸಚಿವರ ನಿವಾಸದ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಫೃಥ್ವರಾಜ್ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪುಟ್ಟ ಅರಸ್, ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯ ದರ್ಶಿಗಳಾದ ಆರ್.ಪುರುಷೋತ್ತಮ, ಎಂ.ಶಿವಕುಮಾರಸ್ವಾಮಿ, ಟೌನ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಕಾರ್ಯಾಲಯ ಕಾರ್ಯದರ್ಶಿ ಚಂದ್ರಶೇಖರ್‍ರಾವ್, ನಗರಸಭಾ ಸದಸ್ಯರಾದ ಸಿ.ಎಂ.ಶಿವರಾಜ್, ರಾಘವೇಂದ್ರ, ಜಿಲ್ಲಾ ಎಸ್‍ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರಾಮಸಮುದ್ರ ನಾಗೇಶ್‍ನಾಯಕ, ಟೌನ್ ಅಧ್ಯಕ್ಷ ಶಿವು, ತಾಪಂ ಮಾಜಿ ಸದಸ್ಯ ಕಾಗಲವಾಡಿ ಶಿವಸ್ವಾಮಿ, ರಮೇಶ್‍ನಾಯಕ, ನಂಜುಂಡನಾಯಕ, ಪದ್ಮರಾಜ್ ಇತರರು ಭಾಗವಹಿಸಿದ್ದರು.

Translate »